Bengaluru Water Crisis: ಹಲವು ಬಡಾವಣೆಗಳಲ್ಲಿ BWSSB ಅಧಿಕಾರಿಗಳಿಂದ ಟ್ಯಾಂಕರ್ ನೀರು ವ್ಯವಸ್ಥೆ
ಬೆಂಗಳೂರಿನ ಯಶವಂತಪುರ ವಿಧಾನಸಭಾ ಕ್ಷೇತ್ರದ ಹೇರೋಹಳ್ಳಿ ವಾರ್ಡ್ ವ್ಯಾಪ್ತಿಯ ಕೆಂಪೇಗೌಡ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿರುವ ಸುದ್ದಿ ಅರಿಯುತ್ತಲೇ ಸ್ಥಳಕ್ಕೆ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧಿಕಾರಿಗಳು ಭೇಟಿ ನೀಡಿದ್ದಾರೆ.
ಸ್ಥಳದಲ್ಲಿದ್ದ ಕೆಂಪೇಗೌಡ ಬಡಾವಣೆಯ ನಾಗರಿಕರೊಂದಿಗೆ ಚರ್ಚಿಸಿದ ಬಿಡಬ್ಲ್ಯೂಎಸ್ಎಸ್‌ಬಿ ಅಧಿಕಾರಿಗಳು ಟ್ಯಾಂಕರ್ ಗಳ ಮೂಲಕ ಕುಡಿಯುವ ನೀರನ್ನು ಸರಬರಾಜು ಮಾಡುವುದರ ಮೂಲಕ ಸಮಸ್ಯೆ ಬಗೆಹರಿಸಿದರು. ಇನ್ಮುಂದೆ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳುವುದಾಗಿ ಭರವಸೆ ನೀಡಿದರು.

ಇದರ ಜೊತೆಗೆ ಬಿಡಬ್ಲ್ಯೂಎಸ್ಎಸ್ಬಿ ಮುಖ್ಯ ಎಂಜನಿಯರ್ ಅವರು ತಮ್ಮ ಅಧಿಕಾರಿಗಳ ತಂಡದೊಂದಿಗೆ ಭಾರತಿನಗರಕ್ಕೆ ಭೇಟಿ ನೀಡಿ ಕುಡಿಯುವ ನೀರು ಸರಬರಾಜುವಿನ ವಾಸ್ತವ ಸ್ಥಿತಿಯನ್ನು ಪರಿಶೀಲಿಸಿದರು.
ಅಧಿಕಾರಿಗಳಿಗೆ ಸೂಚನೆ
ನೀರು ಸರಬರಾಜಾಗುವ ಪೈಪ್ ಲೈನ್ ವ್ಯವಸ್ಥೆ ಹಾಗೂ ಸುಗಮ ನೀರು ಸರಬರಾಜು ಮಾಡುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಯಾವುದೇ ರೀತಿಯ ಸಮಸ್ಯೆಯಾಗಂತೆ ನೀರು ಸರಬರಾಜು ಮಾಡುವ ನಿಟ್ಟಿನಲ್ಲಿ ಕ್ರಮವಹಿಸಲು ಸೂಚನೆ ನೀಡಿದರು.
ನಾಯಂಡಹಳ್ಳಿಯ ಪಂತರ್ ಪಾಳ್ಯದ ಅಂಬೇಡ್ಕರ್ ನಗರಕ್ಕೆ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿ ಉದ್ಭವವಾಗಿರುವುದನ್ನು ಅರಿತ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ನಾಗರಿಕರೊಂದಿಗೆ ಚರ್ಚಿಸಿದರು. ಟ್ಯಾಂಕರ್ ಗಳ ಮೂಲಕ ಕುಡಿಯುವ ನೀರಿನ ವ್ಯವಸ್ಥೆಯನ್ನು ಕಲ್ಪಿಸಿದರು.
ಜ್ಞಾನಭಾರತಿ ಬಳಿ ನೀರು ಸರಬರಾಜು ಪೈಪ್ ಗೆ ಹಾನಿ
ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಬಳಿ ಕುಡಿಯುವ ನೀರು ಸರಬರಾಜು ಮಾಡುವ 1000 ಎಂಎಂ ವ್ಯಾಸದ ಪೈಪ್ ಲೈನ್‌ಗೆ ಗುರುವಾರ ಬೆಳಗ್ಗೆ ಹಾನಿಯಾಗಿತ್ತು. ಹಾನಿಯಾಗಿರುವುದು ಗೊತ್ತಾಗುತ್ತಲೇ ಸ್ಥಳಕ್ಕೆ ತೆರಳಿದ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧಿಕಾರಿಗಳು ಕಾರ್ಮಿಕರೊಡಗೂಡಿ ನಿರಂತರ ನಾಲ್ಕುಗಂಟೆಗಳ ಕಾಲ ಸದರಿ ಪೈಪ್ ಅನ್ನು ದುರಸ್ತಿಗೊಳಿಸಿದರು. ಈ ಮೂಲಕ ರಾಜರಾಜೇಶ್ವರಿ ನಗರಕ್ಕೆ ಮಹಾಶಿವರಾತ್ರಿ ಹಬ್ಬದ ಸಂದರ್ಭದಲ್ಲಿ
ನಿರಂತರ ನೀರು ಸರಬರಾಜು ಮಾಡುವಲ್ಲಿ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಂಡರು.












Click it and Unblock the Notifications