ಕೆಂಗೇರಿ ಕೆರೆಗೆ ಮತ್ತೆ ಜೀವಜಲ: ಅಂತರ್ಜಲ ಮರುಪೂರಣ ಪ್ರಗತಿ: BWSSB
ಬೆಂಗಳೂರು, ಮಾರ್ಚ್ 24: ಬೆಂಗಳೂರಿನಲ್ಲಿ ತಿಂಗಳಿನಿಂದ ನೀರಿಗೆ ಹಾಹಾಕಾರ ಶುರುವಾಗಿದೆ. ಈ ಮಧ್ಯೆ ಬೆಂಗಳೂರು ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿಯ (BWSSB) ವತಿಯಿಂದ ಕೆಂಗೇರಿ ಕೆರೆಗೆ ಸಂಸ್ಕರಿಸಿದ ನೀರನ್ನು ಹರಿಸುವ ಮೂಲಕ ಕುಸಿದಿರುವ ಅಂತರ್ಜಲವನ್ನು ಮರುಪೂರಣಗೊಳಸಲು ಮುಂದಾಗಿದೆ.
ಕೆರೆಗೆ ನೀರು ಹರಿಸಲು ಕೈಗೊಂಡ ಕಾಮಗಾರಿಯನ್ನು ದಾಖಲೆ ಕಡಿಮೆ ಸಮಯದಲ್ಲಿ ಜಲಮಂಡಳಿ ಪೂರ್ಣಗೊಳಿಸಿದೆ. ಇದರ ಬೆನ್ನಲ್ಲೆ ನೀರು ಹರಿಸುವ ಕಾರ್ಯ ಆರಂಭಿಸಿದೆ. ಇದನ್ನು ಭಾನುವಾರ ಜಲಮಂಡಳಿ ಅಧ್ಯಕ್ಷ ಡಾ.ರಾಮ್ ಪ್ರಸಾತ್ ಮನೋಹರ್ ಅವರು ಪರಿಶೀಲಿಸಿದರು.

ಈ ವೇಳೆ ಮಾತನಾಡಿದ ಅವರು, ವೃಷಭಾವತಿ ವ್ಯಾಲಿಯಲ್ಲಿರುವ ತ್ಯಾಜ್ಯ ನೀರು ಸಂಸ್ಕರಣಾ ಘಟಕ, ನಾಯಂಡಹಳ್ಳಿ ಕೆರೆ, ಕೆಂಗೇರಿ ತ್ಯಾಜ್ಯ ನೀರು ಶುದ್ಧೀಕರಣ ಘಟಕದಿಂದ ಸಂಸ್ಕರಿಸಿದ ನೀರನ್ನು ಕೆಂಗೇರಿ ಕೆರೆಗೆ ತುಂಬಿಸಲಾಗುತ್ತಿದೆ. ಸಂಸ್ಕರಿಸಿದ ನೀರನ್ನು ದುಬಾಸಿಪಾಳ್ಯ, ಹೊಸಕೆರಳ್ಳಿ ಹಾಗೂ ಹಲಗೇವಡೆರಹಳ್ಳಿ ಕೆರೆಗಳಿಗೆ ತುಂಬಿಸುವ ಕಾಮಗಾರಿಯೂ ಚಾಲನೆಯಲ್ಲಿದೆ ಎಂದು ಅವರು ತಿಳಿಸಿದರು.
ಪೈಪ್‌ಲೈನ್‌ಗಳಿಂದ ಕೆರೆಗಳಿಗೆ ನೀರು
ನಗರದಲ್ಲಿ ಎರಡನೇ ಹಂತದಲ್ಲಿ ಸಂಸ್ಕರಿಸಿದ ನೀರನ್ನು ಕೆರೆಗಳಿಗೆ ತುಂಬಿಸುವ ಕಾರ್ಯಕ್ಕೆ ಈಗಾಗಲೇ ಚಾಲನೆ ನೀಡಲಾಗಿತ್ತು. ಇದರ ಹಿನ್ನಲೆಯಲ್ಲಿ ಕೆಲವು ದಿನಗಳ ಹಿಂದೆ ಕೆಂಗೇರಿ ಕೆರೆಗೆ ಭೇಟಿ ನೀಡಿ ಕಾಮಗಾರಿಯ ಪ್ರಗತಿಯನ್ನು ಚುರುಕುಗೊಳಿಸುವಂತೆ ಸೂಚಿಸಲಾಗಿದೆ. ಇಂದು ಕೆರೆಗೆ ನೀರು ಹರಿಸುವ ಪೈಪ್ ಲೈನ್ ಅಳವಡಿಸಲಾಗಿದ್ದು ನೀರು ಹರಿಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು.
ಜಲಮಂಡಳಿಯ ವತಿಯಿಂದ ದಾಖಲೆಯ ಸಮಯದಲ್ಲಿ ಅಗತ್ಯ ಕಾಮಗಾರಿಯನ್ನು ಪೂರೈಸಲಾಗಿದೆ. ಬತ್ತಿ ಹೋಗಿದ್ದ ಜಲಮೂಲವಾದ ಕೆಂಗೇರಿ ಕೆರೆಗೆ ಮತ್ತೊಮ್ಮೆ ಜೀವ ಜಲ ತುಂಬಿಸಲಾಗುತ್ತಿದೆ. ಈ ಮೂಲಕ ಅಂತರ್ಜಲ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ.

14 ಕೆರೆಗಳಿಗೆ ನೀರು ತುಂಬಿಸುವ ಕಾರ್ಯ ಪ್ರಗತಿ
ಇನ್ನು ಕೆಲವೇ ದಿನಗಳಲ್ಲಿ ಈ ಕೆರೆ ತುಂಬಲಿದ್ದು ಅಂತರ್ಜಲ ಮರುಪೂರಣ ಪ್ರಾರಂಭವಾಗಲಿರುವುದು ಸಂತಸದ ವಿಷಯವಾಗಿದೆ. ಈಗಾಗಲೇ ನಾಯಂಡಹಳ್ಳಿ ಕೆರೆ ಸೇರಿದಂತೆ 14 ಕೆರೆಗಳಿಗೆ ನೀರು ತುಂಬಿಸಲಾಗುತ್ತಿದೆ ಎಂದು ವಿವರಿಸಿದರು.
ಮುಂದಿನ ದಿನಗಳಲ್ಲಿ ಹೆಚ್ಚಿನ ಕೆರೆಗಳಿಗೆ ನೀರನ್ನು ತುಂಬಿಸುವುದು ಜಲಮಂಡಳಿಯ ಗುರಿಯಾಗಿದೆ. ನಗರದಲ್ಲಿ ಅವ್ಯಾಹತವಾಗಿ ಅಂತರ್ಜಲದ ಬಳಕೆಯಾಗುತ್ತಿದೆ. ಭವಿಷ್ಯದ ನೀರಿನ ಅವಶ್ಯಕತೆ ಪೂರೈಸಲು ಅಂತರ್ಜಲ ಮರುಪೂರಣಕ್ಕೆ ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಜಲಮಂಡಳಿಯ ವತಿಯಿಂದ ಕೈಗೊಳ್ಳಲಾಗುತ್ತಿದೆ ಎಂದರು.
1 ಲಕ್ಷ ಲೀಟರ್ ನೀರು ಉಚಿತ ಪೂರೈಕೆ
ಭಾನುವಾರ ನಗರದ ಬಹುತೇಕ ಪ್ರದೇಶಗಳಿಗೆ ಜಲಮಂಡಳಿ ಅಧ್ಯಕ್ಷರು ಭೇಟಿ ನೀಡಿದರು. ನಾಯಂಡಹಳ್ಳಿ-ಪಂತರಪಾಳ್ಯದ ಅಂಬೇಡ್ಕರ್ ಸ್ಲಂ, ಗಾಂಧಿನಗರ ಮತ್ತು ಬಂಗಾರಪ್ಪ ನಗರ ಸ್ಲಂಗಳಿಗೆ ಭಾನುವಾರ ಬೆಳಗ್ಗೆ ಭೇಟಿ ನೀಡಿ, ಕುಡಿಯುವ ನೀರಿನ ಪೂರೈಕೆಯ ಬಗ್ಗೆ ಪರಿಶೀಲನೆ ನಡೆಸಿದರು.
ಬಡ ಜನರು ಹೆಚ್ಚಾಗಿ ವಾಸಿಸುವ ಕೊಳಚೆ ಪ್ರದೇಶಗಳು ಹಾಗೂ ಜನಸಾಂದ್ರತೆ ಹೆಚ್ಚಾಗಿರುವ ಪ್ರದೇಶಗಳಲ್ಲಿ ಕುಡಿಯುವ ನೀರು ಸರಬರಾಜಿಗೆ ಆದ್ಯತೆ ನೀಡಲಾಗುತ್ತಿದೆ. ಇವರಿಗೆ ನಿತ್ಯ 1 ಲಕ್ಷ ಲೀಟರ್ ಗಳಷ್ಟು ಕುಡಿಯುವ ನೀರನ್ನು ಉಚಿತವಾಗಿ ಸರಬರಾಜು ಮಾಡಲಾಗುತ್ತಿದೆ ಎಂದು ಹೇಳಿದರು.
ಇನ್ನೂ ಕಾವೇರಿ ನೀರಿನ ಪೈಪ್ ಒಡೆದಿತ್ತು. ಅದನ್ನು ತ್ವರಿತ ರೀತಿಯಲ್ಲಿ ದುರಸ್ತಿ ಮಾಡುವ ಮುಖೇನ್ ಪೋಲಾಗುತ್ತಿದ್ದ ನೀರನ್ನು ತಡೆಯುವಲ್ಲಿ ಜಲಮಂಡಳಿ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಅಧ್ಯಕ್ಷರು, ಜಲಮಂಡಳಿ ಅಧಿಕಾರಿಗಳು, ಸಿಬ್ಬಂದಿ ಕಾರ್ಯ ಶ್ಲಾಘಿಸಿದರು.











Click it and Unblock the Notifications