Bengaluru: ಸಿಬಿಐ ಅಧಿಕಾರಿಗಳ ಸೋಗಿನಲ್ಲಿ ಬೆಂಗಳೂರು ಐಟಿ ಉದ್ಯೋಗಿಗೆ ₹3.7 ಕೋಟಿ ವಂಚನೆ
ತಂತ್ರಜ್ಞಾನ ಎಷ್ಟೇ ಮುಂದುವರೆದರು ವಂಚಕರು ಹೊಸ ಹೊಸ ವಿಧಾನಗಳಲ್ಲಿ ಜನರಿಗೆ ಟೋಪಿ ಹಾಕುತ್ತಲೇ ಇದ್ದಾರೆ. ಇದೀಗ ಬೆಂಗಳೂರಿನಲ್ಲಿ ಐಟಿ ಉದ್ಯೋಗಿಯೊಬ್ಬರು ವಂಚಕರಿಂದ ₹3.7 ಕೋಟಿ ಕಳೆದುಕೊಂಡು ಕಂಗಾಲಾಗಿದ್ದಾರೆ.
ಬೆಂಗಳೂರಿನ ಇನ್ಫೋಸಿಸ್ ಹಿರಿಯ ಉದ್ಯೋಗಿಯೊಬ್ಬರಿಗೆ ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ (ಟ್ರಾಯ್), ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಸಿಬಿಐ) ಮತ್ತು ಮುಂಬೈ ಪೊಲೀಸ್ ಅಧಿಕಾರಿಗಳೆಂದು ಬಿಂಬಿಸಿಕೊಂಡ ದುಷ್ಕರ್ಮಿಗಳು ಬರೊಬ್ಬರಿ 3.7 ಕೋಟಿ ರೂಪಾಯಿ ಉಂಡೆ ನಾಮ ತಿಕ್ಕಿದ್ದಾರೆ.

ಕೋಟ್ಯಂತರ ಹಣವನ್ನು ಕಳೆದುಕೊಂಡ ಸಂತ್ರಸ್ತೆ ನವೆಂಬರ್ 25 ರಂದು ವೈಟ್‌ಫೀಲ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಮುಂಬೈಗೆ ಬರುವಂತೆ ಸಂತ್ರಸ್ತೆಗೆ ಬೆದರಿಕೆ!
ವರದಿಯ ಪ್ರಕಾರ, ನವೆಂಬರ್ 21 ರಂದು ಸಂತ್ರಸ್ತೆಗೆ ಅಪರಿಚಿತ ವ್ಯಕ್ತಿಯೊಬ್ಬ ಫೋನ್ ಕರೆ ಮಾಡಿದ್ದು, ಮುಂಬೈನ ವಕೋಲಾ ಪೊಲೀಸ್ ಠಾಣೆಯಲ್ಲಿ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಸಂತ್ರಸ್ತೆ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ತಿಳಿಸಿದ್ದಾನೆ. ಬಳಿಕ ಮತ್ತೆ ಕರೆ ಮಾಡಿದ ವ್ಯಕ್ತಿ ತನ್ನ ಆಧಾರ್ ವಿವರಗಳನ್ನು ಬಳಸಿಕೊಂಡು ಅನೇಕ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಬೆದರಿಕೆ ಹಾಕಿದ್ದು ತನಿಖೆಗಾಗಿ ಮುಂಬೈಗೆ ಬರುವಂತೆ ಹೇಳಿದ್ದಾನೆ.
ಹಲವು ದಿನಗಳ ಕಾಲ ಕರೆ ಮಾಡಿರುವ ವಂಚಕರು ನಂತರ ಪ್ರಕರಣದ ಇತ್ಯರ್ಥಕ್ಕೆ ಸಹಾಯ ಮಾಡುವುದಾಗಿ ಸಂತ್ರಸ್ತೆಗೆ ನಂಬಿಸಿದ್ದಾರೆ. ಕರೆ ಮಾಡಿದವರು ಕರೆಯನ್ನು ಹಿರಿಯ ಅಧಿಕಾರಿಗೆ ವರ್ಗಾಯಿಸುತ್ತಿರುವುದಾಗಿ ಹೇಳಿದ್ದು ಸಂತ್ರಸ್ತೆಗೆ ಮಾತನಾಡಲು ಕೇಳಿದ್ದಾರೆ.
ಹಿರಿಯ ಪೊಲೀಸ್ ಅಧಿಕಾರಿ ಎಂದು ಹೇಳಿಕೊಂಡ ವ್ಯಕ್ತಿ ಸಂತ್ರಸ್ತ ಮಹಿಳೆಗೆ ವಿಡಿಯೋ ಕರೆ ಮಾಡಿ, ಸುತ್ತಲೂ ಪೊಲೀಸರಿರುವ ಪೊಲೀಸ್ ಠಾಣೆಯಲ್ಲಿ ಇರುವಂತೆ ಮಾತನಾಡಿದ್ದಾರೆ. ಪ್ರಕರಣ ರದ್ದು ಮಾಡಲು ಮತ್ತು ಬಂಧಿಸುವುದನ್ನು ತಪ್ಪಿಸಲು ಅನೇಕ ಖಾತೆಗಳಿಗೆ ಹಣ ವರ್ಗಾವಣೆ ಮಾಡಲು ಕೇಳಿದ್ದಾರೆ.
ವಂಚಕರ ಮಾತಿಗೆ ಹೆದರಿದ ಸಂತ್ರಸ್ತೆ ₹3.7 ಕೋಟಿಯನ್ನು ಹಲವು ಖಾತೆಗಳಿಗೆ ವರ್ಗಾವಣೆ ಮಾಡಿದ್ದು, ಹಣ ವರ್ಗಾವಣೆ ಮಾಡಿದ ಬಳಿಕ ಕರೆ ಮಾಡಿದವರು ವಾಪಸ್ ಪಡೆದಿಲ್ಲ ಎನ್ನಲಾಗಿದೆ. ಬೆಂಗಳೂರು ಪೊಲೀಸರು ಐಪಿಸಿ ಸೆಕ್ಷನ್ 419 ಮತ್ತು 420 ಅಡಿಯಲ್ಲಿ ಪ್ರಕರಣ ದಾಖಲಿಸಿದ್ದು, ತನಿಖೆ ಆರಂಭಿಸಿದ್ದಾರೆ.
ನಂತರ ಪ್ರಕರಣವನ್ನು ಅಪರಾಧ ತನಿಖಾ ಇಲಾಖೆಗೆ (ಸಿಐಡಿ) ಹಸ್ತಾಂತರಿಸಲಾಗಿದೆ. ವಂಚಕರು ಭಾರಿ ಮೊತ್ತವನ್ನು ವಂಚಿಸಿದ್ದು, ಇಂತಹ ಅಪರಾಧಗಳ ಬಗ್ಗೆ ಜಾಗರೂಕರಾಗಿರಿ ಮತ್ತು ನಕಲಿ ಬೆದರಿಕೆಗಳಿಗೆ ಗಾಬರಿಯಾಗಬೇಡಿ ಎಂದು ಬೆಂಗಳೂರು ಪೊಲೀಸರು ನಿವಾಸಿಗಳಿಗೆ ಮನವಿ ಮಾಡಿದ್ದಾರೆ.












Click it and Unblock the Notifications