Bengaluru Weather Alert: ವರ್ಷಾಂತಕ್ಕೆ ಹೆಚ್ಚಲಿದೆ 'ಥಂಡಿ': ತಾಪಮಾನ ತೀವ್ರ ಇಳಿಕೆ, ಮುನ್ಸೂಚನೆ ಗಮನಿಸಿ
ಬೆಂಗಳೂರು, ಡಿಸೆಂಬರ್ 20: ಜನರು ಹೊಸ ವರ್ಷಾಚರಣೆಗೆ ಸಿದ್ದವಾಗಿದ್ದಾರೆ. ಮತ್ತೊಂದೆಡೆ ಕೊರೊನಾ ಏರಿಕೆಯ ಮುನ್ಸೂಚನೆ ದೊರೆತಿದ್ದು, ಸರ್ಕಾರಿ ಮಾರ್ಗಸೂಚಿ ಹೊರಡಿಸಿದೆ. ಈ ಮಧ್ಯೆ ಬೆಂಗಳೂರಿನಲ್ಲಿ ಚಳಿಯು ಇನ್ನಷ್ಟು ಹೆಚ್ಚಾಗಲಿದೆ. ಎಂದು ಕರ್ನಾಟಕ ಹವಾಮಾನ ಇಲಾಖೆ ತಿಳಿಸಿದೆ.
ಹೌದು, ಈ ತಿಂಗಳಾಂತ್ಯದವರೆಗೆ ಬೆಂಗಳೂರಿನಲ್ಲಿ ಮೈಕೊರೆಯುವ ಚಳಿಯ ವಾತಾವರಣ ಸೃಷ್ಟಿಯಾಗಲಿದೆ. ಸದ್ಯ ನಗರದಲ್ಲಿ ಕನಿಷ್ಠ ತಾಪಮಾನ ಪ್ರಮಾಣ 17-16 ಡಿಗ್ರಿ ಸೆಲ್ಸಿಯಸ್‌ನಷ್ಟಿದೆ. ಇದು ಮುಂದಿನ ದಿನಗಳಲ್ಲಿ 14 ಡಿಗ್ರಿ ಸೆಲ್ಸಿಯಸ್‌ಗೆ ಇಳಿಯುವ ಲಕ್ಷಣಗಳು ಇವೆ.

ಬುಧವಾರ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಗರಿಷ್ಠ 27.3 ಡಿಗ್ರಿ ಸೆಲ್ಸಿಯಸ್, ಕನಿಷ್ಠ 17.7 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (KIA) ಸುತ್ತಮುತ್ತ ಇಂದು ಗರಿಷ್ಠ 27.2 ಡಿಗ್ರಿ ಸೆಲ್ಸಿಯಸ್ ಕನಿಷ್ಠ 17 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದರೆ, ಬೆಂಗಳೂರು ಎಚ್‌ಎಎಲ್‌ನಲ್ಲಿ ಗರಿಷ್ಠ 27.2 ಮತ್ತು ಕನಿಷ್ಠ 16.1ಡಿಗ್ರಿ ಸೆಲ್ಸಿಯಸ್ ತಾಪಮಾನ ಕಂಡು ಬಂದಿದೆ.
ನಗರದ ತಾಪಮಾನ ಇಳಿಕೆ ವಿವರಗಳು
ಈಗಿರುವ ಉಷ್ಣಾಂಶವು ಮುಂದಿನ ದಿನಗಳಲ್ಲಿ ಇನಷ್ಟು ಇಳಿಕೆ ಆಗಿ ನಗರಾದ್ಯಂತ ಚಳಿ ಆವರಿಸಿಕೊಳ್ಳಲಿದೆ. ಅಂದರೆ ಡಿಸೆಂಬರ್ 21 ರಂದು ಕನಿಷ್ಠ 16 ಡಿಗ್ರಿ ಸೆಲ್ಸಿಯಸ್ ಇಳಿಕೆ ಆದರೆ, ನಂತರದ ಎರಡು ದಿನ ಕನಿಷ್ಠ 15 ಡಿಗ್ರಿ ಸೆಲ್ಸಿಯಸ್ ಗೆ ಕುಸಿಯಲಿದೆ. ನಂತರದ ಮೂರು ದಿನ (ಡಿಸೆಂಬರ್ 26ರವರೆಗೆ) ಕನಿಷ್ಠ 14 ಡಿಗ್ರಿ ಸೆಲ್ಸಿಯಸ್‌ಗೆ ತಾಪಮಾನ ಇಳಿಕೆ ಆಗಲಿದೆ. ಹೀಗಾಗಿ ಚಳಿಯ ಪ್ರಮಾಣ ಹೆಚ್ಚಾಗಲಿದೆ.
ಈ ಅವಧಿಯಲ್ಲಿ ನಗರದ ಗರಿಷ್ಠ ತಾಪಮಾನ 29-30 ಡಿಗ್ರಿ ಸೆಲ್ಸಿಯಸ್‌ನಷ್ಟು ಕಂಡು ಬರಲಿದೆ. ನಾಳೆ ಗುರುವಾರದಿಂದ ಥಂಡಿ ಹೆಚ್ಚಾಗುವ ಹಿನ್ನೆಲೆಯಲ್ಲಿ ಅನಾರೋಗ್ಯದಿಂದ ಬಳಲುತ್ತಿರುವವರು, ಮಹಿಳೆಯರು ಮತ್ತು ಮಕ್ಕಳು ಆರೋಗ್ಯ ಕಾಳಜಿ ವಹಿಸಿಕೊಳ್ಳಬೇಕಿದೆ.

ಸದ್ಯ ಬೆಂಗಳೂರಿನಲ್ಲಿ ನಿತ್ಯ ಬೆಳಗ್ಗೆ ಮತ್ತು ಸಂಜೆ ನಂತರ ಮಂಜು ಮುಸುಕಿನ ವಾತಾವರಣ ದಾಖಲಾಗುತ್ತಿದೆ. ಕೆಲವೊಮ್ಮೆ ಸೂರ್ಯನ ದರ್ಶನವೇ ಅಪರೂಪ ಎಂಬಂತಹ ವಾತಾವರಣ ನಿರ್ಮಾಣವಾಗಿರುತ್ತದೆ. ಈ ವರ್ಷ ಮಳೆ ಪ್ರಮಾಣ ಕಡಿಮೆ ಇದ್ದರೂ ಸಹಿತ ಬೆಂಗಳೂರು ಸೇರಿದಂತೆ ಒಳನಾಡು ಜಿಲ್ಲೆಗಳಲ್ಲಿ ಚಳಿ ಪ್ರಮಾಣ ಏರಿಕೆ ಆಗಿದೆ.
ಒಳನಾಡು ಜಿಲ್ಲೆಗಳಲ್ಲೂ ಚಳಿ
ವಿಜಯಪುರ, ಬಾಗಲಕೋಟೆ ಜಿಲ್ಲೆಗಳ ಬಳಿಕ ಇದೀಗ ಬೆಂಗಳೂರಿನಲ್ಲಿಯೂ ಅತ್ಯಧಿಕ ಚಳಿ ದಾಖಲಾಗುವ ಲಕ್ಷಣಗಳು ಕಂಡು ಬರುತ್ತಿವೆ. ಕೆಲವೇ ದಿನಗಳ ಹಿಂದಷ್ಟೇ ವಿಜಯಪುರದಲ್ಲಿ ರಾಜ್ಯದ ಅತ್ಯಧಿಕ ಕನಿಷ್ಠ ತಾಪಮಾನ 12 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ವಿಜಯಪುರ ಸೇರಿದಂತೆ ಉತ್ತರ ಒಳನಾಡಿನ ಇನ್ನಿತರ ಜಿಲ್ಲೆಗಳಲ್ಲಿ ಭಾರಿ ಚಳಿ ಕಂಡು ಬಂದಿತ್ತು. ಇದೀಗ ತಾಪಮಾನದಲ್ಲಿ ತುಸು ಏರಿಕೆ ಆಗಿದೆ. ಒಂದಷ್ಟು ಜಿಲ್ಲೆಗಳಲ್ಲಿ ಬೆಳಗ್ಗೆ ಹೆಚ್ಚು ಚಳಿ ಕಂಡು ಬರುತ್ತಿದೆ.
ಆರೋಗ್ಯ ಕಾಳಜಿ ವಹಿಸಿ
ಸಿಲಿಕಾನ್ ಸಿಟಿಯಲ್ಲಿ ಹೊಸ ವರ್ಷಾಚರಣೆ ಸ್ವಾಗತಕ್ಕೆ ಜನ ಸಜ್ಜಾಗಿದ್ದಾರೆ. ರಾತ್ರಿ ಪೂರ್ತಿ ಕೆಲವೆಡೆ ಕಾರ್ಯಕ್ರಮಗಳು, ಸಂಭ್ರಮಾಚರಣೆಗಳು ನಡೆಯಲಿವೆ. ಇತ್ತ ಕೋವಿಡ್ ಆತಂಕ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸರ್ಕಾರ ವರ್ಷಾಚರಣೆ ಮೇಲೆ ನಿರ್ಬಂಧ ಹೇರಲು ಮುಂದಾಗಿಲ್ಲ. ಇದೀಗ ಚಳಿಯು ಹೆಚ್ಚಾಗುವ ಲಕ್ಷಣಗಳು ಕಂಡು ಬಂದಿವೆ. ಬೆಳಗ್ಗೆ ಮತ್ತು ಸಂಜೆ ನಂತರ ಚಳಿಯ ಪ್ರಮಾಣ ಕ್ರಮೇಣ ಹೆಚ್ಚಾಗಲಿದೆ. ಇದೆಲ್ಲ ಬೆಳವಣಿಗೆ ನೋಡಿದರೆ, ನಿಮ್ಮ ಆರೋಗ್ಯ ಕುರಿತು ಹೆಚ್ಚು ಕಾಳಜಿ ವಹಿಸಬೇಕಾದ ಅಗತ್ಯತೆ ಇದೆ.












Click it and Unblock the Notifications