Bengaluru Suburban Rail: ಸಬ್ ಅರ್ಬನ್ ರೈಲು ಯೋಜನೆ ಮತ್ತಷ್ಟು ವಿಳಂಬ
ಬೆಂಗಳೂರು, ಮಾರ್ಚ್ 24: ಈಗಾಗಲೇ ಸಾಕಷ್ಟು ವಿಳಂಬವಾಗಿರುವ ಬೆಂಗಳೂರು ಉಪನಗರ ರೈಲು ಯೋಜನೆ (ಬಿಎಸ್‌ಆರ್‌ಪಿ) ಇನ್ನಷ್ಟು ವಿಳಂಬವಾಗಲಿದೆಯೇ?. ಈ 15,767 ಕೋಟಿ ರೂ. ಮೊತ್ತದ ಬೃಹತ್ ಯೋಜನೆ ಬೆಂಗಳೂರು ನಗರದ ಸಂಚಾರ ದಟ್ಟಣೆಯನ್ನು ಪರಿಹಾರ ಮಾಡಲಿದೆ ಎಂದು ಅಂದಾಜಿಸಲಾಗಿದೆ. ಯೋಜನೆ 4 ಕಾರಿಡಾರ್ ಒಳಗೊಂಡಿದ್ದು, ಸುಮಾರು 148 ಕಿ. ಮೀ. ಉಪ ನಗರ ರೈಲು ಜಾಲ ನಿರ್ಮಾಣವಾಗಲಿದೆ.
ಬೆಂಗಳೂರು ಉಪನಗರ ರೈಲು ಯೋಜನೆಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರ ಜಂಟಿಯಾಗಿ ಕರ್ನಾಟಕ ರೈಲು ಮೂಲಸೌಲಭ್ಯ ಅಭಿವೃದ್ಧಿ ಕಂಪನಿ ನಿಯಮಿತ (ಕೆ-ರೈಡ್) ಮೂಲಕ ಅನುಷ್ಠಾನ ಮಾಡುತ್ತಿವೆ. 2026ರ ಡಿಸೆಂಬರ್‌ನಲ್ಲಿ ರೈಲು ಸಂಚಾರವನ್ನು ಒಂದು ಕಾರಿಡಾರ್‌ನಲ್ಲಿ ಆರಂಭಿಸುವ ಗುರಿ ಹೊಂದಲಾಗಿದೆ.

ಸಬ್ ಅರ್ಬನ್ ರೈಲು ಯೋಜನೆಯ ಕಾಮಗಾರಿ ಟೆಂಡರ್ ಅನ್ನು ದೇಶದ ಅತಿ ದೊಡ್ಡ ಇಂಜಿನಿಯರಿಂಗ್ ಮತ್ತು ಕಟ್ಟಡ ನಿರ್ಮಾಣ ಕಂಪನಿಯಾದ ಎಲ್ & ಟಿ ಪಡೆದುಕೊಂಡಿದೆ. ಆದರೆ ಕಾಮಗಾರಿ ವೇಗವಾಗಿ ಕೈಗೊಳ್ಳಲು ಭೂಮಿಯ ಕೊರತೆ ಎದುರಾಗಿದೆ. ಕಾರಿಡಾರ್-2 ನಿರ್ಮಾಣಕ್ಕೆ ಅಗತ್ಯ ಭೂಮಿಯನ್ನು ನೀಡಿ ಎಂದು ಅದು ಕೆ-ರೈಡ್ ಅನ್ನು ಒತ್ತಾಯಿಸುತ್ತಿದೆ.
ಭೂ ಸ್ವಾಧೀನದ ಸಮಸ್ಯೆ: ಕಾರಿಡಾರ್-2 (ಬೈಯಪ್ಪನಹಳ್ಳಿ-ಚಿಕ್ಕಬಣಾವರ) ನಿರ್ಮಾಣಕ್ಕೆ ಭೂ ಸ್ವಾಧೀನದ ಸಮಸ್ಯೆ ಎದುರಾಗಿದೆ. 27 ತಿಂಗಳಿನಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಎಲ್ & ಟಿಗೆ ನೀಡಿದ್ದ ಗಡುವು ಮೂರು ತಿಂಗಳ ಹಿಂದೆ ಮುಕ್ತಾಯವಾಗಿದೆ. ಕಂಪನಿಗೆ ಆದ ನಷ್ಟವನ್ನು ತುಂಬಲು ಹೆಚ್ಚುವರಿ ಹಣಕ್ಕಾಗಿ ಕಂಪನಿ ಬೇಡಿಕೆ ಇಟ್ಟಿದೆ. ಭೂ ಸ್ವಾಧೀನದ ವಿಚಾರದ ಕಾರಣ ಸುಮಾರು 15 ದಿನಗಳಿಂದ ಕೆಲಸ ನಿಲ್ಲಿಸಲಾಗಿದೆ.
ಬಿಎಸ್‌ಆರ್‌ಪಿ ಯೋಜನೆಗೆ ಸರಿಯಾಗಿ ಭೂಮಿ ನೀಡದಿದ್ದರೆ ಯೋಜನೆಯಿಂದ ಹೊರ ಬರಲು ಕಂಪನಿ ಚಿಂತನೆ ನಡೆಸಿದೆ. ಸಬ್ ಅರ್ಬನ್ ರೈಲು ಯೋಜನೆಯಲ್ಲಿ ಕಾರಿಡಾರ್-2 ಮಲ್ಲಿಗೆ 25.01 ಕಿ. ಮೀ. ಮತ್ತು 46.24 ಕಿ. ಮೀ. ಕಾರಿಡಾರ್-4 ಕನಕದ ನಿರ್ಮಾಣ ಟೆಂಡರ್ ಎಲ್ & ಟಿ ಬಳಿ ಇದೆ.
ಕಾರಿಡಾರ್-2 ನಿರ್ಮಾಣಕ್ಕೆ 91.5 ಎಕರೆ ಭೂಮಿ ಬೇಕಿದ್ದು, ಇದರಲ್ಲಿ 28.56 ಎಕರೆ ಭೂಮಿ ಖಾಸಗಿಯವರದ್ದು. ಕಾರಿಡಾರ್-4ಕ್ಕೆ 160.56 ಎಕರೆ ಭೂಮಿ ಬೇಕಿದ್ದು, 40.29 ಎಕರೆ ಖಾಸಗಿ ಜಾಗವಾಗಿದೆ. ಭೂಮಿಯನ್ನು ಇನ್ನೂ ಗುತ್ತಿಗೆ ಪಡೆದ ಕಂಪನಿಗೆ ಹಸ್ತಾಂತರ ಮಾಡಿಲ್ಲ. ಆದ್ದರಿಂದ ಮೂಲ ಕಾಮಗಾರಿಗಳನ್ನು ಕೈಗೊಳ್ಳಲು ಸಹ ತೊಂದರೆಯಾಗುತ್ತಿದೆ.
ಎಲ್ & ಟಿ ಜೊತೆ ಸೇರಿ ಬಿಎಸ್ಆರ್‌ಪಿ ಯೋಜನೆಯಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿದ್ದ 4ಕ್ಕೂ ಅಧಿಕ ಇಂಜಿನಿಯರಿಂಗ್ ಕಂಪನಿಗಳು ವಿಳಂಬದ ಹಿನ್ನಲೆಯಲ್ಲಿ ಯೋಜನೆ ಬಿಟ್ಟು ಹೋಗಿವೆ. ಯೋಜನೆ ಸರಿಯಾದ ವೇಗದಲ್ಲಿ ಸಾಗದಿದ್ದರೆ ಕಂಪನಿಗೂ ನಷ್ಟವಾಗಲಿದೆ.
ಕೆ-ರೈಡ್ ವ್ಯವಸ್ಥಾಪಕ ನಿರ್ದೇಶಕಿ ಎನ್. ಮಂಜುಳಾಗೆ ಎಲ್ & ಟಿ ಮಾರ್ಚ್ 7ರಂದು ಭೂಮಿಯ ಸಮಸ್ಯೆಯ ಕುರಿತು ಪತ್ರವನ್ನು ಬರೆದಿದೆ. ಯೋಜನೆಯ ಕಾಮಗಾರಿಗೆ ಕಾರ್ಮಿಕರನ್ನು ಕರೆತರಲಾಗಿದೆ, ಯಂತ್ರಗಳು ಸಿದ್ಧವಿದೆ. ಆದರೆ ಭೂಮಿ ಇಲ್ಲ. ಇದರಿಂದಾಗಿ ಕಂಪನಿಗೆ ಭಾರೀ ನಷ್ಟವಾಗುತ್ತಿದೆ ಎಂದು ಪತ್ರದಲ್ಲಿ ವಿವರಣೆ ನೀಡಿದೆ.
ಸಬ್ ಅರ್ಬನ್ ಕಾರಿಡಾರ್-2ರ ವೆಚ್ಚ ಇನ್ನು 300 ಕೋಟಿ ಹೆಚ್ಚಳವಾಗುವ ನಿರೀಕ್ಷೆ ಇದೆ. ಈ ಮಾರ್ಗದಲ್ಲಿ ಡಬಲ್ ಡೆಕ್ಕರ್ ಫ್ಲೈ ಓವರ್ ನಿರ್ಮಾಣ ಮಾಡುವ ಪ್ರಸ್ತಾವನೆಯನ್ನು ಈಗ ತಯಾರು ಮಾಡಲಾಗಿದೆ. ಆದರೆ ಇದಕ್ಕಾಗಿ ಕೂಡ ಈಗ ಭೂಮಿಯನ್ನು ಸ್ವಾಧೀನ ಮಾಡಿಕೊಳ್ಳಬೇಕಿದೆ. ಯಾವುದೇ ಕಂಪನಿ ಟೆಂಡರ್ ಒಪ್ಪಂದ ಮೀರಿ ಯೋಜನೆಯಿಂದ ಹೊರ ಹೋಗುವಂತಿಲ್ಲ ಎಂದು ಕೆ-ರೈಡ್ ಅಧಿಕಾರಿಗಳು ಹೇಳಿದ್ದಾರೆ.
ಯೋಜನೆಗಾಗಿ ಖಾಸಗಿ ಭೂಮಿ ಸ್ವಾಧೀನಪಡಿಸಿಕೊಳ್ಳಬೇಕಾಗಿದೆ ಮತ್ತು ಕೆಲಸಗಳನ್ನು ಮುಂದುವರಿಸಲು ಅದನ್ನು ಹಸ್ತಾಂತರಿಸಬೇಕಾಗಿದೆ. ಬೈಯಪ್ಪನಹಳ್ಳಿ-ಚಿಕ್ಕಬಣಾವರ ತನಕ ಮಾರ್ಗ ನಿರ್ಮಿಸಲು ಬೇಕಾದ ಸಂಪೂರ್ಣ ಭೂಮಿಯನ್ನು ಸ್ವಾಧೀನ ಮಾಡಿಕೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಆದರೆ ಯಾವಾಗ ಜಮೀನು ಹಸ್ತಾಂತರವಾಗುತ್ತದೆ ಎಂದು ನಿಗದಿತವಾಗಿ ಹೇಳಿಲ್ಲ.












Click it and Unblock the Notifications