ಬೆಂಗಳೂರಿನಲ್ಲಿ ದಾಖಲೆ ಬರೆದ ವರುಣ; ಈ ವರ್ಷ 170.6 ಸೆಂಮೀ ಮಳೆ
ಬೆಂಗಳೂರು, ಅ.16: ಮಳೆ ಪ್ರಾರಂಭವಾದಾಗಿನಿಂದ ಬೆಂಗಳುರಿನಲ್ಲಿ ಭಾರೀ ಮಳೆ ಸುರಿದಿದೆ. ನಗರದಲ್ಲಿ ವರುಣನ ಆರ್ಭಟ ಮುಂದುವರೆಯುತ್ತಲೇ ಇದೆ. ಈ ವರ್ಷ ನಗರದಲ್ಲಿ 170.6 ಸೆಂಟಿಮೀಟರ್ ಮಳೆಯಾಗಿದೆ.
ಈ ಬಾರಿಯ ನೈಋತ್ಯ ಮಾನ್ಸೂನ್, ಬೆಂಗಳೂರು ಮತ್ತು ದಕ್ಷಿಣ ಒಳನಾಡಿನ ಕರ್ನಾಟಕದ ಇತರ ಭಾಗಗಳಲ್ಲಿ ಅಸಾಧಾರಣ ಮಳೆಗಾಲವಾಗಿ ಮಾರ್ಪಟ್ಟಿದೆ. ಈ ಹಿನ್ನೆಲೆ ಮಳೆ ಸುರಿಯುತ್ತಲೇ ಇದ್ದು, ಈ ದಾಖಲೆಗೆ ಕಾರಣವಾಗಿದೆ.
ಈ ವರ್ಷದ ಭಾರೀ ಮಳೆಯು ಈಗಾಗಲೇ ಬೆಂಗಳೂರಿನಲ್ಲಿ ಪ್ರವಾಹ ಉಂಟುಮಾಡಿದೆ. ನಗರದ ಜನರ ಜೀವನವನ್ನು ಅಸ್ತವ್ಯಸ್ತಗೊಳಿಸಿ, ಹಲವು ಮೂಲಸೌಕರ್ಯವನ್ನು ಹಾಳು ಮಾಡಿದೆ.
ಭಾರತೀಯ ಹವಾಮಾನ ಇಲಾಖೆ ಮಾಹಿತಿಯ ಪ್ರಕಾರ, ಈ ವರ್ಷ ಬೆಂಗಳೂರು ನಗರ ವೀಕ್ಷಣಾಲಯದ ಅಳತೆಯ ಪ್ರಕಾರ ಶನಿವಾರ ಬೆಳಗ್ಗೆ 8.30 ರವರೆಗೆ 166 ಸೆಂಟಿಮೀಟರ್‌ಗಳಷ್ಟು ಮಳೆ ದಾಖಲಾಗಿದೆ.

ಈ ವರ್ಷ ಸರಾಸರಿ 170.6 ಸೆಂಮೀ ಮಳೆ
ಈ ಬಾರಿಯ ಮಳೆ ಬೆಂಗಳೂರಿನಲ್ಲಿ ಸಾರ್ವಕಾಲಿಕ ದಾಖಲೆ ಬರೆದದಿದೆ. 2017 ರಲ್ಲಿ ಬೆಂಗಳೂರು ನಗರ ವೀಕ್ಷಣಾಲಯವು ಅಳತೆ ಮಾಡಿದ 170 ಸೆಂಟಿಮೀಟರ್‌ಗಳಿಗಿಂತ ಈ ವರ್ಷದ ಮಳೆ ಅಧಿಕವಾಗಿದೆ.
ಶನಿವಾರ ರಾತ್ರಿ 8.30 ರ ಹೊತ್ತಿಗೆ, ವೀಕ್ಷಣಾಲಯವು 12 ಗಂಟೆಗಳ ಅವಧಿಯಲ್ಲಿ ಇನ್ನೂ 4.6 ಸೆಂಟಿಮೀಟರ್ ಮಳೆಯನ್ನು ದಾಖಲಿಸುವ ಮೂಲಕ 2017 ರ ದಾಖಲೆಯನ್ನು ಮುರಿದಿದೆ. ಈ ವರ್ಷದ ಒಟ್ಟು ಮಳೆಯ ಪ್ರಮಾಣವು 170.6 ಸೆಂಟಿಮೀಟರ್.
ಇನ್ನು, ಎಚ್‌ಎಎಲ್ ವಿಮಾನ ನಿಲ್ದಾಣದಲ್ಲಿರುವ ಭಾರತೀಯ ಹವಾಮಾನ ಇಲಾಖೆ ವೀಕ್ಷಣಾಲಯವು ಈ ವರ್ಷ 170.3 ಸೆಂ.ಮೀ ಮಳೆಯನ್ನು ದಾಖಲಿಸಿದೆ, ಇದು ಮತ್ತೊಂದು ಸಾರ್ವಕಾಲಿಕ ದಾಖಲೆಯಾಗಿದೆ.

ಬೆಂಗಳೂರಿನಲ್ಲಿ ಗುಡುಗು, ಮಿಂಚು ಸಹಿತ ಮಳೆ
ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಿಗೆ ಅಕ್ಟೋಬರ್ 17 ರಂದು ಬೆಳಗ್ಗೆ 8.30 ರವರೆಗೆ ಹವಾಮಾನ ಇಲಾಖೆ ಹಳದಿ ಅಲರ್ಟ್ ನೀಡಿದೆ. ಹೀಗಾಗಿ ನಗರದಲ್ಲಿ ಇನ್ನೂ ಕೆಲವು ದಿನ ಹೆಚ್ಚಿನ ಮಳೆಯಾಗುವ ಮುನ್ಸೂಚನೆ ಇದೆ ಎಂದು ಐಎಂಡಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬಿಬಿಎಂಪಿ ವ್ಯಾಪ್ತಿಯ ಪ್ರದೇಶಗಳಲ್ಲೂ ವ್ಯಾಪಕ ಮಳೆ ಸಾಧ್ಯತೆ ಇದೆ. ಅದರಲ್ಲೂ ಮಹದೇವಪುರ ಮತ್ತು ಆರ್.ಆರ್.ನಗರ ವಲಯಗಳಲ್ಲಿ ಅಧಿಕ ಮಳೆ ಆಗಬಹುದು ಎಂದು ನಿಗಾ ಕೇಂದ್ರ ಅಂದಾಜಿಸಿದೆ.

ತುಂಬಿದ ಚರಂಡಿಗಳು, ವಾಹನ ಸವಾರರ ಪರದಾಟ
ಶನಿವಾರ ನಗರದ ಹಲವೆಡೆ ಗುಡುಗು ಸಹಿತ ಮಳೆಯಾಗಿದ್ದು, ರಸ್ತೆಗಳು ಜಲಾವೃತಗೊಂಡು ಟ್ರಾಫಿಕ್ ಜಾಮ್ ಉಂಟಾಗಿದೆ. ಸುರಂಜಾಸ್ ದಾಸ್ ರಸ್ತೆ, ಎಚ್‌ಎಎಲ್ ಮುಖ್ಯ ಗೇಟ್ ಬಳಿ ಭಾರಿ ಗುಂಡಿ ಬಿದ್ದು ಅವ್ಯವಸ್ಥೆ ಉಂಟಾಗಿದೆ. ಅಪಾಯವನ್ನು ತಡೆಯಲು ಪೊಲೀಸರು ಬ್ಯಾರಿಕೇಡ್ ಹಾಕಿದ್ದರಿಂದ ಮಾರತ್ತಹಳ್ಳಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಗೆ ಸಂಚಾರ ದಟ್ಟಣೆ ಉಂಟಾಗಿತ್ತು.
ಹೆಣ್ಣೂರು ಕೆಳಸೇತುವೆಯಲ್ಲಿಯೂ ಗುಂಡಿಗಳು ಕಾಣಿಸಿಕೊಂಡಿದ್ದು, ಹೆಬ್ಬಾಳ ಮತ್ತು ಕೆಆರ್ ಪುರಂ ಕಡೆಗೆ ಸಂಚಾರ ನಿಧಾನವಾಯಿತು. ಕೆಆರ್ ಪುರಂನ ರಸ್ತೆಯ ಇಕ್ಕೆಲಗಳಲ್ಲಿ ಟ್ರಾಫಿಕ್ ಜಾಮ್ ಕೂಡ ಉಂಟಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಜನರು ಪ್ರವಾಹದಿಂದ ತತ್ತರಿಸುತ್ತಿದ್ದರೂ, ಸ್ಥಳೀಯ ಸಂಸ್ಥೆಗಳು ಸರಿಯಾಗಿ ಕ್ರಮ ಕೈಗೊಳ್ಳುತ್ತಿಲ್ಲ ಎಂದು ನೆಟ್ಟಿಗರು ಆರೋಪಿಸಿದ್ದಾರೆ.

ಸಹಾಯಕ್ಕೆ ಧಾವಿಸಿದ ಬಿಬಿಎಂಪಿ ಕಾರ್ಯಕರ್ತರು
ದಕ್ಷಿಣ ಬೆಂಗಳೂರಿನ ವಿವಿ ಪುರಂನಲ್ಲಿರುವ ಅಪಾರ್ಟ್‌ಮೆಂಟ್ ಸಮುಚ್ಚಯದ ನೆಲಮಾಳಿಗೆಯು ಭಾರೀ ಮಳೆಯಿಂದಾಗಿ ಜಲಾವೃತವಾಗಿದೆ. ಈ ವೇಳೆ ಬಿಬಿಎಂಪಿ ಕಾರ್ಯಕರ್ತ ಸ್ಥಳಕ್ಕೆ ತೆರಳಿ ನೆಲಮಾಳಿಗೆಯ ನೀರು ಖಾಲಿ ಮಾಡುವಲ್ಲಿ ಯಶಸ್ವಿಯಾದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಹೊಸದಾಗಿ ನಿರ್ಮಿಸಲಾದ ಎಕ್ಸ್‌ಪ್ರೆಸ್‌ವೇಯಲ್ಲಿ ನೀರು ನಿಂತಿದ್ದರಿಂದ ಮೈಸೂರಿಗೆ ವಾಹನ ಸಂಚಾರಕ್ಕೆ ತೊಂದರೆಯಾಗಿದೆ. ಹೀಗಾಗಿ ಪೊಲೀಸರು ನಾಗಮಂಗಲ, ಪಾಂಡವಪುರ, ಶ್ರೀರಂಗಪಟ್ಟಣ ಮಾರ್ಗವಾಗಿ ಮೈಸೂರು ಕಡೆಗೆ ಸಂಚಾರ ಮಾರ್ಗ ಬದಲಿಸಿದ್ದರು.












Click it and Unblock the Notifications