Kempegowda International Airport: ಬೆಂಗಳೂರಿನಿಂದ ಹೊರಡುವ ವಿಮಾನಗಳಲ್ಲಿ ಕೇಳಲಿದೆ ಕನ್ನಡ
ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎ)ಕ್ಕೆ ಬರುವ ಮತ್ತು ಇಲ್ಲಿಂದ ಹೊರಡುವ ಎಲ್ಲಾ ವಿಮಾನಗಳಲ್ಲಿ ಮೊದಲ ಪ್ರಕಟಣೆ ಕನ್ನಡದಲ್ಲೇ ಇರಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ್ ಜೋಶಿ ಆಗ್ರಹಿಸಿದ್ದಾರೆ. ಬೆಂಗಳೂರು ಇಂಟರ್‌ನ್ಯಾಶನಲ್ ಏರ್‌ಪೋರ್ಟ್ ಲಿಮಿಟೆಡ್ (ಬಿಐಎಎಲ್) ಅಧಿಕಾರಿಗಳನ್ನು ಭೇಟಿ ಮಾಡಿದ ಅವರು, ಇದರ ಬಗ್ಗೆ ಚರ್ಚೆ ನಡೆಸಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆದರೆ ಶೀಘ್ರದಲ್ಲೇ ಬೆಂಗಳೂರಿಗೆ ಬರುವ ಮತ್ತು ಇಲ್ಲಿಂದ ಹೊರಡುವ ವಿಮಾನಗಳಲ್ಲಿ ಕನ್ನಡ ಡಿಂಡಿಮ ಮೊಳಗಲಿದೆ.
ಮಹೇಶ್ ಜೋಶಿ ಅವರು ಕನ್ನಡದಲ್ಲಿ ಪ್ರಕಟಣೆ ನೀಡುವ ಮನವಿಗೆ ಸಂಬಂಧಪಟ್ಟಂತೆ ನಾಗರಿಕ ವಿಮಾನಯಾನ ಸಚಿವಾಲಯಕ್ಕೆ (MoCA) ಪತ್ರ ಬರೆಯಲು ನಿರ್ಧರಿಸಿದ್ದಾರೆ. ಹಲವು ದೇಶಗಳಲ್ಲಿ ಈಗಾಗಲೇ ಅಲ್ಲಿನ ಭಾಷೆಯಲ್ಲಿ ಮೊದಲು ಪ್ರಕಟಣೆ ಕೊಡಲಾಗುತ್ತಿದೆ. ಇಲ್ಲಿಯೂ ಕೂಡ ಅದೇ ಮಾದರಿ ಅನುಸರಿಸಲಿ ಎನ್ನುವುದು ಒತ್ತಾಯವಾಗಿದೆ.

ಸೋಮವಾರ ಬಿಐಎಎಲ್‌ನ ಎಂಡಿ ಮತ್ತು ಸಿಇಒ ಹರಿ ಮಾರಾರ್ ಅವರನ್ನು ಭೇಟಿ ಮಾಡಿದ ಕಸಾಪ ಅಧ್ಯಕ್ಷ ಮಹೇಶ್ ಜೋಶಿ, ವಿಮಾನ ನಿಲ್ದಾಣದಲ್ಲಿ ಕನ್ನಡ ಬಳಕೆಯನ್ನು ಹೆಚ್ಚಿಸಲು ಮಾಡಬೇಕಾದ ಕ್ರಮಗಳ ಬಗ್ಗೆ ಚರ್ಚೆ ನಡೆಸಲಾಗಿದೆ. ಕನ್ನಡ ರಾಜ್ಯೋತ್ಸವ ದಿನದಂದಿಲೇ ವಿಮಾನಗಳಲ್ಲಿ ಕನ್ನಡ ಪ್ರಕಟಣೆ ಆರಂಭಿಸಬೇಕು ಎನ್ನುವುದು ಬೇಡಿಕೆಯಾಗಿದೆ.
ಕನ್ನಡ ರಾಜ್ಯೋತ್ಸವ ದಿನದಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಆಗುವ ಮತ್ತು ಇಲ್ಲಿಂದ ಹೊರಡುವ ವಿಮಾನಗಳಲ್ಲಿ ಮೊದಲು ಕನ್ನಡದಲ್ಲಿ ಪ್ರಕಟಣೆ ನೀಡಿ ಬಳಿಕ ಉಳಿದ ಭಾಷೆಗಳಲ್ಲಿ ಪ್ರಕಟಣೆ ಕೊಡಬೇಕು. ಬ್ರಿಟಿಷ್ ಏರ್ ವೇಸ್ ಮತ್ತು ಸಿಂಗಾಪುರ್ ಏರ್ ಲೈನ್ಸ್ ಈಗಾಗಲೇ ಇದನ್ನು ಅನುಸರಿಸುತ್ತಿದ್ದು, ಉಳಿದ ಸಂಸ್ಥೆಗಳ ವಿಮಾನಗಳಲ್ಲಿ ಇದು ಕಡ್ಡಾಯವಾಗಬೇಕು ಎಂದು ಒತ್ತಾಯಿಸಲಾಗಿದೆ.
A meeting this morning at Kempegowda International Airport Bengaluru between Nadoja Dr. Mahesh Joshi, Chairman, Kannada Sahitya Parishattu, Hari Marar, MD & CEO, BIAL and H R Venkatraman, Head of Corporate Affairs to discuss initiatives to promote Kannada language, art and… pic.twitter.com/bzfMbuYTIa
— BLR Airport (@BLRAirport) September 16, 2024
ಮಹೇಶ್ ಜೋಶಿ ಅವರ ಒತ್ತಾಯಕ್ಕೆ ವಿಮಾನ ನಿಲ್ದಾಣದ ಅಧಿಕಾರಿಗಳು ಕೂಡ ಸ್ಪಂದಿಸಿದ್ದಾರೆ. ಆದರೆ ಇದನ್ನು ಜಾರಿ ಮಾಡಲು ನಾಗರಿಕ ವಿಮಾನಯಾನ ಸಚಿವಾಲಯದ (MoCA) ಅನುಮತಿ ಬೇಕು ಎಂದಿದ್ದಾರೆ. ಈಗ ಮಹೇಶ್ ಜೋಶಿ ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ಪತ್ರ ಬರೆಯಲು ನಿರ್ಧರಿಸಿದ್ದಾರೆ.
ಕನ್ನಡ ಸಾಹಿತ್ಯ ಸಮ್ಮೇಳನ
ಡಿಸೆಂಬರ್ 20 ರಿಂದ 22 ರವರೆಗೆ ಮಂಡ್ಯದಲ್ಲಿ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದ್ದು, ಕನ್ನಡದಲ್ಲಿ ದೊಡ್ಡ ಸ್ವಾಗತ ಫಲಕಗಳನ್ನು ಅಳವಡಿಸಲು ಮತ್ತು ಕರ್ನಾಟಕದ ಸಂಸ್ಕೃತಿ ಮತ್ತು ಪರಂಪರೆಯನ್ನು ಪ್ರತಿಬಿಂಬಿಸುವ ವಾತಾವರಣ ನಿರ್ಮಿಸಲು ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ಅಮೆರಿಕ ಸೇರಿದಂತೆ ಹಲವು ದೇಶಗಳಿಂದ ಅನಿವಾಸಿ ಕನ್ನಡಿಗರು ಸೇರಿ ಸಾವಿರಾರು ಜನ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು. ವಿಮಾನ ನಿಲ್ದಾಣಕ್ಕೆ ಬರುತ್ತಿದ್ದಂತೆ ಅವರಿಗೆ ಕರ್ನಾಟಕದಲ್ಲಿರುವಂತೆ ಭಾಸವಾಗಬೇಕು ಎಂದು ಹೇಳಿದ್ದಾರೆ.
ಕಸಾಪ ಪ್ರತಿನಿಧಿಗಳಿಗೆ ಸ್ವಾಗತ ಮೇಜುಗಳು ಮತ್ತು ಫೋಟೋ ಬೂತ್ ಒದಗಿಸುವುದಾಗಿ ಅಧಿಕಾರಿಗಳು ಹೇಳಿದ್ದು, ವಿಮಾನ ನಿಲ್ದಾಣದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳದನ ಬಗ್ಗೆ ವಿಮಾನ ನಿಲ್ದಾಣದಲ್ಲಿ ಮಾಹಿತಿಯನ್ನು ಪ್ರದರ್ಶಿಸಲಾಗುವುದು ಎಂದು ಭರವಸೆ ನೀಡಲಾಗಿದೆ.












Click it and Unblock the Notifications