ಬೆಂಗಳೂರು ಟ್ರಾಫಿಕ್ ಜಾಮ್ ಮುಕ್ತಿಗೆ 'ಲೈಫ್ ಲೈನ್' ರೈಲು ಯೋಜನೆ ವರದಾನ: ಬಿಎಸ್‌ಆರ್‌ಪಿ ಸ್ಥಿತಿಗತಿ, ಸಂಪೂರ್ಣ ವಿವರ
ಬೆಂಗಳೂರು: ರಾಜಧಾನಿ ಬೆಂಗಳೂರಿನ ಮಹತ್ವದ ಸಾರಿಗೆ ಯೋಜನೆಗಳಲ್ಲಿ ಉಪನಗರ ರೈಲು ಯೋಜನೆ (BSRP) ಪ್ರಮುಖವಾಗಿದೆ. ನಗರದ ನಾಲ್ಕು ದಿಕ್ಕುಗಳ ಕೊನೆ ಮೈಲಿಗೆ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ಸುಮಾರು 150 ಕಿಲೋ ಮೀಟರ್ ವ್ಯಾಪ್ತಿಯ ಯೋಜನೆಗೆ ಅನುಮೋದನೆ ನೀಡಿ ವರ್ಷಗಳ ಕಳೆದರೂ ಕಾಮಗಾರಿ ಆಮೆ ವೇಗದಲ್ಲಿ ಸಾಗಿದೆ. ಸಂಚಾರ ದಟ್ಟಣೆ ನಿವಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ನಿರೀಕ್ಷೆ ಇದೆ. ಆದರೆ ನಾಲ್ಕು ಕಾರಿಡಾರ್ ಪೈಕಿ ಎರಡು ಕಾರಿಡಾರ್‌ಗಳ ನಿರ್ಮಾಣ ಕೈಗೆತ್ತಿಕೊಳ್ಳಲಾಯಿತಾದರೂ ಅದು ಸಹ ಪೂರ್ಣಗೊಂಡಿಲ್ಲ. ಈ ಯೋಜನೆಯ ಪ್ರಯೋಜನಗಳು, ಹಿನ್ನೆಲೆ, ಎದುರಾದ ಸವಾಲುಗಳು, ಇಂದಿನ ಸ್ಥಿತಿಗತಿ, ಕರ್ನಾಟಕ ಬಜೆಟ್ 2026ರ ಮೇಲಿನ ನಿರೀಕ್ಷೆಗಳು ಸೇರಿದಂತೆ ಸಮಗ್ರ ಮಾಹಿತಿ ಇಲ್ಲಿದೆ.
ಬಿಎಸ್‌ಆರ್‌ಪಿ ಸಂಕ್ಷಿಪ್ತ ವಿವರ
* ಯೋಜನೆ ಹೆಸರು: ಬೆಂಗಳೂರು ಉಪನಗರ ರೈಲು ಯೋಜನೆ (BSRP)
* ಅನುದಾನ ಹಂಚಿಕೆ: ಕೇಂದ್ರ ಮತ್ತು ಕರ್ನಾಟಕ ಸರ್ಕಾರ
* ಬಿಎಸ್‌ಆರ್‌ಪಿ ಅನುಮೋದನೆ: ಕೇಂದ್ರದಿಂದ 2019ರಲ್ಲಿ ಅನುಮೋದನೆ
* ಯೋಜನೆಗೆ ಅಂತಿಮ ಅನುಮೋದನೆ: 2020
* ಆರಂಭಿಕ ಅಂದಾಜು ವೆಚ್ಚ: 16000 ಕೋಟಿ ರೂ.
* ಯೋಜನೆ ಜಾರಿಗಾಗಿ ಕರ್ನಾಟಕ ರೈಲು ಮೂಲಸೌಕರ್ಯ ಅಭಿವೃದ್ಧಿ ಕಂಪನಿ (K-RIDE) ಸ್ಥಾಪನೆ
* ಯೋಜನೆ ಆರಂಭ: 2022
* ಒಟ್ಟು ಕಾರಿಡಾರ್: ನಾಲ್ಕು
* ಒಟ್ಟು ಹೊಸ ರೈಲು ನಿಲ್ದಾಣಗಳು: 53
* ಆರಂಭಿಕ ಗಡುವು: 40 ತಿಂಗಳು (2026)
* ಅಂತಿಮ ಗಡುವು: 2030 ಮಾರ್ಚ್

ಉಪನಗರ ರೈಲು ಯೋಜನೆಯ ಉದ್ದೇಶ, ಇತಿಹಾಸ
ಬೆಂಗಳೂರು ಬೆಳೆಯುತ್ತಿರುವ ನಗರ. ಭವಿಷ್ಯದಲ್ಲಿ ಎದುರಾಗುವ ದಟ್ಟಣೆ ಗಮನದಲ್ಲಿಟ್ಟುಕೊಂಡು ಹಾಗೂ ಹೆಚ್ಚುವರಿ ಸಾರಿಗೆ ವ್ಯವಸ್ಥೆ ಒದಗಿಸುವ ಉದ್ದೇಶದಿಂದ ಮೂರು ದಶಕಗಳ ಹಿಂದೆ ಈ ಯೋಜನೆಯ ನೀಲನಕ್ಷೆ ಸಿದ್ಧವಾಗಿತ್ತು. 1983ರಲ್ಲಿ ಮೊದಲ ಬಾರಿಗೆ ಬಿಎಸ್‌ಆರ್‌ಪಿ ಪ್ರಸ್ತಾಪಿಸಲಾಯಿತು. ಅಲ್ಲಿಂದ ಯೋಜನೆ ಕಾರ್ಯಗತಗೊಳಿಸಲು ಕರ್ನಾಟಕ ಸರ್ಕಾರ ಯೋಚಿಸುತ್ತಲೇ ಬಂದ ಪರಿಣಾಮ 2019ರಲ್ಲಿ ಕೇಂದ್ರ ರೈಲ್ವೆ ಬಜೆಟ್‌ನಲ್ಲಿ ತಾತ್ವಿಕ ಅನುಮೋದನೆ ನೀಡಲಾಯಿತು. ಬಳಿಕ 2020ರಲ್ಲಿ ಅಂತಿಮ ಅನುಮೋದನೆ ನೀಡಲಾಯಿತು.
ಉಪನಗರ ರೈಲು ಯೋಜನೆ: 4 ಕಾರಿಡಾರ್ ನಿರ್ಮಾಣ ಗುರಿ
1. 'ಸಂಪಿಗೆ' ಮಾರ್ಗ (ಕಾರಿಡಾರ್-1): ಕೆಎಸ್‌ಆರ್ ಬೆಂಗಳೂರು ಸಿಟಿಯಿಂದ ಯಲಹಂಕ - ದೇವನಹಳ್ಳಿ (ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ) ವರೆಗೆ ಸುಮಾರು 41.4 ಕಿ.ಮೀ. ಮಾರ್ಗ.
2. 'ಮಲ್ಲಿಗೆ' ಮಾರ್ಗ (ಕಾರಿಡಾರ್-2): ಬೈಯಪ್ಪನಹಳ್ಳಿ -ಯಶವಂತಪುರ- ಚಿಕ್ಕಬಾಣಾವರವರೆಗೆ 25 ಕಿ.ಮೀ. ಮಾರ್ಗ ನಿರ್ಮಾಣದ ಗುರಿ.
3. 'ಪಾರಿಜಾತ' ಮಾರ್ಗ (ಕಾರಿಡಾರ್-3): ನಗರದ ಹೊರ ಭಾಗವಾದ ಕೆಂಗೇರಿ- ವೈಟ್‌ಫೀಲ್ಡ್ ವರೆಗೆ 35.52 ಕಿ.ಮೀ. ಸಂಪರ್ಕ
4. 'ಕನಕ' ಮಾರ್ಗ (ಕಾರಿಡಾರ್-4): ಹೀಲಲಿಗೆ (ಚಂದಾಪುರ) ದಿಂದ ರಾಜನಕುಂಟೆ ವರೆಗೆ 46 ಕಿ.ಮೀ. ಲೈನ್ ನಿರ್ಮಾಣ.
ಆರಂಭದಲ್ಲೇ ಯೋಜನೆಗೆ ತೊಡಕು
ಬೆಂಗಳೂರು ಉಪನಗರ ರೈಲು ಯೋಜನೆಗೆ ಕೇಂದ್ರದಿಂದ ಒಪ್ಪಿಗೆ ದೊರೆತ ಎರಡು ವರ್ಷದ ಬಳಿಕ 2022 ರ ಜೂನ್ ತಿಂಗಳಲ್ಲಿ ಪ್ರಧಾನಿ ಮೋದಿ ಅವರು ಯೋಜನೆಗೆ ಆರಂಭಕ್ಕೆ ಶಂಕುಸ್ಥಾಪನೆ ನೆರವೇರಿಸಿದರು. ಅಲ್ಲಿಂದ 40 ತಿಂಗಳಲ್ಲಿ ಯೋಜನೆ ಪೂರ್ಣಗೊಳ್ಳುವ ಬಗ್ಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಭರವಸೆ ನೀಡಿದ್ದವು.
ನಾಲ್ಕು ಕಾರಿಡಾರ್ ಪೈಕಿ ಕೇವಲ ಎರಡು ಕಾರಿಡಾರ್ (ಮಲ್ಲಿಗೆ ಮತ್ತು ಕನಕ) ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಯಿತು. ಅಲ್ಲಿಂದ 2026ರ ಫೆಬ್ರವರಿ ವರೆಗೆ (48) ತಿಂಗಳು ಕಳೆದರೂ ಸಹಿತ ಒಂದೇ ಒಂದು ಮಾರ್ಗ ಪೂರ್ಣವಾಗಿಲ್ಲ. ಎರಡು ಮಾರ್ಗ ಸೇರಿ ಕೇವಲ ಶೇ. 30ರಷ್ಟು ಕೆಲಸ ಮುಗಿದಿದೆ. ನಿಧಾನಗತಿಯಲ್ಲಿ ಕಾಮಗಾರಿ ಸಾಗುತ್ತಿದ್ದು, ಈ ವಿಳಂಬ ಕೆಲವು ಕಾರಣಗಳನ್ನು ಮುಂದೆ ತಿಳಿಸಲಾಗಿದೆ.
ಬಿಎಸ್‌ಆರ್‌ಪಿ ಯೋಜನೆಗೆ ಎದುರಾದ ಸವಾಲುಗಳು
ಉಪನಗರ ರೈಲು ಯೋಜನೆಗೆಂದೆ ಸ್ಥಾಪಿತವಾದ ಕರ್ನಾಟಕ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿ ಕಂಪನಿಗೆ (K-RIDE) ಪೂರ್ಣಾವಧಿಗೆ ವ್ಯವಸ್ಥಾಪಕರಿಲ್ಲದಿರುವುದು ಹಾಗೂ ಭೂಸ್ವಾಧಿನ ಸಮಸ್ಯೆ ಪ್ರಮುಖ ತೊಡಕಾಯಿತು. ಯೋಜನೆ ಆರಂಭಕ್ಕೆ ಅಗತ್ಯವಾಗಿದ್ದ ಭೂಮಿಯಲ್ಲಿ ನೀಡುವಲ್ಲಿ ರೈಲ್ವೆ ಇಲಾಖೆ ಅಥವಾ ಸರ್ಕಾರವು ವಿಳಂಬ ಮಾಡಿದವು. ಭೂಮಿಯನ್ನು ಪಡೆಯಲು ಒಂದಷ್ಟು ಕಾನೂನು ತೊಡಕು, ಮಾಲೀಕರು ಒಪ್ಪದಿರುವ ಸಮಸ್ಯೆಗಳು ಎದುರಾದವು. ಅದೆಲ್ಲ ಸರಿಮಾಡಿಕೊಂಡು ಕೆ-ರೈಡ್‌ಗೆ ಭೂಮಿ ಹಸ್ತಾಂತರಿಸಲಾಯಿತು. ಈ ಮಧ್ಯೆ ರೈಲ್ವೆ ವಲಯ ಹಾಗೂ ಕೆ-ರೈಡ್ ಅಧಿಕಾರಿಗಳ ಮಧ್ಯೆ ಸಮನ್ವಯ ಕೊರತೆಯು ಉಂಟಾಗಿತ್ತು. ಎಸಿ ರೈಲು ಬೋಗಿಗಳ ಖರೀದಿ ಪ್ರಕ್ರಿಯೆಯಲ್ಲಿ ಒಂದಷ್ಟು ಸಮಸ್ಯೆ ಆಗಿದೆ. ಗುತ್ತಿಗೆ ಬದಲು ಇದೀಗ ಹೊಸದಾಗಿ ಖರೀದಿಸಲು ತೀರ್ಮಾನಿಸಲಾಗಿದೆ.
ಜನನಾಯಕರ ನಿರ್ಲಕ್ಷ್ಯ, ಪ್ರಚಾರದ ಗಿಮಿಕ್
ಇನ್ನೂ ಮಲ್ಲಿಗೆ ಹಾಗೂ ಕನಕ ಮಾರ್ಗದಲ್ಲಿ ಕೆಲಸ ಆರಂಭಿಸಿದ್ದ ಎಲ್ ಆಂಡ್ ಟಿ ಸಂಸ್ಥೆಯು ಗುತ್ತಿಗೆ ಕೈ ಬಿಟ್ಟು ಹೊರ ಬಂತು. ಅರ್ಧಕ್ಕೆ ನಿಂತ ಕಾಮಗಾರಿಗೆ ಮತ್ತೆ ಮರು ಟೆಂಡರ್ ಕರೆಯಲಾಯಿತು. ನಿಧಾನಗತಿಯಲ್ಲಿದ್ದ ಕಾಮಗಾರಿಗೆ ಮತ್ತೆ ವಿಳಂಬದ ಪೆಟ್ಟು ಬಿತ್ತು. ಇದೆಲ್ಲ ಬೆಳವಣಿಗೆ ಹೊತ್ತಿಗೆ ಸರ್ಕಾರದಿಂದ ಅಗತ್ಯ ಅನುದಾನ ಹಂಚಿಕೆಯಲ್ಲೂ ವಿಳಂಬ ಮಾಡಿತು. ಆಗಾಗ ರೈಲು ಅಧಿಕಾರಿಗಳು, ಸರ್ಕಾರದ ಪ್ರತಿನಿಧಿಗಳು ಕಾಮಗಾರಿ ಸ್ಥಳಕ್ಕೆ ಭೇಟಿ ಕೊಡುವ ಮೂಲಕ ಪ್ರಚಾರ ಪಡೆಯುತ್ತಿದ್ದಾರೆ. ಕಾಮಗಾರಿ ನೆನೆಗುದಿಗೆ ಬಿದ್ದರೂ ಎಚ್ಚೆತ್ತುಕೊಳ್ಳದೇ ಅದರಲ್ಲೂ ರಾಜಕಾರಣ ಮಾಡುತ್ತಿದ್ದಾರೆ. ಯೋಜನೆ ಕುಂಟುತ್ತ ಸಾಗಿದರೂ ಎಚ್ಚೆತ್ತುಕೊಳ್ಳದ ಜನಪ್ರತಿನಿಧಿಗಳ ನಿರ್ಲಕ್ಷ್ಯವು ಯೋಜನೆ ವಿಳಂಬಕ್ಕೆ ಪ್ರಮುಖ ಕಾರಣವಾಗಿದೆ.
ಬಿಎಸ್ಆರ್‌ಪಿ ಪ್ರಯೋಜನ: ಸಂಚಾರ ದಟ್ಟಣೆ ಕಡಿಮೆ ಆಗುತ್ತಾ?
ಬೆಂಗಳೂರಿನಲ್ಲಿ ಈಗಾಗಲೇ ಸಂಚಾರ ದಟ್ಟಣೆ ಮಿತಿ ಮೀರಿದೆ. ನಮ್ಮ ಮೆಟ್ರೋ, ಮೇಲ್ಸೇತುವೆ ಹೊರತಾಗಿಯು ನಿತ್ಯ ಜನರು ಟ್ರಾಫಿಕ್‌ನಲ್ಲಿ ಸಿಲುಕುವಂತಾಗಿದೆ. ಉಪನಗರ ರೈಲು ಯೋಜನೆ ಅನುಷ್ಠಾನಕ್ಕೆ ಬಂದಲ್ಲಿ ಬೆಂಗಳೂರು ಹೃದಯ ಭಾಗ ಸೇರಿದಂತೆ ಹೊರ ವಲಯದ ವೈಟ್‌ಫಿಲ್ಡ್, ಕೆಂಗೇರಿ, ದೇವನಹಳ್ಳಿ, ಚಂದಾಪುರ ಸೇರಿದಂತೆ ನಾಲ್ಕು ದಿಕ್ಕುಗಳಲ್ಲೂ ಸಂಪರ್ಕ ಸಾಧ್ಯವಾಗುತ್ತದೆ. ಆಯಾ ಭಾಗದ ಲಕ್ಷಾಂತರ ಜನರಿಗೆ ವೇಗದ, ಕಡಿಮೆ ಬೆಲೆಯ ಸಾರಿಗೆ ಸೇವೆ ಸಿಕ್ಕಂತಾಗುತ್ತದೆ. ಖಾಸಗಿ ವಾಹನಗಳ ಬಳಕೆ ಕಡಿಮೆ ಆಗಿ ಹೆಚ್ಚಿನ ಸಂಖ್ಯೆಯಲ್ಲಿ ರೈಲು ಬಳಸುವಂತಾದರೆ ಈ ಉಪನಗರ ರೈಲು ಸೇವೆಯ ಪ್ರಯೋಜನ, ಉದ್ದೇಶ ಸಾಕಾರವಾಗುತ್ತದೆ.
ಕಾರಿಡಾರ್‌ವಾರು ಯೋಜನೆ ಪೂರ್ಣ ಯಾವಾಗ?
* ಬೆನ್ನಿಗಾನಹಳ್ಳಿ-ಚಿಕ್ಕಬಾಣಾವರದ 'ಮಲ್ಲಿಗೆ' ಮಾರ್ಗ ಸ್ಥಾಪನೆಯು 2028ರ ಡಿಸೆಂಬರ್‌ಗೆ ಪೂರ್ಣ ನಿರೀಕ್ಷೆ
* ಹೀಲಲಿಗೆ-ರಾಜನಕುಂಟೆಯ 'ಕನಕ' ಮಾರ್ಗದ ಕಾಮಗಾರಿ ಜೂನ್ 2029ರ ಹೊತ್ತಿಗೆ ಪೂರ್ಣ.
* ಕೆಂಗೇರಿ-ವೈಟ್‌ಫೀಲ್ಡ್ 'ಪಾರಿಜಾತ' ಮಾರ್ಗ ನಿರ್ಮಾಣ ಮಾರ್ಚ್ 2030ಕ್ಕೆ ಮುಗಿಯುವ ನಿರೀಕ್ಷೆ.
* ಕೆಎಸ್‌ಆರ್ ಬೆಂಗಳೂರು ನಗರ-ಯಲಹಂಕ-ದೇವನಹಳ್ಳಿ 'ಸಂಪಿಗೆ' ಲೈನ್ 2030 ಮಾರ್ಚ್ ಒಳಗೆ ಮುಕ್ತ ಸಾಧ್ಯತೆ.
ಕರ್ನಾಟಕ ಬಜೆಟ್ ಮೇಲಿನ ನಿರೀಕ್ಷೆಗಳು
ಕೇಂದ್ರ ಸರ್ಕಾರ ಬಜೆಟ್ 2025ರಲ್ಲಿ ಬೆಂಗಳೂರು ಉಪನಗರ ರೈಲು ಯೋಜನೆಗಾಗಿ 350 ಕೋಟಿ ರೂ. ಅನುದಾನ ಮೀಸಲಿರಿಸಿತ್ತು. 2026ರಲ್ಲಿ 500 ಕೋಟಿ ರೂ. ಘೋಷಿಸಲಾಗಿದೆ. ಕಾಮಗಾರಿಗೆ ವೇಗ ನೀಡಲು ಇದೇ ಮಾರ್ಚ್‌ನಲ್ಲಿ ಮಂಡನೆ ಆಗಲಿರುವ "ಕರ್ನಾಟಕ ಬಜೆಟ್ 2026"ರಲ್ಲಿ ಹೆಚ್ಚಿನ ಅನುದಾನ ನೀಡುವ ನಿರೀಕ್ಷೆ ಇದೆ. ಕೆ-ರೈಡ್ ಸೇರಿ ಗುತ್ತಿಗೆ ಕಂಪನಿಗಳಿಗೆ ಅಗತ್ಯ ಸೂಚನೆ ನೀಡಬೇಕಿದೆ. ತ್ವರಿತ ಟೆಂಡರ್ ಹಾಗೂ ಭೂಸ್ವಾಧೀನ ಕ್ರಮ ಕೈಗೊಳ್ಳಲು ನಿರ್ದೇಶಿಸಬೇಕು. ಅಗತ್ಯ ಆರ್ಥಿಕ ನೆರವು ಘೋಷಿಸಬೇಕಿದೆ ಎನ್ನುವುದು ಜನರ ಬೇಡಿಕೆಯಾಗಿದೆ.
ಉಪನಗರ ರೈಲು ಯೋಜನೆಗೆ ಕರ್ನಾಟಕ ಸರ್ಕಾರ ಅಧಿಕ ಅನುದಾನ ನೀಡಬೇಕಿದೆ. 2023ರಲ್ಲಿ ರಾಜ್ಯ ಸರ್ಕಾರ ಒಟ್ಟು 1350 ಕೋಟಿ ರೂ. ಘೋಷಿಸಿತ್ತು. 2024-25ರಲ್ಲಿ 665 ಕೋಟಿ ರೂ., 2025-26ರಲ್ಲಿ 500 ಕೋಟಿ ರೂ.ಅನುದಾನ ಹಂಚಿಕೆ ಮಾಡಿತ್ತು. ಈ ಬಾರಿಯು ಎಷ್ಟು ಆರ್ಥಿಕ ನೆರವು ಘೋಷಿಸಲಿದೆ ಎನ್ನುವುದು ಕಾದು ನೋಡಬೇಕಾಗಿದೆ.
ಬೆಂಗಳೂರು ಉಪನಗರ ರೈಲು ಯೋಜನೆಯ ಬಗ್ಗೆ ಪದೇಪದೇ ಕೇಳುವ ಪ್ರಶ್ನೆಗಳು (FAQs)
1. ಕಾರಿಡಾರ್-3 ಎಂದು ಯಾವ ಮಾರ್ಗಕ್ಕೆ ಕರೆಯುತ್ತಾರೆ?
ಬೆಂಗಳೂರು ಉಪನಗರ ರೈಲು ಯೋಜನೆಯ (BSRP) ಕಾರಿಡಾರ್ 3 'ಪಾರಿಜಾತ' ಮಾರ್ಗವೆಂದು ಕರೆಯಲ್ಪಡುತ್ತದೆ. ಇದು ಕೆಂಗೇರಿ- ವೈಟ್‌ಫೀಲ್ಡ್‌ಗೆ ಕೆಎಸ್‌ಆರ್ ಬೆಂಗಳೂರು ಮತ್ತು ಕಂಟೋನ್ಮೆಂಟ್ ಮೂಲಕ ಸಂಪರ್ಕಿಸಲು ಯೋಜಿಸಿದ ಒಟ್ಟು 35.52 ಕಿ.ಮೀ. ಮಾರ್ಗವಾಗಿದೆ.
2. ಬೆಂಗಳೂರು ಉಪನಗರ ರೈಲು ಯೋಜನೆ ಉದ್ದೇಶವೇನು?
ನಗರದ ತೀವ್ರ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವುದು ಮತ್ತು ಪ್ರಯಾಣಿಕರಿಗೆ ವೇಗದ, ಕೈಗೆಟುಕುವ ದರದ, ಹಾಗೂ ಪರಿಸರ ಸ್ನೇಹಿ ಸಾರಿಗೆ ವ್ಯವಸ್ಥೆಯನ್ನು ನೀಡುವ ಉದ್ದೇಶದಿಂದ ಬೆಂಗಳೂರು ಉಪನಗರ ರೈಲು ಯೋಜನೆ ಆರಂಭಿಸಲಾಗಿದೆ.
3. ಬೆಂಗಳೂರು ಸಬ್ ಅರ್ಬನ್ ರೈಲ್ವೆ ಒಟ್ಟು ವ್ಯಾಪ್ತಿ 2026?
ಇದು ನಾಲ್ಕು ಕಾರಿಡಾರ್ ಒಳಗೊಂಡ ಯೋಜನೆಯಾಗಿದೆ. ಒಟ್ಟು 148 ಕಿಲೋ ಮೀಟರ್ ಮಾರ್ಗ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ. ಕಾಮಗಾರಿಗಳು 2030ರ ಡಿಸೆಂಬರ್‌ನಲ್ಲಿ ಪೂರ್ಣಗೊಳ್ಳಲಿವೆ.
4. ಕೇಂದ್ರ ಬಜೆಟ್‌ನಲ್ಲಿ ಬೆಂಗಳೂರು ಉಪನಗರ ರೈಲಿಗೆ ಸಿಕ್ಕ ಅನುದಾನವೆಷ್ಟು?
ಪ್ರಸಕ್ತ 2026-27ರ ಕೇಂದ್ರ ಆಯವ್ಯಯದಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬೆಂಗಳೂರು ಉಪನಗರ ರೈಲು ಯೋಜನೆ ಉತ್ತೇಜನಕ್ಕೆ 500 ಕೋಟಿ ರೂ. ಘೋಷಿಸಿದ್ದಾರೆ.
5. ಬೆಂಗಳೂರು ಉಪನಗರ ರೈಲು ಕನೆಕ್ಟಿವಿಟಿ
ಬೆಂಗಳೂರು ಉಪನಗರ ರೈಲು ಯೋಜನೆ (BSRP) ಸುಮಾರು 149 ಕಿ.ಮೀ ವ್ಯಾಪ್ತಿಯಲ್ಲಿ 4 ಕಾರಿಡಾರ್‌ಗಳ ಮೂಲಕ ನಗರದ ಪ್ರಮುಖ ಪ್ರದೇಶಗಳನ್ನು ಅಂದರೆ ಉಪನಗರಗಳಿಗೆ ಜೋಡಿಸಲಿದೆ. ಒಟ್ಟು 64 ನಿಲ್ದಾಣಗಳ ಜಾಲ ಹೊಂದಿದ್ದು, ಹೊರ ವಲಯಕ್ಕೂ ಸಂಪರ್ಕ ಸೇವೆ ನೀಡಲಿದೆ.
-
Jowar Price Today: ಕರ್ನಾಟಕದಲ್ಲಿ ಕ್ವಿಂಟಾಲ್ ಜೋಳದ ಬೆಲೆ ಎಷ್ಟಿದೆ, ಮಾರುಕಟ್ಟೆವಾರು ಪಟ್ಟಿ ಇಲ್ಲಿದೆ. -
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
ದಾವಣಗೆರೆಯಲ್ಲಿ ಹೈಡ್ರಾಮಾ: ಪ್ರದೀಪ್ ಈಶ್ವರ್ ಪ್ರಚಾರದ ವೇಳೆ ಚಪ್ಪಲಿ, ಪೊರಕೆ ತೋರಿಸಿದ ಬಿಜೆಪಿ ಕಾರ್ಯಕರ್ತರು -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger -
Vijay Mallya: ವಿಜಯ್ ಮಲ್ಯ ಆರ್ಸಿಬಿಗೆ ಇಂಗ್ಲೀಷ್ ಪದಗಳಲ್ಲಿ ಕನ್ನಡದ ವಿಶೇಷ ಸಂದೇಶ: ಭಾರೀ ವೈರಲ್ -
ಸಕಲೇಶಪುರ: ಬೆಟ್ಟದ ಭೈರವೇಶ್ವರ ದೇವಸ್ಥಾನದಲ್ಲಿ ಪ್ರೀ-ವೆಡ್ಡಿಂಗ್ ಶೂಟ್ ವೇಳೆ ಸ್ಥಳೀಯರಿಂದ ಹಲ್ಲೆ -
ಐಪಿಎಲ್ 2026: ಆರ್ಸಿಬಿ-ಎಸ್ಆರ್ಎಚ್ ಪಂದ್ಯದ ಸಮಯ, ನೇರಪ್ರಸಾರ, ಸಂಪೂರ್ಣ ತಂಡಗಳ ವಿವರ ತಿಳಿಯಿರಿ












Click it and Unblock the Notifications