Namam Metro: ಮೆಟ್ರೋದಲ್ಲಿ ಮೊದಲ ಬಾರಿಗೆ ಭಿಕ್ಷೆ ಬೇಡಿದ ಪ್ರಕರಣ, ಮುಂದೆ ಆಗಿದ್ದೇನು?
ಬೆಂಗಳೂರು, ನವೆಂಬರ್ 23: ಸಿಲಿಕಾನ್ ಸಿಟಿ ಬೆಂಗಳೂರಿನ ಜನರಿಗೆ ವಿಶೇಷ ಸಾರಿಗೆ ಸೇವೆ ನೀಡುತ್ತಿರುವ 'ನಮ್ಮ ಮಟ್ರೋ' ಇತ್ತೀಚೆಗೆ ನಾನಾ ಕಾರಣಗಳಿಂದ ಸುದ್ದಿಯಾಗುತ್ತಿದೆ. ಮಟ್ರೋ ದಲ್ಲಿ ತಿಂಡಿ ತಿನ್ನುವುದು, ಟಿಕೆಟ್ ರಹಿತ ಪ್ರಯಾಣ, ಸಿಸಿ ಟಿವಿ ಮುಚ್ಚಿದ ಪ್ರಕರಣಗಳು ವರದಿ ಆಗಿದ್ದವು. ಇದೀಗ ಮೊದಲ ಬಾರಿಗೆ ನಮ್ಮ ಮೆಟ್ರೋದಲ್ಲಿ ಭಿಕ್ಷೆ ಬೇಡಿದ ಘಟನೆ ನಡೆದಿದೆ. ಭಿಕ್ಷೆ ಬೇಡಿದ ಯುವಕನಿಗೆ ದಂಡ ವಿಧಿಸಲಾಗಿದೆ.
ಬುಧವಾರ ಬೆಳಗ್ಗೆ ಮೆಟ್ರೋ ರೈಲಿನಲ್ಲಿ ಭಿಕ್ಷೆ ಬೇಡುತ್ತಿದ್ದ ಆರೋಪದ ಮೇಲೆ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ಯುವಕನಿಗೆ ಮೊದಲ ಬಾರಿಗೆ ದಂಡ ವಿಧಿಸಿದ ಘಟನೆ ಯಶವಂತಪುರ ನಿಲ್ದಾಣದಲ್ಲಿ ನಡೆದಿದೆ.

20ರ ಆಸುಪಾಸು ವಯಸ್ಸಿನ ಯುವಕ ಯಶವಂತಪುರ ನಿಲ್ದಾಣದಿಂದ ನಾಗಸಂದ್ರ ಕಡೆಗೆ ಹೊರಟಿದ್ದ ಮೆಟ್ರೋ ರೈಲಿನತ್ತ ತೆರಳಿದ್ದಾನೆ. ಈ ವೇಳೆ ಯಶವಂತಪುರ (ಹಸಿರು ಮಾರ್ಗ) ರೈಲು ನಿಲ್ದಾಣದಲ್ಲಿ ಈತ ಭಿಕ್ಷೆ ಬೇಡಿದ್ದಾನೆ. ಆಗತಾನೆ ಕರ್ತವ್ಯ ಮುಗಿಸಿ ಸಾಮಾನ್ಯ ಡ್ರೆಸ್‌ನಲ್ಲಿ ಹಿರಿಯ ಅಧಿಕಾರಿಯೊಬ್ಬರು ಯುವಕ ಭಿಕ್ಷೆ ಬೇಡುವ ವಿಚಾರವನ್ನು ನಮ್ಮ ಮೆಟ್ರೋ ಭದ್ರತಾ ಕೊಠಡಿಗೆ ತಿಳಿಸಿದ್ದಾರೆ.
500 ರೂ. ದಂಡ ಕಟ್ಟಿದ ಯುವಕ
ಕೂಡಲೇ ಅಧಿಕಾರಿಗಳು ನೀಡಿದ ಸೂಚನೆ ಮೇರೆಗೆ ಭದ್ರತಾ ಸಿಬ್ಬಂದಿ ಭಿಕ್ಷೆ ಬೇಡುತ್ತಿದ್ದ ಆರೋಪದ ಮೇಲೆ ಯುವಕನನ್ನು ಹಿಡಿದಿದ್ದಾರೆ. ಬಳಿಕ ಆತನಿಗೆ ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) 500 ರೂಪಾಯಿ ದಂಡ ವಿಧಿಸಿದೆ.

ಈ ಯುವಕರ 50 ರೂಪಾಯಿ ಕೊಟ್ಟು ಮೆಟ್ರೋ ಸ್ಮಾರ್ಟ್ ಕಾರ್ಡ್ ಖರೀದಿಸಿ 150 ರೂ.ಗೆ ಕಾರ್ಡ್ ರೀಚಾರ್ಜ್ ಮಾಡಿಸಿಕೊಂಡಿದ್ದಾನೆ. ಆತನ ಜೇಬಿನಲ್ಲಿ 1000 ರೂಪಾಯಿ ಸಹ ಪತ್ತೆಯಾಗಿದೆ ಎಂದು ಆತನನ್ನು ವಿಚಾರಿಸಿದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಆಹಾರ ತಿಂದು ದಂಡ ಕಟ್ಟಿದ್ದ ವ್ಯಕ್ತಿ
ಇತ್ತೀಚೆಗೆ ನಮ್ಮ ಮೆಟ್ರೋ ರೈಲಿನಲ್ಲಿ ಆಹಾರ ಪದಾರ್ಥ ತಿನ್ನುವುದು, ಟಿಕೆಟ್‌ಗಳನ್ನು ಖರೀದಿಸದೆ, ಸ್ಮಾರ್ಟ್ ಕಾರ್ಡ್ ಸೇರಿದಂತೆ ಯಾವ ಟಕೆಟ್ ಇಲ್ಲದೇ ಸಂಚರಿಸಿದ್ದ ಘಟನೆ ಬೆಳಕಿಗೆ ಬಂದಿದ್ದವು. ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಲು ರೀಲ್‌ಗಳನ್ನು ಮಾಡುವುದು, ಇದು ಇತರ ಸಹಪ್ರಯಾಣಿಕರಿಗೆ ಅನಾನುಕೂಲತೆ ಉಂಟು ಮಾಡುತ್ತದೆ. ಈಗಾಗಲೇ ಉಗುಳುವುದು, ಧೂಮಪಾನ, ಇತ್ಯಾದಿಗಳಿಗೆ ಬಿಎಂಆರ್‌ಸಿಎಲ್ ತಪ್ಪತಸ್ಥರಿಗೆ ದಂಡ ವಿಧಿಸಿದೆ.
ಹಿಂದೆ ಅಕ್ಟೋಬರ್ ತಿಂಗಳ ಮೊದಲ ವಾರ ಜಯನಗರ ಆಭರಣ ಮಳಿಗೆಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರು ನಿಯಮ ಮೀರಿ ನಮ್ಮ ಮೆಟ್ರೋ ರೈಲಿನಲ್ಲಿ ಆಹಾರ (ಗೋಬಿ ಮಂಚೂರಿ) ತಿಂತಿದ್ದರು. ಇವರು ಆಹಾರ ಸೇವನೆಯ ವಿಡಿಯೋ ಅವರ ಸ್ನೇಹಿತರಿಂದಲೇ ವೈರಲ್ ಆಗಿತ್ತು.
ವಿಡಿಯೋ ವೈರಲ್ ಆಗುತ್ತಿದ್ದಂತೆ ಬೆಂಗಳೂರು ಮೆಟ್ರೋ ರೈಲು ನಿಗಮದ ಅಧಿಕಾರಿಗಳು ತಿಳಿ ಹೇಳಿ ಅವರಿಂದ 500 ರೂಪಾಯಿ ದಂಡ ಕಟ್ಟಿಸಿಕೊಂಡಿದ್ದರು. ಮೆಟ್ರೋ ದಲ್ಲಿ ಆಹಾರ ಪದಾರ್ಥ ಸೇವನೆ ವಿಚಾರವಾಗಿ ಇದೇ ಮೊದಲ ಬಾರಿಗೆ ದಂಡ ವಿಧಿಸಲಾಗಿದೆ ಎಂದು ತಿಳಿಸಿದ್ದರು.
ಮೆಟ್ರೋದಲ್ಲಿ ವಿದೇಶಿ ಯೂಟ್ಯೂಬರ್ ಹುಚ್ಚಾಟ
ಇದಕ್ಕೂ ಹಿಂದೆ ವಿದೇಶಿ ಯೂಟ್ಯೂಬರ್ ಒಬ್ಬರು ನಮ್ಮ ಮೆಟ್ರೋದಲ್ಲಿ ಹುಚ್ಚಾಟ ಮಾಡಿದ ಘಟನೆ ವರದಿ ಆಗಿತ್ತು. ಬೆಂಗಳೂರು ನಮ್ಮ ಮೆಟ್ರೋ ದಲ್ಲಿ ಟಿಕೆಟ್ ಇಲ್ಲದೇ ಪ್ರಯಾಣ ಮಾಡಬಹುದು ಎಂದು ವಿಡಿಯೋ ಮಾಡಿದ್ದ ಈತ ಟಿಕೆಟ್ ಇಲ್ಲದೇ ಒಡಾಡಿದ್ದ. ಟೋಕನ್ ಹಾಕುವ ಸ್ಥಳದಲ್ಲಿ ಜಿಗಿದು ಒಳ ಪ್ರವೇಶಿಸಿದ್ದ. ಈ ಮೂಲಕ ಟಿಕೆಟ್ ಇಲ್ಲದೇ ಪ್ರಯಾಣ ಮಾಡುವುದು ಹೇಗೆ ನೋಡಿ ಎಂದು ತನ್ನ ವಿಡಿಯೋದಲ್ಲಿ ವಿವರಿಸಿದ್ದ. ಇದೆಲ್ಲದರ ಬೆನ್ನಲ್ಲೆ ಇದೀಗ ಭಿಕ್ಷೆ ಬೇಡಿಕೆ ಪ್ರಕರಣ ವರದಿ ಆಗಿದೆ. ಸದ್ಯ ತಪ್ಪಿತಸ್ಥರಿಗೆ, ನಿಯಮ ಮೀರಿ ಸಹ ಪ್ರಯಾಣಿಕರಿಗೆ ನಮ್ಮ ಮೆಟ್ರೋ ದಂಡ ವಿಧಿಸುತ್ತಿದೆ.












Click it and Unblock the Notifications