Namma Metro: ಹಳದಿ ಮಾರ್ಗಕ್ಕೆ ಬೃಹತ್ ಉದ್ಘಾಟನೆ ಬೇಡ! ದಿನಾಂಕ ಫೈನಲ್ ಮಾಡಿ
ಬೆಂಗಳೂರು, ಏಪ್ರಿಲ್ 20: ಬೆಂಗಳೂರು ನಮ್ಮ ಮೆಟ್ರೋ ರೈಲು ನಿಗಮದ (BMRCL) ವಿರುದ್ಧ ಸಾರ್ವಜನಿಕರು ಆಕ್ರೋಶ ಮತ್ತು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ದಿನದಿಂದ ದಿನಕ್ಕೆ ಪ್ರಯಾಣಿಕರ ಸಂಖ್ಯೆಯಲ್ಲಿ ಜಿಗಿತ ಕಂಡು ಬಂದಿದೆ. ಏಪ್ರಿಲ್ 17ರಂದು 09 ಲಕ್ಷಕ್ಕೂ ಹೆಚ್ಚು ಜನ ಪ್ರಯಾಣಿಸಿದ್ದಾರೆ. ಇದರಿಂದ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತಿದೆ ಎಂಬುದು ಖಚಿತವಾಗಿದೆ. ಹೀಗಿದ್ದರು ಹಳದಿ ಮಾರ್ಗ ತೆರೆಯಲು ನಿಗದಿತ ದಿನಾಂಕ ಫಿಕ್ಸ್ ಮಾಡಲು ಅಧಿಕಾರಿಗಳಿಗೆ ಆಗುತ್ತಿಲ್ಲ. ಬೃಹತ್ ಉದ್ಘಾಟನೆ ಕಾರ್ಯಕ್ರಮದೊಂದಿಗೆ ಡ್ರೈವರ್‌ಲೆಸ್ ರೈಲು ಸೇವೆಗೆ ಚಾಲನೆ ನೀಡಲು ನೀವು ಪ್ಲಾನ್ ಮಾಡಿದರೆ ಆ ಯೋಚನೆ ಬಿಟ್ಟು ಬಿಡಿ ಎಂದು ಆಗ್ರಹಿಸಲಾಗಿದೆ.
ನಮ್ಮ ಮೆಟ್ರೋ ರೈಲು ಮಾರ್ಗದ ಎಲ್ಲ ಕೆಲಸ ಪೂರ್ಣಗೊಂಡು ವರ್ಷಗಳು ಕಳೆದಿವೆ. ಇನ್ನೂ ಸಹ ರೈಲುಗಳು ಸೇವೆ ಆರಂಭವಾಗಿಲ್ಲ. ರೈಲು ಪೂರೈಕೆ ಕೊರತೆ ಇದೆ ಎನ್ನುತ್ತಲೇ ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಕಾರ್ಯಾಚರಣೆ ಮಾಡದೇ ವರ್ಷಗಳನ್ನು ಕಳೆಯುತ್ತಿದೆ. ಎಲೆಕ್ಟ್ರಾನಿಕ್ ಸಿಟಿ ಮೆಟ್ರೋ ಹಳದಿ ಮಾರ್ಗಕ್ಕಾಗಿ ಜನರು ಬರೀ ತಿಂಗಳುಗಳಿಂದ ಮಾತ್ರವಲ್ಲದೇ ವರ್ಷಗಳಿಂದ ಕಾಯುತ್ತಿದ್ದಾರೆ. ಉದ್ಘಾಟನೆ ವಿಚಾರವಾಗಿ ಸಾಮಾಜಿಕ ಜಾಲತಾಣದಲ್ಲಿ ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದಾರೆ.

ನಿಖರ, ಅಧಿಕೃತ ದಿನಾಂಕ ಘೋಷಿಸಿ..
ಸಾಮಾಜಿಕ ಜಾಲತಾಣವಾದ ಎಕ್ಸ್ ಖಾತೆಯಲ್ಲಿ @WF_Watcher ಪೋಸ್ಟ್ ಹಂಚಿಕೊಂಡಿದೆ. ಬಿಎಂಆರ್‌ಸಿಎಲ್ ಲಭ್ಯವಿರುವ ರೈಲು ಸೆಟ್‌ಗಳೊಂದಿಗೆ ಪ್ರಾಯೋಗಿಕ ಸಂಚಾರ ನಡೆಸುತ್ತಿದೆ. ರೈಲುಗಳನ್ನು ಮೆಟ್ರೋ ರೈಲು ಸುರಕ್ಷತಾ ಆಯುಕ್ತರು (CMRS) ಪರಿಶೀಲನೆ ಮುಂದುವರಿಸಿದ್ದಾರೆ. ಇದೆಲ್ಲ ಪ್ರಕ್ರಿಯೆ ಮಧ್ಯೆ ಹಳದಿ ಮಾರ್ಗ ಯಾವಾಗ ಕಾರ್ಯಾಚರಣೆ ಆರಂಭಿಸುತ್ತದೆ ಎಂಬ ನಿರ್ದಿಷ್ಟ ದಿನಾಂಕವನ್ನು ನೀವು ಜನರಿಗೆ ತಿಳಿಸಬೇಕು. ಈ ಬಗ್ಗೆ ಸ್ಪಷ್ಟ ಮತ್ತು ಅಧಿಕೃತ ಹೇಳಿಕೆ ನೀಡಿದರೆ ಹೆಚ್ಚಿನ ಪ್ರಯೋಜನವಾಗಲಿದೆ ಎಂದು ಆಗ್ರಹಿಸಿದೆ.
ಉದ್ಘಾಟನೆ ಕಾರ್ಯಕ್ರಮ ರೂಪಿಸಿದರೆ ಮತ್ತೆ ವಿಳಂಬ?
ನಮ್ಮ ಮೆಟ್ರೋ ಅಧಿಕಾರಿಗಳು ದೊಡ್ಡದೊಂದು ಉದ್ಘಾಟನೆ ಕಾರ್ಯಕ್ರಮ ಮಾಡಲು ಪ್ಲಾನ್ ಮಾಡಿಕೊಂಡಂತಿದೆ. ಈ ಉದ್ಘಾಟನೆಗೆ ಹೊಂದಾಣಿಕೆ ಮಾಡಲು ಮತ್ತಷ್ಟು ವಿಳಂಬ ಮಾಡಲಾಗುತ್ತಿದ್ದರೆ, ದಯವಿಟ್ಟು ಅಂತಹ ಹುಚ್ಚು ಯೋಜನೆಗಳನ್ನು ಕೈಬಿಟ್ಟು ಬಿಡಿದೆ. ಏಕೆಂದರೆ ದೊಡ್ಡ ಉದ್ಘಾಟನೆ ಕಾರ್ಯಕ್ರಮ ಆಯೋಜಿಸಿಯೇ ನೀವು ಈ ಮಾರ್ಗ ತೆರೆಯಲಿದ್ದರೆ, ಈ ಯೋಜನೆ ವರ್ಷಗಳ ಕಾಲ ಮತ್ತೆ ವಿಳಂಬವಾಗುವ ಸಾಧ್ಯತೆ ಇದೆ. ಅದರಿಂದ ಮತ್ತಷ್ಟು ನಿರಾಶೆಯಾಗುತ್ತದೆ. ಪ್ರಯಾಣಿಕರು ಈಗಾಗಲೇ ನಮ್ಮ ಮೆಟ್ರೋ ಹಳದಿ ಮಾರ್ಗ ಜನರ ಸೇವೆ ಲಭ್ಯವಾಗುವ ವಿಚಾರದಲ್ಲಿ ಪದೇ ಪದೆ ಮೋಸ ಹೋಗಿದ್ದಾರೆ. ಅಂದರೆ ಅಧಿಕಾರಿಗಳು ಜನರ ದಾರಿ ತಪ್ಪಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಜನರಿಗೆ ಮತ್ತೆ ಮೋಸ ಮಾಡಬೇಡಿ!
ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ಹೆಚ್ಚಾಗುತ್ತಿದೆ. ಉತ್ತಮ ರಸ್ತೆಗಳು ಇಲ್ಲ. ಟ್ರಾಫಿಕ್ ಸಮಸ್ಯೆ ಮಧ್ಯೆ ಪಾದಚಾರಿ ಮಾರ್ಗಗಳು, ಒಳಚರಂಡಿ ಮೂಲಕ ಸೌಕರ್ಯಗಳ ಸುಧಾರಣೆಗೆ ಸೂಕ್ತ ಅಭಿವೃದ್ಧಿ ಯೋಜನೆಗಳು ಘೋಷಣೆ ಆಗುತ್ತಿಲ್ಲ. ರಸ್ತೆ ದುರಸ್ತಿ ಆಗದೇ ಹದಗೆಡುತ್ತಲೆ ಇವೆ. ಈ ಕಾರಣದಿಂದ ಜನರು ಮೆಟ್ರೋ ಸಂಚಾರ ಉತ್ತಮವೆಂದು ಭಾವಿಸಿದ್ದಾರೆ. ಹೀಗಾಗಿ ಲಕ್ಷಾಂತರ ಜನರು ಕಾತರರಿಂದ ಕಾಯುತ್ತಿರುವ ಜನರಿಗಾಗಾಗಿ, ಆರ್‌ವಿ ರಸ್ತೆ-ಬೊಮ್ಮಸಂದ್ರವರೆಗಿನ ಸುಮಾರು 19 ಕಿಲೋ ಮೀಟರ್ ಮಾರ್ಗದ ಪ್ರಯಾಣಿಕರಿಗಾಗಿ ಈ ಮಾರ್ಗ ಬೇಗ ತೆರೆಯಬೇಕಿದೆ. ಈ ಬಾರಿಯಾದರೂ ಜನರ ನಂಬಿಕೆ ಉಳಿಸಿಕೊಳ್ಳಬೇಕು. ಮತ್ತೆ ಮುಂದೂಡುವ, ವಿಳಂಬ ಮಾಡುವ ಪ್ರಯತ್ನ ಮಾಡಬೇಡಿ ಎಂದು ಒತ್ತಾಯಿಸಲಾಗಿದೆ.












Click it and Unblock the Notifications