ಅಣ್ಣನ ರೂಪದಲ್ಲಿ ನಾನು ಕಂಡ ದರ್ಶನ್..: ನಟನ ಪರ ಪೋಸ್ಟ್ ಹಂಚಿಕೊಂಡ ಬಿಗ್‌ಬಾಸ್ ಇಶಾನಿ
ಬೆಂಗಳೂರು, ಜೂನ್ 20: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಕನ್ನಡ ಚಿತ್ರರಂಗದ ನಟ ದರ್ಶನ್ ಬಂಧನವಾಗಿದ್ದು, ಕಳೆದ ಹತ್ತು ದಿನಗಳಿಂದ ನಟ ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಪ್ರಕರಣದ ಎ-೧ ಆರೋಪಿ ಪವಿತ್ರಾ ಗೌಡ ಸೇರಿದಂತೆ ಇಂದು ಎಲ್ಲಾ ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಗುತ್ತಿದೆ.
ದರ್ಶನ್ ಬಂಧನ ಪ್ರಕರಣ ಚಿತ್ರರಂಗದಲ್ಲಿ ಸಂಚಲನ ಮೂಡಿಸಿದ್ದು, ನಟನ ಬಂಧನವಾಗಿ ವಾರಗಳು ಕಳೆದ ಬಳಿಕ ಕೆಲ ನಟ-ನಟಿಯರು ಈ ಬಗ್ಗೆ ಪ್ರತಿಕ್ರಿಯಿಸುತ್ತಿದ್ದಾರೆ. ಇದೀಗ ಬಿಗ್‌ಬಾಸ್ ಸ್ಪರ್ಧಿ ಇಶಾನಿ ದರ್ಶನ್ ಜೊತೆಗಿನ ಫೋಟೋ ಹಂಚಿಕೊಂಡು, ದರ್ಶನ್ ಸರ್ ತಪ್ಪು ಮಾಡಿದ್ದರೆ ಅವರಿಗೆ ಶಿಕ್ಷೆಯಾಗಲಿ ಎಂದಿದ್ದಾರೆ.

ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಇಶಾನಿ, ನಿಜಕ್ಕೂ ಇದು ಅಘಾತಕಾರಿ ಸುದ್ದಿ. ಒಬ್ಬ ಅಣ್ಣನ ರೂಪದಲ್ಲಿ ನಾನು ಕಂಡ ದರ್ಶನ್ ಸರ್ ನಿಜಕ್ಕೂ ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎಂದು ಕೇಳಿದಾಗ ನಂಬಲು ಸಾಧ್ಯವಾಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ತನ್ನನ್ನು ನಂಬಿದ ಒಂದು ಹೆಣ್ಣು ಜೀವದ ಶ್ರೇಯೋಭಿಲಾಷಿಯಾಗಿ ಅವರು ಮಾಡಿದ ಕೆಲಸ ಸೂಕ್ತವೇ ಎಂದು ಅನಿಸಿದರೂ ಸಹ, ಕಾನೂನನ್ನು ಕೈಗೆತ್ತಿಕೊಳ್ಳುವುದಕ್ಕೆ ಸಂವಿಧಾನದ ಅಡಿಯಲ್ಲಿ ಬದುಕುತ್ತಿರುವ ನಮಗಾರಿಗೂ ಸಹ ಅಧಿಕಾರವಿಲ್ಲ. ದರ್ಶನ್ ಸರ್ ತಪ್ಪು ಮಾಡಿದ್ದರೆ ಅವರಿಗೆ ಶಿಕ್ಷೆಯಾಗಲಿ, ಆದರೆ ಅದುವರೆಗೂ ಇಲ್ಲ ಸಲ್ಲದ ಸುದ್ದಿಗಳನ್ನು ಹರಡಿ ಅವರ ತೇಜೋವಧೆ ಮಾಡುವುದು ಸರಿಯಲ್ಲ. ಕಾಲಾಯ ತಸ್ಮೈ ನಮಃ ಎಂದು ಇಶಾನಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ನಟ ದರ್ಶನ್ ಸರ್ ನನಗೆ ಗುರು ಸಮಾನರು-ರಚಿತಾ ರಾಮ್
ಇನ್ನು ಈ ಹಿಂದೆ ನಟಿ ರಚಿತಾ ರಾಮ್ ಕೂಡ ದರ್ಶನ್ ಬಗ್ಗೆ ಪೋಸ್ಟ್ ಹಂಚಿಕೊಂಡಿದ್ದರು. 'ನಮಸ್ಕಾರ ಈ ಹೇಳಿಕೆಯನ್ನು ನಾನು ನಟಿಯಾಗಿ ಅಲ್ಲ, ಸಾಮಾನ್ಯ ಪ್ರಜೆಯಾಗಿ ಬರೆಯುತ್ತಿದ್ದೇನೆ. ಇತ್ತೀಚಿಗೆ ನಡೆದ ಪ್ರಕರಣದ ಬಗ್ಗೆ ನನ್ನ ಮಾತು. ಮೊದಲನೆಯದಾಗಿ ರೇಣುಕಾಸ್ವಾಮಿ ಅವರ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಕುಟುಂಬಕ್ಕೆ ಭಗವಂತ ಧೈರ್ಯ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥನೆ ಮಾಡುತ್ತೇನೆ. ಈ ಹತ್ಯೆಗೆ ಕಾನೂನಾತ್ಮಕವಾಗಿ ನ್ಯಾಯ ಸಿಗುತ್ತದೆಂಬ ಭರವಸೆ ನನಗಿದೆ.
ನನ್ನನ್ನು ಚಿತ್ರರಂಗಕ್ಕೆ ಪರಿಚಯಿಸಿದ ನಟ ದರ್ಶನ್ ಸರ್ ನನಗೆ ಗುರು ಸಮಾನರು. ನನ್ನ ಜೀವನದ ತಪ್ಪುಗಳನ್ನು ತಿದ್ದಿ ಮಾರ್ಗದರ್ಶನ ನೀಡಿದಂತಹ ವ್ಯಕ್ತಿ ಇಂತಹ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನುವುದು ನಂಬಲು ಸ್ವಲ್ಪ ಕಷ್ಟವಾಗುತ್ತಿದೆ. ಏನಿದ್ದರೂ ಸತ್ಯ ಪೊಲೀಸರ ತನಿಖೆಯಿಂದ ನಮ್ಮ ಮುಂದೆ ಬರಲಿದೆ ಎನ್ನುವುದೆ ನನ್ನ ನಂಬಿಕೆ. ನನ್ನ ಮಾಧ್ಯಮ ಮಿತ್ರರು ಈ ಕೇಸ್‌ನ ವರದಿಯಲ್ಲಿ ಪಾರದರ್ಶಕವಾಗಿರುತ್ತೀರಿ ಮತ್ತು ನಿಷ್ಪಕ್ಷವಾಗಿ ಕೆಲಸ ಮಾಡುತ್ತೀರಿ ಎಂದು ಆಶಿಸುತ್ತೇನೆ. ಎಂದು ಹೇಳಿದ್ದಾರೆ ರಚಿತಾ ರಾಮ್ ಪೋಸ್ಟ್ ಹಂಚಿಕೊಂಡಿದ್ದರು.












Click it and Unblock the Notifications