Rameswaram Cafe bomber: ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಇಟ್ಟವನ ಗುರುತು ಪತ್ತೆ
ಬೆಂಗಳೂರು ಮಾರ್ಚ್ 24: ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಇಟ್ಟವನ ಗುರುತು ಪತ್ತೆಯಾಗಿದೆ. ಮಾರ್ಚ್ ಒಂದರಂದು ನಗರದ ಪ್ರತಿಷ್ಠಿತ ಕೆಫೆಯಲ್ಲಿ ಬಾಂಬ್ ಇಟ್ಟದ್ದು ತೀರ್ಥಹಳ್ಳಿಯ ಮುಸಾಬೀರ್ ಎಂದು ತಿಳಿದು ಬಂದಿದೆ.
ಹೌದು..... ರಾಮೇಶ್ವರಂ ಕೆಫೆ ಸಿಸಿಟಿವಿ ಕ್ಯಾಮರಾ ಹಾಗೂ ಬಸ್ ಇತರ ಸ್ಥಳಗಳಲ್ಲಿರು ಸಿಸಿಕ್ಯಾಮರಾದಲ್ಲಿರುವ ದೃಶ್ಯಗಳನ್ನು ಆಧರಿಸಿ ಆರೋಪಿಯ ಗುರುತು ಪತ್ತೆ ಮಾಡಲಾಗಿದೆ. 800 ಸಿಸಿ ಕ್ಯಾಮರಾಗಳಲ್ಲಿ ದೃಶ್ಯಗಳನ್ನು ಪರಿಶೀಲಿಸಿದ ಬಳಿಕ ಶಂಕಿತನಿಗೂ ಕಳೆದ ಮೂರು ವರ್ಷಗಳಿಂದ ತಲೆಮರೆಸಿಕೊಂಡಿರುವ ಶಾಜಿಬ್ ಭಾವಚಿತ್ರಕ್ಕೂ ಹೊಂದಾಣಿಕೆಯಾಗುತ್ತಿದೆ.

ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಮುಸಾಬೀರ್ ಹುಸೇನ್ ಶಾಜಿಬ್ ಒಬ್ಬ ಶಂಕಿತ ಉಗ್ರನಾಗಿದ್ದು ನಗರದ ಕುಂದಲಹಳ್ಳಿಯ ರಾಮೇಶ್ವರಂ ಕೆಫೆಗೆ ಬಾಂಬ್ ಇಟ್ಟು ಹೋಗಿದ್ದ ವ್ಯಕ್ತಿ ಎಂದು ರಾಷ್ಟ್ರೀಯ ತನಿಖಾ ದಳ (NIA)ಪತ್ತೆ ಹಚ್ಚಿದೆ. ಹೀಗಾಗಿ ಈ ಸ್ಪೋಟದ ಹಿಂದೆ ಶಿವಮೊಗ್ಗ ಐಸಿಸ್ ಮಾಡ್ಯೂಲ್ ಕೈವಾಡ ಇರುವುದು ಖಚಿತವಾಗಿದೆ.
ಶಂಕಿತ ಆರೋಪಿ ಈ ಹಿಂದೆ ಕೂಡ ಹಲವಾರು ಭಯೋತ್ಪಾದನಾ ಕೃತ್ಯಗಳಲ್ಲಿ ಭಾಗಿಯಾಗಿದ್ದ ಎನ್ನಲಾಗುತ್ತಿದೆ. ಕಳೆದ ಎರಡು ವರ್ಷಗಳ ಹಿಂದೆ ಕರ್ನಾಟಕ ಹಾಗೂ ತಮಿಳುನಾಡಿನಲ್ಲಿ ನಡೆದ ಭಯೋತ್ಪಾದನಾ ಕೃತ್ಯಗಳಲ್ಲಿ ಶಾಜಿಬ್ ಕೈವಾಡವಿದೆ ಎನ್ನುವುದು ತಿಳಿದು ಬಂದಿದೆ.
ತೀರ್ಥಹಳ್ಳಿ ತಾಲೂಕಿನ ಮತೀನ್‌ತಾಹ ಹಾಗೂ ಶಾಜಿಬ್ ಐಸಿಸ್ ಸಂಘಟನೆಗೆ ಮಲೆನಾಡಿನ ಮುಸ್ಲಿಂ ಯುವಕರ ನೇಮಕಾತಿಯಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ನಡೆದ ಮಂಗಳೂರಿನ ದೇಶ ವಿರೋಧಿ ಗೋಡೆ ಬರಹ, ಮಂಗಳೂರು ಕುಕ್ಕರ್ ಸ್ಪೋಟ, ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ತುಂಗಾ ತೀರದಲ್ಲಿ ಬಾಂಬ್ ಪರೀಕ್ಷೆ ಪ್ರಕರಣ, ತಮಿಳುನಾಡಿನ ಕೊಯಮತ್ತೂರಿನ ಬಾಂಬ್ ಸ್ಪೋಟ ಹಾಗೂ ರಾಮೇಶ್ವರಂ ಕೆಫೆ ಸ್ಪೋಟ ಪ್ರಕರಣಗಳಿಗೆ ನಂಟಿದೆ.

ಯಾಕೆಂದರೆ ಮಂಗಳೂರು ಕುಕ್ಕರ್ ಸ್ಪೋಟ ಹಾಗೂ ಶಿವಮೊಗ್ಗ ಜಿಲ್ಲೆ ಬಾಂಬ್ ಪ್ರಯೋಗದಲ್ಲಿ ಪತ್ತೆಯಾಗಿದ್ದ ಸ್ಪೋಟಕ ವಸ್ತುಗಳಿಗೂ ಕೆಫೆ ಸ್ಪೋಟದ ಬಾಂಬ್ ತಯಾರಿಕೆಗೆ ಬಳಸಲಾಗಿದ್ದ ವಸ್ತುಗಳಿಗೂ ತಾಳೆಯಾಗಿದೆ. ಇದರಿಂದ ಐಸಿಸ್ ತಂಡವೇ ಕೆಫೆಯಲ್ಲಿ ಸ್ಪೋಟದ ರೂವಾರಿ ಎಂಬುದು ಸ್ಪಷ್ಟವಾಗಿದೆ.
ರಾಮೇಶ್ವರಂ ಕೆಫೆ ಟಾರ್ಗೆಟ್ ಆಗಿದ್ದು ಯಾಕೆ?
ದಕ್ಷಿಣ ಭಾರತದ ತಿಂಡಿಗಳ ಮೂಲಕ ಜನಪ್ರಿಯವಾಗಿರುವ ರಾಮೇಶ್ವರಂ ಕೆಫೆ ತ್ವರಿತ ಸೇವೆಯನ್ನು ನೀಡುವ ರೆಸ್ಟೋರೆಂಟ್ ಆಗಿದೆ. ಈ ಕೆಫೆಯಲ್ಲಿ ನಾವು ಯಾವ ಸಮಯದಲ್ಲಿ ಹೋದರೂ ಜನಜಂಗುಳಿ ಕಾಣಬಹುದು. ಆದರೆ ಈ ಒಂದು ಕೆಫೆಯು ಮಾಸಿಕವಾಗಿ ಅಂದರೆ ಒಂದು ತಿಂಗಳಿನಲ್ಲಿಯೇ ಬರೋಬ್ಬರಿ 4.5 ಕೋಟಿ ರೂಪಾಯಿ ಗಳಿಕೆಯನ್ನು ಹೊಂದಿದೆ.
ಬಾಲಿವುಡ್‌ನ ಸೂಪರ್ ಸ್ಟಾರ್ ಕಾರ್ತಿಕ್ ಆರ್ಯನ್ ರಾಮೇಶ್ವರಂ ಕೆಫೆಗೆ ಭೇಟಿ ನೀಡಿದ್ರು. ಇವರಷ್ಟೇ ಅಲ್ಲ ಅನೇಕ ಸೆಲಿಬ್ರಿಟಿಗಳು ಇಲ್ಲಿಗೆ ಭೇಟಿ ನೀಡಿದ್ದಾರೆ. ಇದೇ ಈ ಸ್ಫೋಟಕ್ಕೆ ಕಾರಣವಾಯ್ತಾ ಅನ್ನೋ ಪ್ರಶ್ನೆ ಎದ್ದಿದೆ. ಒಳ್ಳೆ ಹೆಸರು, ಉತ್ತಮ ಆದಾಯ ಗಳಿಸುತ್ತಿರೋದಕ್ಕೆ ರಾಮೇಶ್ವರಂ ಕೆಫೆ ಟಾರ್ಗೆಟ್ ಆಯ್ತಾ ಅನ್ನೋ ಪ್ರಶ್ನೆ ಎದ್ದಿದೆ.












Click it and Unblock the Notifications