ಕೆಐಎಎಲ್ ಗೆ ಬಾಂಬ್ ಬೆದರಿಕೆ, ಬಿಗಿ ಭದ್ರತೆ
ಬೆಂಗಳೂರು, ಜ.28 : ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎಎಲ್)ಅನ್ನು ಬಾಂಬ್ ಇಟ್ಟು ಸ್ಫೋಟಿಸುವುದಾಗಿ ದುಷ್ಕರ್ಮಿಗಳು ಇ ಮೇಲ್ ಮೂಲಕ ಬೆದರಿಕೆ ಹಾಕಿದ್ದಾರೆ. ಆದ್ದರಿಂದ ವಿಮಾನ ನಿಲ್ದಾಣದಲ್ಲಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ.
ಸೋಮವಾರ ಸಂಜೆ ವಿಮಾನ ನಿಲ್ದಾಣದ ಮ್ಯಾನೇಜರ್ ಅವರಿಗೆ ಅಪರಿಚಿತ ವ್ಯಕ್ತಿಯಿಂದ ಈ ಬೆದರಿಕೆಯ ಇಮೇಲ್ ಸಂದೇಶ ಬಂದಿದೆ. ಇ ಮೇಲ್ ನಲ್ಲಿ ವಿಮಾನ ನಿಲ್ದಾಣವನ್ನು ಬಾಂಬ್ ಇಟ್ಟು ಸ್ಫೋಟಿಸುತ್ತೇನೆ ಎಂದು ವ್ಯಕ್ತಿ ಬೆದರಿಕೆ ಹಾಕಿದ್ದಾನೆ.

ಅನಾಮಧೇಯ ಇ ಮೇಲ್ ಹಿನ್ನಲೆಯಲ್ಲಿ ವಿಮಾನ ನಿಲ್ದಾಣಕ್ಕೆ ಬಿಗಿ ಭದ್ರತೆ ಒದಗಿಸಲಾಗಿದೆ. ಕೆಐಎಎಲ್‌ನ ರಕ್ಷಣಾ ಸಿಬ್ಬಂದಿ ನಿಲ್ದಾಣಕ್ಕೆ ಬರುವ ವಾಹನಗಳನ್ನು ಮತ್ತು ಪ್ರಯಾಣಿಕರನ್ನು ತೀವ್ರ ತಪಾಸಣೆ ಒಳಪಡಿಸುತ್ತಿದ್ದಾರೆ. [ವಿಮಾನ ನಿಲ್ದಾಣಕ್ಕೆ ಸಿಗ್ನಲ್ ಫ್ರೀ ಮೇಲ್ಸೇತುವೆ]
ಇದೊಂದು ಅನಾಮಧೇಯ ಇ ಮೇಲ್ ಆಗಿದ್ದು, ಇದನ್ನು ಯಾರು ಕಳಿಸಿದ್ದಾರೆ ಎಂಬ ಬಗ್ಗೆ ಹುಡುಕಾಟ ನಡೆಸಿದ್ದೇವೆ ಎಂದು ಕೆಐಎಎಲ್‌ನ ಪೊಲೀಸ್ ಠಾಣೆ ಪೊಲೀಸರು ಹೇಳಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಅವರು ಆರೋಪಿಗಾಗಿ ಹುಡುಕಾಟ ನಡೆಸಿದ್ದಾರೆ.
ಕೆಲವು ದಿನಗಳ ಹಿಂದೆ ಬೆಂಗಳೂರು ಪೊಲೀಸರ ವಶದಲ್ಲಿರುವ ಇಂಡಿಯನ್ ಮುಜಾಹಿದ್ದೀನ್ ಉಗ್ರ ಯಾಸಿನ್ ಭಟ್ಕಳ್ ಬಿಡಿಸಿಕೊಳ್ಳಲು ಉಗ್ರಗಾಮಿಗಳು ವಿಮಾನ ಅಪಹರಣದ ಸಂಚು ರೂಪಿಸಿದ್ದಾರೆ ಎಂದು ಕೇಂದ್ರ ಗುಪ್ತಚರ ಇಲಾಖೆ ಮಾಹಿತಿ ನೀಡಿತ್ತು. ಈ ಹಿನ್ನಲೆಯಲ್ಲಿ ವಿಮಾನ ನಿಲ್ದಾಣಕ್ಕೆ ಅಗತ್ಯ ಭದ್ರತೆ ಒದಗಿಸಲಾಗಿತ್ತು. ಸದ್ಯ ಅನಾಮಿಕ ಇ ಮೇಲ್ ಬಂದಿದ್ದು ನಿಲ್ದಾಣಕ್ಕೆ ಬೆದರಿಕೆ ವೊಡ್ಡಲಾಗಿದೆ.












Click it and Unblock the Notifications