Karnataka Bandh: ಇಂದು ಕನ್ನಡಪರ ನಾಯಕರಿಂದ ರಾಜಭವನ ಮುತ್ತಿಗೆ
ಬೆಂಗಳೂರು, ಮಾರ್ಚ್ 03: ಬೆಳಗಾವಿಯಲ್ಲಿ ಮರಾಠಿ ಪುಂಡರ ಪುಂಡಾಟಿಕೆ ವಿರುದ್ಧ ಈಗಾಗಲೇ ಕರ್ನಾಟಕ ಬಂದ್‌ಗೆ ಕರೆ ನೀಡಲಾಗಿದೆ. ಈ ಬಂದ್ ಅಂಗವಾಗಿ 'ಕನ್ನಡ ಒಕ್ಕೂಟ-ಕರ್ನಾಟಕ ರಾಜ್ಯ' ನೇತೃತ್ವದಲ್ಲಿ ಇಂದು ಸೋಮವಾರ (ಮಾರ್ಚ್ 03) ಕನ್ನಡಪರ ಹೋರಾಟಗಾರರು ಸೇರಿದಂತೆ ಅಸಂಖ್ಯಾತ ಕನ್ನಡಿಗರು ಬೆಂಗಳೂರಿನಲ್ಲಿ ರಾಜಭವನ ಮುತ್ತಿಗೆ ಹಾಕಲಿದ್ದಾರೆ. ಈ ಸಂಬಂಧ ರಾಜಭವನ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ನೀಡಲಾಗಿದೆ.
'ಕನ್ನಡ ಒಕ್ಕೂಟ-ಕರ್ನಾಟಕ ರಾಜ್ಯ' ಅಧ್ಯಕ್ಷ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಈಗಾಗಲೇ ಕನ್ನಡಿಗರು, ಕಾರ್ಯಕರ್ತರು ಸಭೆ ಸೇರಿ ನಿರ್ಧರಿಸಿದ್ದಾರೆ. ಅದರ ಭಾಗವಾಗಿ ಇಂದು ಮಧ್ಯಾಹ್ನ 12 ಗಂಟೆಗೆ ಹೊತ್ತಿಗೆ ರಾಜಭವನ ಮೇಲೆ ಮುತ್ತಿಗೆ ಹಾಕಲಿಸದ್ದಾರೆ. ಕನ್ನಡ ಭಾಷೆ, ಗಡಿ, ಜಲ ವಿವಾದ ಪರಿಹಾರಗಳಿಗೆ ಒತ್ತಾಯಿಸಿ ಮುತ್ತಿಗೆ ಹಾಕಲಾಗುತ್ತದೆ ಎಂದು ವಾಟಾಳ್ ನಾಗರಾಜ್ ಅವರು ಮಾಹಿತಿ ನೀಡಿದ್ದಾರೆ.

ಬೆಳಗಾವಿ ರಾಜಕಾರಣಗಳ ರಾಜೀನಾಮೆಗೆ ಆಗ್ರಹ
ಮರಾಠಿಗರ ಪುಂಡಾಟಿಕೆ, ಮರಾಠಿಗರ ಅಟ್ಟಹಾಸ, ಎಂಇಎಸ್ ನಿಷೇಧ ಮಾಡಬೇಕು. ಬೆಳಗಾವಿ ಜಿಲ್ಲೆಯಲ್ಲಿರುವ ಎಲ್ಲ ರಾಜಕಾರಣಿಗಳು ರಾಜೀನಾಮೆ ಕೊಡಬೇಕು. ಕಳಸಾ-ಭಂಡೂರಿ ಮಹಾದಾಯಿ ಯೋಜನೆ ಕೂಡಲೇ ಆರಂಭಿಸಬೇಕು. ಕಲ್ಯಾಣ ಕರ್ನಾಟಕ ಅಭಿವೃದ್ಧಿ ಆಗಬೇಕು. ಕನ್ನಡ ಬಸ್ ನಿರ್ವಾಹಕರ ಮೇಲೆ ಮರಾಠಿಗರ ದಾಳಿ ಸಮಗ್ರ ತನಿಖೆ ಆಗಬೇಕು ಎಂದು ಒತ್ತಾಯಿಸಿ ಈ ಮುತ್ತಿಗೆ ಹಾಕಲಾಗುತ್ತಿದೆ. ಈ ಮೂಲಕ ಕನ್ನಡಿಗರ ಹಲವು ಸಮಸ್ಯೆಗಳ ಪರಿಹಾರಕ್ಕೆ ಸರ್ಕಾರಕ್ಕೆ ಒತ್ತಡ ಹೇರಲಾಗುತ್ತದೆ ಎಂದು ತಿಳಿಸಿದ್ದಾರೆ.
ಇತ್ತೀಚೆಗೆ ಬೆಳಗಾವಿಯಲ್ಲಿ ನಡೆದ ಅಹಿತಕರ ಘಟನೆ, ಕನ್ನಡಿಗರ ಮೇಲಿನ ದೌರ್ಜನ್ಯ ಖಂಡನೀಯವಾದದ್ದು. ಇದಕ್ಕೆ ಕನ್ನಡ ಪರ ಸಂಘಟನೆಗಳು ಮಾತ್ರವಲ್ಲದೇ, ರಾಜ್ಯಾದ್ಯಂತ ವಿವಿಧ ವಲಯಗಳಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಇಂತಹ ಘಟನೆಗಳು ಮರುಕಳಿಸದಂತೆ ತಡೆಯಲು, ಕನ್ನಡಿಗರಿಗೆ ನ್ಯಾಯ ಒದಗಿಸುವ ಉದ್ದೇಶದಿಂದ ಮಾರ್ಚ್ 12ರಂದು ವಾಟಾಳ್ ನಾಗರಾಜ್ ಅವರು 'ಕರ್ನಾಟಕ ಬಂದ್'ಗೆ ಕರೆ ನೀಡಿದ್ದಾರೆ. ಅದರ ಯಶಸ್ವಿಗೆ ಅನೇಕ ಸಂಘಟನೆಗಳು ಕೈ ಜೋಡಿಸಲಿವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ರಾಜಭವನ ಮುತ್ತಿಗೆ: ಬೇಡಿಕೆ ಈಡೇರಿಕೆಗಳ ಪಟ್ಟಿ
* ಎಂಇಎಸ್ ನಿಷೇಧಿಸಬೇಕು.
* ಉತ್ತರ ಕರ್ನಾಟಕ ಅಭಿವೃದ್ಧಿ ಆಗಬೇಕು.
ಕಲ್ಯಾಣ ಕರ್ನಾಟಕ ಅಭಿವೃದ್ಧಿ ಆಗಬೇಕು
* ಬೆಳಗಾವಿ ಉಳಿಸಬೇಕು.
* ಬೆಳಗಾವಿ ಜಿಲ್ಲೆಯಲ್ಲಿರುವ ಎಲ್ಲ ರಾಜಕಾರಣಿಗಳು ರಾಜೀನಾಮೆ ಕೊಡಬೇಕು.
* ಸಾಂಬಾಜಿ ಪ್ರತಿಮೆ ತೆರವುಗೊಳಿಸಬೇಕು.
* ಕನ್ನಡ ಬಸ್ ನಿರ್ವಾಹಕನ ಮೇಲೆ ಹಲ್ಲೆಗೈದವರಿಗೆ ಕಠಿಣ ಶಿಕ್ಷೆ ಆಗಬೇಕು.
* ಕಳಸಾ-ಭಂಡೂರಿ ಮಹಾದಾಯಿ ಯೋಜನೆ ಕೂಡಲೇ ಕಾರ್ಯಗತಗೊಳ್ಳಬೇಕು.
* ಹಿಂದಿ ಹೇರಿಕೆ ಬೇಡವೇ ಬೇಡ.
* ಮಂಗಳೂರು-ಕಾರವಾರ ಬಂದರು ಅಭಿವೃದ್ಧಿ
* ಕರ್ನಾಟಕದಲ್ಲಿ ಪರಭಾಷಾ ದಬ್ಬಾಳಿಕೆ ನಿಲ್ಲಬೇಕು ಸೇರಿದಂತೆ ಅನೇಕ ಬೇಡಿಕೆ ಈಡೇರಿಕೆಗೆ ಆಗ್ರಹಿಸಲಾಗಿದೆ.












Click it and Unblock the Notifications