BWSSB: ಬೆಂಗಳೂರು ಜಲಮಂಡಳಿ ಅಭಿಯಾನಕ್ಕೆ ಭರ್ಜರಿ ಯಶಸ್ಸು: 9000 ಅರ್ಜಿ ಸ್ವೀಕಾರ
ಬೆಂಗಳೂರು, ಡಿಸೆಂಬರ್ 19: ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWWSB) ಹೊಸದೊಂದು ಅಭಿಯಾನ ಆರಂಭಿಸಿದ್ದು, ಮನೆ ಮನೆಗೆ ಭೇಟಿ ನೀಡುತ್ತಿದೆ. ಕಳೆದ ಮೂರು ವಾರಗಳಿಂದ 110 ಹಳ್ಳಿಗಳ ವ್ಯಾಪ್ತಿಯಲ್ಲಿ ಕೈಗೊಳ್ಳಲಾದ ಮನೆ ಮನೆಗೂ 'ಕಾವೇರಿ - ಸಂಪರ್ಕ ಅಭಿಯಾನ'ಕ್ಕೆ ಅಭೂತಪೂರ್ವ ಸ್ಪಂದನೆ ದೊರೆತಿದೆ ಎಂದು ಜಲಮಂಡಳಿಯ ಅಧ್ಯಕ್ಷ ಡಾ.ರಾಮ್ ಪ್ರಸಾತ್ ಮನೋಹರ್ ಗುರುವಾರ ತಿಳಿಸಿದರು.
ರಾಜ್ಯದ ಉಪಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ಅವರ ನಿರ್ದೇಶನದಂತೆ ಸರಳೀಕೃತ ವಿಧಾನದ ಮೂಲಕ ಅರ್ಜಿ ಸಲ್ಲಿಕೆಯ ಸಂಪರ್ಕ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಈವರೆಗೆ ಹೊಸ ಹಳ್ಳಿಗಳಿಂದ 9 ಸಾವಿರ ಅರ್ಜಿಗಳು ಸಲ್ಲಿಕೆಯಾಗಿವೆ ಎಂದರು.

ಜಲಮಂಡಳಿಯ ವತಿಯಿಂದ ವಿವಿಧ ವಲಯಗಳಲ್ಲಿ ವಿಶೇಷ ಸಂಪರ್ಕ ಅಭಿಯಾನ ಕ್ಯಾಂಪ್‌ಗಳನ್ನು ಮಾಡುವ ಮೂಲಕ, ಜನರಲ್ಲಿ ಕಾವೇರಿ ನೀರಿನ ಬಗ್ಗೆ ಅರಿವು ಮೂಡಿಸಿ ಸ್ಥಳದಲ್ಲೇ, ಸಂಪರ್ಕಕ್ಕೆ ಅರ್ಜಿಯನ್ನು ಸ್ವೀಕರಿಸಲಾಗುತ್ತಿದೆ. ನಂತರ ನಿಯಮಾನುಸಾರ ಪಾರದರ್ಶಕವಾಗಿ ಪರಿಶೀಲಿಸಿ ಅರ್ಹರಿಗೆ ಸ್ಥಳದಲ್ಲಿಯೇ ಆದ್ಯತೆ ಮೇರೆಗೆ ಸಂಪರ್ಕ ನೀಡಲು ಕ್ರಮ ವಹಿಸಲಾಗಿದೆ. ಹೊಸ ಸಂಪರ್ಕಗಳಿಗೆ ನೀರಿನ ಸರಬರಾಜು ಮಾಡಲಾಗುತ್ತಿದೆ.
ಅರ್ಜಿದಾರರಿಗೆ ಶೀಘ್ರವೇ ಕಾವೇರಿ ನೀರು ಸಂಪರ್ಕ
ಈ ಅಭಿಯಾನದ ಹಿನ್ನಲೆಯಲ್ಲಿ ಜನರು ಮನೆಬಾಗಿಲಿಗೆ ಬೆಂಗಳೂರು ಜಲಮಂಡಳಿ ಭೇಟಿ ನೀಡುವ ಮೂಲಕ ಅಗತ್ಯ ಮಾಹಿತಿಗಳನ್ನು ನೀಡಿದ್ದಾರೆ. ಹಲವಾರು ಪ್ರಕರಣಗಳಲ್ಲಿ ಸ್ವತಃ ಜಲಮಂಡಳಿಯ ಸಿಬ್ಬಂದಿಗಳೇ ಮನೆಯಿಂದ ಅರ್ಜಿಯನ್ನು ಸ್ವೀಕರಿಸಿ ಜನರಿಗೆ ಸಂಪರ್ಕ ದೊರೆಯುವಂತೆ ಕ್ರಮ ವಹಿಸಿದ್ದನ್ನು ಶ್ಲಾಘಿಸಿದರು.
ಇದೇ ನೀರು ಸಂಪರ್ಕ, ಅಭಿಯಾನ, ಅರಿವು ಮುಡಿಸುವ ಪ್ರಕ್ರಿಯೆಯನ್ನು ಮುಂದುವರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. 110 ಹಳ್ಳಿಗಳ ವ್ಯಾಪ್ತಿಯಲ್ಲಿ ಮುಂಬರುವ ಬೇಸಿಗೆ ಕಾಲದಲ್ಲಿ ನೀರಿನ ತೊಂದರೆಗೆ ಜನರು ಸಿಲುಕಬಾರದು, ಇದರ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವಂತೆಯೂ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ನೌಕರರಿಗೆ ತಿಳಿಸಿದ್ದೇವೆ ಎಂದರು.
ಕುಡಿಯುವ ಕಾವೇರಿ ನೀರಿನ ಸಂಪರ್ಕ ನೀಡುವ ಪ್ರಕ್ರಿಯೆಯ ಬಗ್ಗೆ ಕೆಲವು ದೂರುಗಳು ಬಂದ ನಂತರ, ಅಕ್ಟೋಬರ್ 26 ರಂದು ನಿಯಮಬಾಹಿರವಾಗಿ ಹಣ ಕೇಳುವವರ ವಿರುದ್ದ ಕ್ರಮ ಕೈಗೊಳ್ಳುವ ನಿರ್ದ್ಯಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿಯೂ ಎಚ್ಚರಿಕೆ ನೀಡಲಾಗಿತ್ತು. ವಿಜಿಲೆನ್ಸ್ ಸೆಲ್ ರಚಿಸಲಾಗಿತ್ತು.
ಬೆಂಗಳೂರಿನಲ್ಲಿ ವಲಯವಾರು ಸಂಪರ್ಕ ಅಭಿಯಾನ ಕೈಗೊಳ್ಳಲಾಗಿತ್ತು. ಅಧಿಕಾರಿಗಳೇ ಜನರ ಮನೆಬಾಗಿಲಿಗೆ ತೆರಳಿ, ಹಲವಾರು ಸ್ಥಳಗಳಲ್ಲಿ ಸಂಪರ್ಕ ಅಭಿಯಾನ ಶಿಬಿರ ನಡೆಸುತ್ತಿದ್ದಾರೆ. ಇದರಿಂದ ಜನರು ಸುಲಭವಾಗಿ ಸಂಪರ್ಕ ಪಡೆಯಲು ಅನುವು ಮಾಡಿಕೊಡಲಾಗಿದೆ ಎಂದು ಅವರು ವಿವರಿಸಿದರು.
ಅಭಿಯಾನಕ್ಕೆ ವ್ಯಾಪಕ ಯಶಸ್ಸು
ನೀರಿನ ಸಂಪರ್ಕ ಪಡೆಯುವ ಗ್ರಾಹಕರಿಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆಯನ್ನು ಸರಳೀಕರಣಗೊಳಿಸಲಾಗಿದೆ. ಜನರು ಮನೆಯಲ್ಲಿಯೇ ಕುಳಿತು ಅರ್ಜಿ ಸಲ್ಲಿಸಲು ಅನುವು ಮಾಡಿಕೊಡಲಾಗಿದೆ. ಹೀಗೆ ಹಲವಾರು ಸರಳೀಕರಣ ಕ್ರಮಗಳನ್ನು ಕೈಗೊಳ್ಳಲಾಗಿದೆ. ಮನೆಬಾಗಿಲಿಗೆ ತೆರಳಿ ಜಲಮಂಡಳಿ ಮಾಡಿದ ಅಭಿಯಾನಕ್ಕೆ ವ್ಯಾಪಕ ಯಶಸ್ಸು ದೊರಕಿದೆ ಎಂದು ತಿಳಿಸಿದರು.
ಯಾರಾದರೂ ಕಾವೇರಿ ನೀರಿನ ಸಂಪರ್ಕ ಸಮಸ್ಯೆಗಳು ಪಡೆಯಲು ಸಮಸ್ಯೆ ಎದುರಿಸುತ್ತಿದ್ದಲ್ಲಿ ಮತ್ತು ಸಮಸ್ಯೆಗಳು ಉಂಟಾದಲ್ಲಿ ಮಂಡಳಿಯ ವಿಜಿಲೆನ್ಸ್‌ಗೆ ದೂರು ನೀಡಬಹುದಾಗಿದೆ. ಸದರಿ ದೂರುಗಳನ್ನು ಪರಿಶೀಲಿಸಲಾಗುವುದು. ಅವುಗಳಲ್ಲಿ ಸತ್ಯಾಂಶವಿದ್ದಲ್ಲಿ ತಪ್ಪಿತಸ್ಥ ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ. ಅವರ ಮೇಲೆ ನಿಯಮಾನುಸಾರ ಕಟ್ಟುನಿಟ್ಟಿನ ಕ್ರಮಗಳನ್ನ ಮಂಡಳಿ ಕೈಗೊಳ್ಳಲಿದೆ ಎಂದು ಅಧ್ಯಕ್ಷರು ತಿಳಿಸಿದ್ದಾರೆ.












Click it and Unblock the Notifications