Bengaluru Weather Forecast: ನಗರದಲ್ಲಿ ಹೆಚ್ಚಲಿದೆ ಚಳಿ, ಮಳೆ ಮುನ್ಸೂಚನೆಯೂ ಇದೆ!
ಬೆಂಗಳೂರು, ಡಿಸೆಂಬರ್ 17: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮಳೆಯ ಕಿರಿಕಿರಿ ಇನ್ನೇನು ದೂರವಾಯಿತು ಎನ್ನುವಷ್ಟರಲ್ಲಿ ವ್ಯಾಪಕ ಚಳಿಯು ನಾಗರಿಕರನ್ನು ಇನ್ನಿಲ್ಲದಂತೆ ಕಾಡುತ್ತಿದೆ. ಭಾನುವಾರಕ್ಕಿಂತಲೂ ಸೋಮವಾರ ಸಂಜೆ ಮತ್ತಷ್ಟು ಕನಿಷ್ಠ ತಾಪಮಾನ ದಾಖಲಾಗಿದೆ. ಮುಂದಿನ 2 ದಿನ (ಡಿ 18ರವರೆಗೆ) ಮೈಕೊರೆವ ಚಳಿ ಕಂಡು ಬರಲಿದೆ. ನಂತರ ಎರಡು ದಿನ ಮತ್ತೆ ಮಳೆ ಆರ್ಭಟಿಸುವ ಲಕ್ಷಣ ಇದೆ ಎಂದು ಬೆಂಗಳೂರು ಹವಾಮಾನ ಕೇಂದ್ರ ಮುನ್ಸೂಚನೆ ನೀಡಿದೆ.
ಹೌದು, ಸಿಲಿಕಾನ್ ಸಿಟಿಯಲ್ಲಿ ತೇವಭರಿತ ಗಾಳಿ ಬೀಸುವಿಕೆ ಹೆಚ್ಚಾಗುತ್ತಿದೆ. ಮಂಜು ಕವಿದ ವಾತಾವರಣ ನಿರ್ಮಾಣಗೊಂಡಿದೆ. ಮಧ್ಯಾಹ್ನ ಅಧಿಕ ಬಿಸಲು, ಒಣ ಹವೆ ದಾಖಲಾಗಿದೆ. ಸಂಜೆಯಿಂದ ಬೆಳಗ್ಗೆವರೆಗೆ ಅತೀವ ಚಳಿ ಜನರನ್ನು ಬಾಧಿಸುತ್ತಿದೆ. ನಗರದಲ್ಲಿ ಸೋಮವಾರ ಸಂಜೆ ಕನಿಷ್ಠ ತಾಪಮಾನ 14.5 ಡಿಗ್ರಿ ಸೆಲ್ಸಿಯಸ್ ಗೆ ಇಳಿಕೆ ಕಂಡಿದೆ. ಇದು ಭಾನುವಾರ ಕಂಡು ಬಂದ ಚಳಿಗಿಂತಲೂ ಅಧಿಕ ಎಂದು ವರದಿ ಆಗಿದೆ.

ಕನಿಷ್ಠ ತಾಪಮಾನ ಮತ್ತಷ್ಟು ಇಳಿಕೆ
ಸೋಮವಾರ ಬೆಂಗಳೂರು ನಗರದಲ್ಲಿ 15 ಡಿಗ್ರಿ ಸೆಲ್ಸಿಯಸ್, ಬೆಂಗಳೂರು ಇಂಟರ್‌ನ್ಯಾಷನಲ್ ಏರ್‌ಪೋರ್ಟ್ 14.5ಡಿಗ್ರಿ ಸೆಲ್ಸಿಯಸ್ ಮತ್ತು ಬೆಂಗಳೂರು ಎಚ್‌ಎಎಲ್ ಏರ್‌ಪೋರ್ಟ್ 14.7 ಡಿಗ್ರಿ ಸೆಲ್ಸಿಯಸ್ ತಾಪಮಾನಕ್ಕೆ ಇಳಿಕೆ ಆಗಿದೆ. ಇದರಿಂದ ಅತೀವ ಚಳಿಯ ಸೃಷ್ಟಿಯಾಗಿದೆ. ಇನ್ನೂ ಗರಿಷ್ಠ ತಾಪಮಾನ 26-27 ಡಿಗ್ರಿ ಸೆಲ್ಸಿಯಸ್ ನಷ್ಟಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಬೆಂಗಳೂರು ಕೇಂದ್ರ ಮಾಹಿತಿ ನೀಡಿದೆ.
ಭಾನುವಾರಕ್ಕಿಂತ ಸೋಮವಾರ ಹೆಚ್ಚು ಚಳಿ ಉಂಟಾಗಿದ್ದು, ಮುಂದಿನ ಎರಡು ದಿನಗಳ ಕಾಲ ಅಂದರೆ ಡಿಸೆಂಬರ್ 18ರವರೆಗೆ ಇದೇ ರೀತಿ ಚಳಿ ಮುಂದುವರಿಯಲಿದೆ. ನಂತರ ಎರಡು ದಿನ ಡಿಸೆಂಬರ್ 19 ಮತ್ತು 20 ರಂದು ಮತ್ತೆ ಮಳೆ ಆರ್ಭಟಿಸುವ ಮುನ್ಸೂಚನೆ ಇದೆ ಎಂದು ತಿಳಿಸಲಾಗಿದೆ.
ದಿಢೀರ್ ಮಳೆ ಬರಲು ಕಾರಣವೇನು? ಹೀಗೆ ಚಳಿ ಮಳೆ, ಬಿಸಿಲು ಏಕಕಾಲಕ್ಕೆ ಉಂಟಾಗಿ ಜನರ ಆರೋಗ್ಯ ಸ್ಥಿತಿ ಹದಗೆಡುತ್ತಿದೆ. ಮಹಿಳೆಯರು, ವೃದ್ಧರು, ಮಕ್ಕಳು ಅನಾರೋಗ್ಯಕ್ಕೆ ತುತ್ತಾಗುವ ಭಯ ಕಾಡುತ್ತಿದೆ.

ವಾಯುಭಾರ ಕುಸಿತ ಪ್ರಭಾವ
ಹವಾಮಾನ ಇಲಾಖೆ ಪ್ರಕಾರ, ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತು ನಿರ್ಮಾಣಗೊಳ್ಳುವ ಪರಂಪರೆ ಮತ್ತೆ ಮುಂದುವರಿದಿದೆ. ಕಳೆದ ಎರಡು ವಾರಗಳಲ್ಲಿ ಮೂರ ರಿಂದ ನಾಲ್ಕು ವೈಪರಿತ್ಯಗಳು ಇಲ್ಲಿ ನಿಮಾರ್ಣಗೊಂಡಿದೆ. ಈ ಕಾರಣದಿಂದ ಬದಲಾದ ಹವಾಮಾನ ಸನ್ನಿವೇಶಕ್ಕೆ ಬೆಂಗಳೂರಿಗೆ ಮತ್ತೆ ಮಳೆ ಬರುವ ಎಲ್ಲ ಲಕ್ಷಣಗಳು ಇವೆ. ಈ ಕಾರಣದಿಂದಾಗಿ ಮುಂದಿನ ಎರಡು ದಿನ ಬಿಸಿಲು ಸಹಿತ ಬೆಳಗ್ಗೆ ರಾತ್ರಿ ಅತೀವ ಚಳಿ ಕಂಡು ಬರಲಿದೆ. ನಂತರ ಎರಡು ದಿನ ಮಳೆ ಬರಲಿದೆ ಎಂದು ಹೇಳಲಾಗಿದೆ.
ಲಕ್ಷದ್ವೀಪ, ಮಾಲ್ಡೀವ್ಸ್, ಬಂಗಾಳಕೊಲ್ಲಿ, ಅರಬ್ಬಿ ಸಮುದ್ರದಲ್ಲಿ ನಿರಂತರವಾಗಿ ವಾಯುಭಾರ ಕುಸಿತಗಳು ನಿರ್ಮಾಣಗೊಂಡು ಅವು, ಚಂಡಮಾರುತ ಪರಿಚಲನೆ ಆಗಿ ಕೊನೆಗೊಳ್ಳುತ್ತಿವೆ. ಅವು ಇನ್ನಷ್ಟು ತೀವ್ರಗೊಂಡರೆ ಸ್ಪಷ್ಟ ಚಂಡಮಾರುತವಾಗಿ ಅಬ್ಬರಿಸುವ ಸಾಧ್ಯತೆ ಇರುತ್ತದೆ. ಆದರೆ ಅದೃಷ್ಟವಶಾತ್, ಭೀಕರ ಸ್ವರೂಪ ಪಡೆದುಕೊಳ್ಳುವ ಮೊದಲೇ ಅಂತ್ಯ ಕಾಣುತ್ತಿವೆ. ಇದರಿಂದ ಕರಾವಳಿ ರಾಜ್ಯಗಳ ಕೆಲವು ಜಿಲ್ಲೆಗಳ ನಿವಾಸಿಗಳು ನಿಟ್ಟುಸಿರು ಬಿಡುವಂತಾಗಿದೆ.
ರಾಜ್ಯಾದ್ಯಂತ ಒಣಹವೆ
ಕರ್ನಾಟಕದ ಉತ್ತರ ಒಳನಾಡಿನಲ್ಲಿ ಬೀದರ್, ವಿಜಯಪುರದಲ್ಲಿ ಅತ್ಯಂತ ಕಡಿಮೆ ತಾಪಮಾನ ಕಂಡು ಬಂದಿದೆ. ಉತ್ತರ ಕರ್ನಾಟಕದ ಭಾಗದಲ್ಲಿ ಭಾರೀ ಚಳಿ ಬಿದ್ದಿದೆ. ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲೂ ಕಳೆದ ಎರಡು ದಿನಗಳಲ್ಲಿ ಚಳಿ, ಮಂಜು ಆವರಿಸುತ್ತಿದೆ. ರಾಜ್ಯಾದ್ಯಂತ ಒಣಹವೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.












Click it and Unblock the Notifications