ಶಾಸಕ ಸತೀಶ್ ಗೆ ತಾತ್ಕಾಲಿಕ ಬೇಲ್, ನಾಗೇಂದ್ರಗೆ ಜೈಲ್
ಬೆಂಗಳೂರು, ಅ.12: ಕಾರವಾರದ ಬೇಲೇಕೇರಿ ಬಂದರಿನಲ್ಲಿ ಕಬ್ಬಿಣ ಅದಿರು ಕಳ್ಳಸಾಗಾಣೆ ಪ್ರಕರಣದಲ್ಲಿ ಜೈಲುಪಾಲಾಗಿರುವ ಶಾಸಕರ ಸಂಖ್ಯೆ 3ಕ್ಕೆ ಏರಿದೆ ಎನ್ನುವಷ್ಟರಲ್ಲೇ ಕಾರವಾರ ಶಾಸಕ ಸತೀಶ್ ಸೈಲ್ ಅವರಿಗೆ ಸಿಬಿಐ ವಿಶೇಷ ನ್ಯಾಯಾಲಯ ಶುಕ್ರವಾರ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.
ಸತೀಶ್ ಸೈಲ್ ಅವರ ತಂದೆ ಕೃಷ್ಣ ಸೈಲ್ ಅವರು ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದು ಅವರನ್ನು ಭೇಟಿ ಮಾಡಲು ಅವಕಾಶ ನೀಡಬೇಕು ಎಂದು ಸತೀಶ್ ಸೈಲ್ ಪರ ವಕೀಲರು ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
ಈ ಹಿನ್ನೆಲೆಯಲ್ಲಿ ನ್ಯಾಯಾಲಯ ಅ.12 ರಿಂದ ಅ.15ರ ವರೆಗೆ ಮಧ್ಯಂತರ ಜಾಮೀನು ಮಂಜೂರು ಮಾಡಲಾಗಿದೆ. ಪೊಲೀಸರ ಬೆಂಗಾವಲಿನಲ್ಲಿ ರಸ್ತೆ ಮೂಲಕ ಕಾರವಾರಕ್ಕೆ ತೆರಳಿ ಅ.15ಕ್ಕೆ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿಗೆ ಹಾಜರಾಗಬೇಕು ನಂತರ ನ್ಯಾಯಾಲಯಕ್ಕೆ ಹಾಜರಾಗಬೇಕು(ವಿಡಿಯೋ ಕಾನ್ಫರೇನ್ಸ್) ಎಂದು ನ್ಯಾಯಾಲಯ ಜಾಮೀನು ಆದೇಶದಲ್ಲಿ ತಿಳಿಸಿದೆ.
ಶಾಸಕ ಸತೀಶ್ ಅವರು ಕಾರವಾರದ ಗಡಿ ದಾಟುವಂತಿಲ್ಲ. ಪೊಲೀಸ್ ಬೆಂಗಾವಲು ಹಾಗೂ ಸಾರಿಗೆ ವೆಚ್ಚ, ಭದ್ರತಾ ಪಡೆ ಖರ್ಚು ವೆಚ್ಚವನ್ನು ಸತೀಶ್ ಅವರೇ ಭರಿಸಬೇಕು ಎಂದು ಕೋರ್ಟ್ ತನ್ನ ಆದೇಶದಲ್ಲಿ ಹೇಳಿದೆ. ಬೇಲೇಕೇರಿ ಅದಿರು ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಶಾಸಕ ಸತೀಶ್ ಮೇಲೆ ಬಂದಿರುವ ಆರೋಪವೇನು? ಈ ಪ್ರಕರಣದಲ್ಲಿ ಇನ್ನು ಯಾರು ಬಂಧನ ಭೀತಿ ಎದುರಿಸುತ್ತಿದ್ದಾರೆ? ಸಿಬಿಐ ಕಣ್ಣು ಸದ್ಯಕ್ಕೆ ಯಾವ ಉದ್ಯಮಿಗಳ ಮೇಲಿದೆ? ಎಂಬುದರ ವಿವರ ಮುಂದೆ ಓದಿ...

ಸತೀಶ್ ಸೈಲ್ ಮೇಲಿನ ಆರೋಪ
2009-10ರ ಅವಧಿಯಲ್ಲಿ ನಡೆದಿದೆ ಎನ್ನಲಾದ ಬೇಲೇಕೇರಿ ಅದಿರು ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲ್ಲಿಕಾರ್ಜುನ ಶಿಪ್ಪಿಂಗ್ ಕಂಪನಿ(SMSC Pvt Ltd)ಯ ಮಾಲೀಕರಾದ ಸತೀಶ್ ಅವರನ್ನು ಸಿಬಿಐ ತಂಡ ಸೆ.20ರಂದು ಬಂಧಿಸಿ ವಿಚಾರಣೆ ನಡೆಸುತ್ತಿದೆ.
ಜನವರಿ 2009 ರಿಂದ ಮೇ 2010ರ ಅವಧಿಯಲ್ಲಿ ಸುಮಾರು 7.23 ಲಕ್ಷ ಮೆಟ್ರಿಕ್ ಟನ್ ಕಬ್ಬಿಣ ಅದಿರನ್ನು ಮಲ್ಲಿಕಾರ್ಜುನ ಶಿಪ್ಪಿಂಗ್ ಕಂಪನಿ ಅಕ್ರಮವಾಗಿ ಸಾಗಿಸಿದೆ ಎಂಬ ಆರೋಪವಿದೆ. ಕಾಂಗ್ರೆಸ್ ರೆಬೆಲ್ ಅಭ್ಯರ್ಥಿಯಾಗಿ 2013ರ ಅಸೆಂಬ್ಲಿ ಎಲೆಕ್ಷನ್ ನಲ್ಲಿ ನಿಂತು ಚುನಾವಣೆ ಗೆದ್ದ ಸತೀಶ್ ಸೈಲ್ ನಂತರ ಕಾಂಗ್ರೆಸ್ ಮತ್ತೆ ಸೇರಿಕೊಂಡಿದ್ದರು.

ನಾಗೇಂದ್ರ ಸ್ಥಿತಿ ಗತಿ
ಬೇಲೆಕೇರಿ ಅದಿರು ನಾಪತ್ತೆ ಪ್ರಕರಣ ಸಂಬಂಧ ಸಿಬಿಐ ಅಧಿಕಾರಿಗಳಿಂದ ಬಂಧಿತರಾಗಿರುವ ಕೂಡ್ಲಿಗಿ ಶಾಸಕ ಬಿ.ನಾಗೇಂದ್ರ ಅವರನ್ನು ಅ.24ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಸಿಬಿಐ ವಿಶೇಷ ನ್ಯಾಯಾಲಯ ಆದೇಶಿಸಿದೆ.
ಅದಿರು ನಾಪತ್ತೆ ಪ್ರಕರಣ ಸಂಬಂಧ ವಿಚಾರಣೆಗಾಗಿ ಅಕ್ಬೋಬರ್ 3 ರಂದು ನಾಗೇಂದ್ರ ಅವರನ್ನು ಸಿಬಿಐ ಅಧಿಕಾರಿಗಳು ಕಚೇರಿಗೆ ಕರೆಸಿಕೊಂಡಿದ್ದರು. ಬಳಿಕ ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ನೀಡಲು ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ನ್ಯಾಯಾಲಯ ಅ.11ರವರೆಗೂ ಸಿಬಿಐ ವಶಕ್ಕೆ ಒಪ್ಪಿಸಿತ್ತು.
ಶ್ರೀರಾಮುಲುಗೆ ಸಂಕಟ?
ಬೇಲೇಕೇರಿ ಅದಿರು ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕರಾದ ಸುರೇಶ್ ಬಾಬು, ಸತೀಶ್ ಸೈಲ್, ನಾಗೇಂದ್ರ ಬಂಧನಕ್ಕೊಳಪಟ್ಟಿದ್ದರೆ ಆನಂದ ಸಿಂಗ್ ಅವರು ಇನ್ನೂ ಪತ್ತೆಯಾಗಿಲ್ಲ.
ಬಂಧಿತ ಆರೋಪಿಗಳು ವಿಚಾರಣೆ ಸಂದರ್ಭದಲ್ಲಿ ಜನಾರ್ದನ ರೆಡ್ಡಿ ವಿದೇಶಗಳಲ್ಲಿ ಆರಂಭಿಸಿದ್ದ 19 ಬೇನಾಮಿ ಕಂಪನಿಗಳಿಗೆ ಬಿಎಸ್ಸಾರ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಶ್ರೀರಾಮುಲುವೇ ಸೂತ್ರಧಾರ. ಜನಾರ್ದನ ರೆಡ್ಡಿ ಹಾಗೂ ಶ್ರೀರಾಮುಲು ಹೇಳಿದಂತೆ ಕೇಳಿದೆವು ಅಷ್ಟೇ ಎಂದಿದ್ದಾರಂತೆ. ವಿಚಾರಣೆ ವಿವರ ಇನ್ನೂ ಸಿಬಿಐ ಹೊರಹಾಕಿಲ್ಲ. ಪ್ರಕರಣದಲ್ಲಿ ಇನ್ನಷ್ಟು ಶಾಸಕರು, ಸಂಸದರು ಮಾಜಿ ರಾಜಕೀಯ ಮುಖಂಡರನ್ನು ವಿಚಾರಣೆ ಒಳಪಡಿಸಲು ಸಿಬಿಐ ಬಲೆ ಹೆಣೆದಿದೆ.

ಯಾರಿಗೆ ಭೀತಿ
* M/s ಡ್ರೀಮ್ ಲಾಜಿಸ್ಟಿಕ್ಸ್ ಪೈ ಲಿ ಮಾಲೀಕರಾದ ಯಲ್ಲಾಪುರ ಕಾಂಗ್ರೆಸ್ ಶಾಸಕ ಶಿವರಾಮ್ ಹೆಬ್ಬಾರ್ ಹಾಗೂ ಅವರ ಪುತ್ರ ವಿವೇಕ್ ಹೆಬ್ಬಾರ್.
* ಆನಂದ್ ಸಿಂಗ್ ಅವರ ವೈಷ್ಣವಿ ಮಿನಿರಲ್ಸ್ , ನಾಗೇಂದ್ರ ಅವರ ಈಗಲ್ ಟ್ರೇಡರ್ಸ್ ಅಂಡ್ ಲಾಜಿಸ್ಟಿಕ್ಸ್, ಸುರೇಶ್ ಬಾಬು ಅವರ ಜನಾದೇವಿ ಮಿನರಲ್ಸ್, ಕೆ ಸೋಮಶೇಖರ್ ಅವರ ಐಎಲ್ ಸಿ ಇಂಡಸ್ಟ್ರೀಸ್ ಪೈ.ಲಿ. ಸಿಬ್ಬಂದಿಗಳು
* ಅರಣ್ಯ ಇಲಾಖೆ ಅಧಿಕಾರಿಗಳು, ಬಂದರಿನ ಸಿಬ್ಬಂದಿಗಳು
* ಪವನ್ ಕುಮಾರ್ ಜೈನ್ ಅವರ ಪಿಜೆಎಸ್ ಓವರ್ಸೀಸ್ ಲಿ.

ಬಂಧಿತರು
ಕೂಡ್ಲಿಗಿ ಶಾಸಕ ನಾಗೇಂದ್ರ, ಕಂಪ್ಲಿಶಾಸಕ ಸುರೇಶ್ ಬಾಬು, ಕಾರವಾರದ ಶಾಸಕ ಸತೀಶ್ ಸೈಲ್. ಜತೆಗೆ ಅಂಕೋಲದ ಮಾಜಿ ಅರಣ್ಯಾಧಿಕಾರಿ ನರೇಂದ್ರ ಹಿತಲಮಕ್ಕಿ, ಮಾಜಿ ರೇಂಜ್ ಆಫೀಸರ್ ಜಿ.ಸಿ ನಾಯಕ್, ಬೇಲೇಕೇರಿ ಬಂದರು ಅಧಿಕಾರಿ ಕ್ಯಾಪ್ಟನ್ ಸಿ ಸ್ವಾಮಿ, ಪ್ರೊಪ್ರೆಟರ್ ಶ್ರೀ ಲಾಲ್ ಮಹಲ್ ಲಿ. ರಾಜಕುಮಾರ್ ಇವರೆಲ್ಲರ ಜತೆಗೆ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ











Click it and Unblock the Notifications