Bengaluru Property Prices: ಶೀಘ್ರದಲ್ಲೇ ಹೆಚ್ಚಾಗಲಿದೆ ಬೆಂಗಳೂರಿನ ಆಸ್ತಿ ಬೆಲೆಗಳು: ಅಂಕಿಅಂಶ, ಕಾರಣ, ವಿವರ ತಿಳಿಯಿರಿ
ಬೆಂಗಳೂರು, ಸೆಪ್ಟೆಂಬರ್ 21: ಅಕ್ಟೋಬರ್ 1 ರಿಂದ ಜಾರಿಗೆ ಬರುವಂತೆ ಕರ್ನಾಟಕ ಸರ್ಕಾರವು ಆಸ್ತಿಗಳ ಮಾರ್ಗಸೂಚಿ ದರದಲ್ಲಿ ( Guidance value ) ಹೆಚ್ಚಳವನ್ನು ಘೋಷಿಸಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಪ್ರಾಪರ್ಟಿ ದರಗಳು ಶೀಘ್ರದಲ್ಲೇ ಹೆಚ್ಚಾಗಲಿವೆ. 'ಮಾರ್ಗಸೂಚಿ ದರ' ಎಂಬುದು ಸ್ಥಳ ಮತ್ತು ಆಸ್ತಿ ಪ್ರಕಾರವನ್ನು ಅವಲಂಬಿಸಿ ಸರ್ಕಾರವು ನಿಗದಿಪಡಿಸಿದ ಕನಿಷ್ಠ ಮಾರಾಟ ಬೆಲೆಯಾಗಿದೆ.
ಪರಿಷ್ಕೃತ ಮಾರ್ಗಸೂಚಿ ದರ ಸರಾಸರಿ ಶೇಕಡಾ 25 ರಿಂದ 30 ರಷ್ಟು ಹೆಚ್ಚಾಗಲಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.

ನೋಂದಣಿ ಇಲಾಖೆಯು ಕಾನೂನಿನ ಪ್ರಕಾರ, ಪ್ರತಿ ವರ್ಷ ಮಾರ್ಗಸೂಚಿ ದರವನ್ನು ಪರಿಷ್ಕರಿಸಬೇಕು ಎಂದು ಕೃಷ್ಣ ಬೈರೇಗೌಡ ತಿಳಿಸಿದ್ದಾರೆ. ಆದರೆ, ಕಳೆದ ಐದು ವರ್ಷಗಳಿಂದ ಮಾರ್ಗಸೂಚಿ ದರವನ್ನು ಪರಿಷ್ಕರಿಸಿಲ್ಲ. ಇದು ಕಪ್ಪುಹಣದ ವಹಿವಾಟಿಗೂ ಕಾರಣವಾಗುತ್ತದೆ. ಮಾರ್ಗದರ್ಶಿ ಮೌಲ್ಯವನ್ನು ಪರಿಷ್ಕರಿಸದಿರುವುದು ಕೂಡ ಪರೋಕ್ಷವಾಗಿ ಕಪ್ಪುಹಣದ ವಹಿವಾಟಿಗೆ ಅವಕಾಶ ಮಾಡಿಕೊಟ್ಟಿದೆ. ಹಾಗಾಗಿ ಅಕ್ಟೋಬರ್ 1ರಿಂದ ಹೊಸ ಮಾರ್ಗಸೂಚಿ ಮೌಲ್ಯ ಜಾರಿಯಾಗಲಿದೆ ಎಂದು ಅವರು ತಿಳಿಸಿದ್ದಾರೆ.
ಮಾರ್ಗಸೂಚಿ ಮೌಲ್ಯದ ಪರಿಷ್ಕರಣೆ ಕುರಿತು ವಿವರಿಸಿದ ಸಚಿವರು, ಮಾರುಕಟ್ಟೆ ದರ ಮತ್ತು ಮಾರ್ಗಸೂಚಿ ದರವು ಸಮಾನವಾಗಿರುವ ಪ್ರದೇಶಗಳಲ್ಲಿ ಮಾರ್ಗಸೂಚಿ ಮೌಲ್ಯವನ್ನು ಶೇಕಡಾ 10 ರಷ್ಟು ಹೆಚ್ಚಿಸಲಾಗಿದೆ. ಮಾರುಕಟ್ಟೆ ದರವು ಮಾರ್ಗಸೂಚಿ ಮೌಲ್ಯಕ್ಕಿಂತ 200 ಪಟ್ಟು ಹೆಚ್ಚಿರುವ ಪ್ರದೇಶಗಳಲ್ಲಿ, ಪರಿಷ್ಕೃತ ದರವನ್ನು ಶೇ.20 ರಿಂದ ಶೇ.25 ರಷ್ಟು ಹೆಚ್ಚಿಸಲಾಗಿದೆ ಎಂದು ಸಚಿವರು ಹೇಳಿದ್ದಾರೆ.
ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಪ್ರದೇಶದಲ್ಲಿನ ಮಾರುಕಟ್ಟೆ ದರವು ಮಾರ್ಗಸೂಚಿ ಮೌಲ್ಯಕ್ಕಿಂತ 500 ಪಟ್ಟು ಹೆಚ್ಚಾಗಿದೆ. 'ರಾಷ್ಟ್ರೀಯ ಹೆದ್ದಾರಿಯಲ್ಲಿನ ಜಮೀನಿಗೆ ಮಾರ್ಗಸೂಚಿ ಮೌಲ್ಯ 5ರಿಂದ 10 ಲಕ್ಷ ಇದ್ದರೆ, ಮಾರುಕಟ್ಟೆ ಬೆಲೆ 10 ಕೋಟಿ ರೂ.ಗೂ ಅಧಿಕವಾಗಿದೆ. ಅಂತಹ ಪ್ರದೇಶಗಳಲ್ಲಿ ಹೊಸ ಮಾರ್ಗದರ್ಶಿ ಮೌಲ್ಯವನ್ನು ಶೇ 50 ರಷ್ಟು ಹೆಚ್ಚಿಸಲಾಗಿದೆ' ಎಂದು ಅವರು ತಿಳಿಸಿದ್ದಾರೆ.

ಅಲ್ಲದೆ, ಮಾರ್ಗಸೂಚಿ ಮೌಲ್ಯವು ಮಾರುಕಟ್ಟೆ ದರಕ್ಕಿಂತ ಹೆಚ್ಚಿದ್ದರೆ, ಅಂತಹ ಪ್ರದೇಶಗಳಲ್ಲಿ ಮಾರ್ಗದರ್ಶಿ ಮೌಲ್ಯವನ್ನು ಕಡಿಮೆ ಮಾಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸಚಿವರು ಹೇಳಿದ್ದಾರೆ.
ಮಾರ್ಗಸೂಚಿ ಮೌಲ್ಯವನ್ನು ಪ್ರತಿ ಪ್ರದೇಶಕ್ಕೆ 0 ರಿಂದ 50 ಪ್ರತಿಶತಕ್ಕೆ ಹೆಚ್ಚಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಅಕ್ಟೋಬರ್ 1 ರಂದು, ಮೊದಲ ಹಂತವಾಗಿ, ಬೆಂಗಳೂರಿನಲ್ಲಿ ಪರಿಷ್ಕೃತ ದರವನ್ನು ಜಾರಿಗೆ ತರಲಾಗುವುದು. ಪ್ರತಿ ಜಿಲ್ಲೆಯಲ್ಲಿ ಚರ್ಚಿಸಿ ಹಂತಹಂತವಾಗಿ ಹೊಸ ಮಾರ್ಗಸೂಚಿ ಮೌಲ್ಯವನ್ನು ಜಾರಿಗೊಳಿಸಲಾಗುವುದು ಎಂದು ಕೃಷ್ಣಾ ಬೈರೇಗೌಡ ಹೇಳಿದರು.

ಮಾರ್ಗಸೂಚಿ ಮೌಲ್ಯ ಮತ್ತು ಮಾರುಕಟ್ಟೆ ಬೆಲೆಯ ನಡುವೆ ಅಜಗಜಾಂತರ ವ್ಯತ್ಯಾಸ ಇರಬಾರದು ಎಂಬ ಕಾನೂನಿದೆ ಎಂದು ತಿಳಿಸಿದ ಸಚಿವರು, ಈ ನ್ಯೂನತೆಯನ್ನು ಸರಿಪಡಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದ್ದಾರೆ.
ಮಾರ್ಗಸೂಚಿ ಮೌಲ್ಯ ಪರಿಷ್ಕರಣೆ ಬಗ್ಗೆ ಯಾರಾದರೂ ಆಕ್ಷೇಪಣೆಗಳನ್ನು ಹೊಂದಿದ್ದರೆ, ಅದನ್ನು ಸಹ ಸಲ್ಲಿಸಬಹುದು. ಅಧಿಕಾರಿಗಳು ಅದನ್ನು ಗಮನದಲ್ಲಿಟ್ಟುಕೊಂಡು ಹೊಸ ಮಾರ್ಗದರ್ಶಿ ಮೌಲ್ಯವನ್ನು ಜಾರಿಗೆ ತರುತ್ತಾರೆ ಎಂದು ತಿಳಿಸಿದ್ದಾರೆ.
ಇತ್ತೀಚಿನ ವರದಿಯ ಪ್ರಕಾರ, ಬೆಂಗಳೂರಿನ ಬೈಯಪ್ಪನಹಳ್ಳಿ- ವೈಟ್‌ಫೀಲ್ಡ್ ಮೆಟ್ರೋ ಯೋಜನೆಯು ವರ್ಷದ ಮಧ್ಯದ ವೇಳೆಗೆ ಪೂರ್ಣವಾಗಿ ಕಾರ್ಯನಿರ್ವಹಿಸುವ ಸಾಧ್ಯತೆಯಿದೆ. ಮುಂದಿನ ಎರಡು ವರ್ಷಗಳಲ್ಲಿ ವೈಟ್‌ಫೀಲ್ಡ್‌ನಲ್ಲಿ ಕಚೇರಿ ಸ್ಥಳಗಳ ಬಾಡಿಗೆಗಳು ಸುಮಾರು 8 ರಿಂದ 10 ಪ್ರತಿ ಶತದಷ್ಟು ಹೆಚ್ಚಾಗುವ ಸಾಧ್ಯತೆಯಿದೆ.
ಉತ್ತರ ಬೆಂಗಳೂರಿನ ಪಾಪರ್ಟಿ ದರಗಳು ಹೆಚ್ಚಾಗುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.












Click it and Unblock the Notifications