BDA Site: ಬಿಡಿಎ ಹೊಸ 6 ಲೇಔಟ್, ಸೈಟುಗಳ ಸಂಖ್ಯೆ ಮತ್ತು ಪ್ರದೇಶದ ವಿವರ
ಬೆಂಗಳೂರು, ಡಿಸೆಂಬರ್ 11: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ನಿರ್ಮಾಣ ಮಾಡಿರುವ ಬಡಾವಣೆಗಳಲ್ಲಿ ಸೈಟುಗಳಿಗೆ ಭಾರೀ ಬೇಡಿಕೆ ಇದೆ. ಈಗ ಬಿಡಿಎ ಬಹು ನಿರೀಕ್ಷಿತ 73 ಕಿ. ಮೀ. ಪೆರಿಫೆರಲ್ ವರ್ತುಲ ರಸ್ತೆ (ಪಿಆರ್‌ಆರ್) ನಿರ್ಮಾಣದ ಸಿದ್ಧತೆಯಲ್ಲಿ ತೊಡಗಿದೆ. ಈ ಮಾರ್ಗದಲ್ಲಿ ಸೈಟುಗಳಿಗೆ ಬರುವ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ಹೊಸದಾಗಿ 6 ಲೇಔಟ್‌ಗಳನ್ನು ನಿರ್ಮಾಣ ಮಾಡಲಿದೆ.
ಬೆಂಗಳೂರು ನಗರದ ಸಂಚಾರ ದಟ್ಟಣೆ ಕಡಿಮೆ ಮಾಡಲು ಅನುಕೂಲವಾಗಲಿದೆ ಎಂದು ಅಂದಾಜಿಸಲಾಗಿರುವ ಪೆರಿಫೆರಲ್ ವರ್ತುಲ ರಸ್ತೆ (ಪಿಆರ್‌ಆರ್) ಯೋಜನೆಯನ್ನು ಈಗ ಬೆಂಗಳೂರು ಬ್ಯುಸಿನೆಸ್ ಕಾರಿಡಾರ್ (ಬಿಬಿಸಿ) ಎಂದು ಮರು ನಾಮಕಾರಣ ಮಾಡಿ, ಚಾಲನೆಗೊಳಿಸಲಾಗಿದೆ. ಸುಮಾರು 27,000 ಕೋಟಿ ರೂ.ಗಳ ಯೋಜನೆ ಇದಾಗಿದೆ.

ಬೆಂಗಳೂರು ಬ್ಯುಸಿನೆಸ್ ಕಾರಿಡಾರ್ ತುಮೂರು ರಸ್ತೆ-ಹೊಸೂರು ರಸ್ತೆಯನ್ನು ಸಂಪರ್ಕಿಸುತ್ತದೆ. ಇದು ದೊಡ್ಡಬಳ್ಳಾಪುರ, ಬಳ್ಳಾರಿ ರಸ್ತೆ, ಹಳೆ ಮದ್ರಾಸ್ ರಸ್ತೆ ಮೂಲಕ ಹಾದು ಹೋಗುತ್ತದೆ. ಈ ಪ್ರದೇಶದಲ್ಲಿ ಹೊಸದಾಗಿ 6 ಬಡಾವಣೆಗಳನ್ನು ನಿರ್ಮಾಣ ಮಾಡಿ, ಸೈಟುಗಳನ್ನು ಮಾರಾಟ ಮಾಡಿ, ಆದಾಯಗಳಿಸಲು ಬಿಡಿಎ ಯೋಜನೆ ರೂಪಿಸಿದೆ.
ಭೂಸ್ವಾಧೀನಕ್ಕೆ ಆದೇಶ: ಬಿಡಿಎ 6 ಹೊಸ ಬಡಾವಣೆಗಳಿಗೆ ಭೂಸ್ವಾಧೀನ ಮಾಡಿಕೊಳ್ಳಲು ಈಗಾಗಲೇ ಆದೇಶ ಹೊರಡಿಸಿ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಈ ಕುರಿತು ಉಪ ಆಯುಕ್ತರು (ಭೂ ಸ್ವಾಧೀನ) ಅವರ ಕಛೇರಿ ಆದೇಶವನ್ನು ಹೊರಡಿಸಿದೆ. ಪ್ರಾಧಿಕಾರವು ಪಿ. ಆರ್. ಆರ್-2 ಯೋಜನೆಗೆ ಹೊಂದಿಕೊಂಡಂತಿರುವ ಗ್ರಾಮಗಳಲ್ಲಿ ಹೊಸದಾಗಿ ರಚಿಸಲು ಉದ್ದೇಶಿಸಿರುವ ಬಡಾವಣೆಗೆ ಭೂಸ್ವಾಧೀನಪಡಿಸಿಕೊಳ್ಳಲು ಅಗತ್ಯವಿರುವ ಜಮೀನನ್ನು ಗುರುತಿಸಿ, ಪ್ರಾಥಮಿಕ ಅಧಿಸೂಚನೆ ಹೊರಡಿಸುವ ಬಗ್ಗೆ ಎಂಬ ವಿಷಯವನ್ನು ಆದೇಶ ಒಳಗೊಂಡಿದೆ.
ದಿನಾಂಕ 28.11.2024 ರಂದು ನಡೆದ ಭೂಸ್ವಾಧೀನಾಧಿಕಾರಿಗಳು ಹಾಗೂ ಅಭಿಯಂತರ ಅಧಿಕಾರಿಗಳ ಸಭೆಯಲ್ಲಿ, ಪ್ರಾಧಿಕಾರವು ಪಿ.ಆರ್.ಆರ್.-2 ಯೋಜನೆಗೆ ಹೊಂದಿಕೊಂಡಂತಿರುವ ಗ್ರಾಮಗಳಲ್ಲಿ ಹೊಸದಾಗಿ ರಚಿಸಲು ಉದ್ದೇಶಿಸಿರುವ ಬಡಾವಣೆಗೆ ಅಗತ್ಯವಿರುವ ಜಮೀನನ್ನು ಗುರುತಿಸಿ, ಭೂಸ್ವಾಧೀನಪಡಿಸಿಕೊಳ್ಳುವ ಕುರಿತು ಪ್ರಾಥಮಿಕ ಅಧಿಸೂಚನೆ ಹೊರಡಿಸಲು ಪ್ರಸ್ತಾವನೆ ಸಿದ್ಧಪಡಿಸಬೇಕಾಗಿರುತ್ತದೆ ಎಂದು ಚರ್ಚಿಸಲಾಗಿದೆ.
ಸದರಿ ಯೋಜನೆಗಾಗಿ ಅಗತ್ಯವಿರುವ ಜಮೀನನ್ನು ಅಭಿಯಂತರ ಅಧಿಕಾರಿಗಳೊಂದಿಗೆ ಸಮನ್ವಯ ಮಾಡಿಕೊಂಡು ಗುರುತಿಸಿ, ಪ್ರಾಥಮಿಕ ಅಧಿಸೂಚನೆ ಹೊರಡಿಸಲು ಬೇಕಾಗುವ ಅಗತ್ಯ ಮಾಹಿತಿಯನ್ನು ಕೋಡಿಕರಿಸುವ ಸಂಬಂಧ ಭೂಸ್ವಾಧೀನಾಧಿಕಾರಿಗಳ ನೇತೃತ್ವದಲ್ಲಿ ತಂಡಗಳನ್ನು ರಚಿಸಲಾಗಿದೆ.
ಹೊಸ ಬಡಾವಣೆ ರಚನೆ ಮಾಡುವ ಸಂಬಂಧ ಭೂಸ್ವಾಧೀನಪಡಿಸಿಕೊಳ್ಳಬಹುದಾದ ಖುಲ್ಲಾ ಇರುವ ಜಮೀನನ್ನು ಗುರುತಿಸಿ, ಸದರಿ ಜಮೀನಿನ ಖಾತೆದಾರರ ವಿವರ, ವಿಸ್ತೀರ್ಣದ ವಿವರ, ಜಮೀನಿನ ನಕ್ಷೆ, ಚಕ್ಕುಬಂದಿ ಮತ್ತು ಇತರೆ ವಿವರಗಳನ್ನು ಸಂಬಂಧಿಸಿದ ನಕ್ಷೆ ಹಾಗೂ ಆರ್‌ಟಿಸಿಗಳೊಂದಿಗೆ ಪ್ರಸ್ತಾವನೆ ಸಲ್ಲಿಸಲು ಸೂಚಿಸಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿರುವ ಬಿಡಿಎ ಆಯುಕ್ತ ಎನ್. ಜಯರಾಂ, "ಬಿಡಿಎ ಸೈಟುಗಳಿಗೆ ಭಾರೀ ಬೇಡಿಕೆ ಇದೆ. ನಾವು ಹೊಸದಾಗ 50,000 ಸೈಟುಗಳನ್ನು ಅಭಿವೃದ್ಧಿಗೊಳಿಸಲಿದ್ದೇವೆ. ಎರಡು ತಿಂಗಳ ಹಿಂದೆ ಇದಕ್ಕೆ ಪ್ರಾಥಮಿಕ ಒಪ್ಪಿಗೆ ನೀಡಲಾಗಿದೆ. ಯೋಜನೆಗೆ ಭೂಮಿ ನೀಡುವವರಿಗೆ 40:60ರ ಅನುಪಾತದಲ್ಲಿ ಪರಿಹಾರವನ್ನು ನೀಡಲಿದ್ದೇವೆ" ಎಂದು ಹೇಳಿದ್ದಾರೆ.
"ಬಿಡಿಎ ನಿಯಮದಂತೆ ಭೂಮಿ ನೀಡಿದವರಿಗೆ ಅದೇ ಬಡಾವಣೆಯಲ್ಲಿ ನಿವೇಶನ ನೀಡಲಾಗುತ್ತದೆ. ಬಿಡಿಎ ನಿವೇಶನ ಅಭಿವೃದ್ಧಿಗೊಳಿಸಿದ ಬಳಿಕ ನಿವೇಶನಗಳ ದರಗಳ ಕುರಿತು ತೀರ್ಮಾನ ಮಾಡಲಾಗುತ್ತದೆ. ಸಾಮಾನ್ಯ ಜನರಿಗೂ ಅನುಕೂಲವಾಗುವಂತೆ ದರವನ್ನು ನಿಗದಿಗೊಳಿಸಲಾಗುತ್ತದೆ" ಎಂದು ಆಯುಕ್ತರು ಭರವಸೆ ನೀಡಿದ್ದಾರೆ.
ಸದ್ಯಕ್ಕೆ ಬಿಡಿಎ ನಿರ್ಮಾಣ ಮಾಡಿರುವ ಡಾ. ಶಿವರಾಮ ಕಾರಂತ ಬಡಾವಣೆಯಲ್ಲಿ 34,000 ಸೈಟುಗಳು ಇವೆ. ಇವುಗಳಲ್ಲಿ 10,000 ಸೈಟುಗಳನ್ನು ಜನರಿಗೆ ಹಂಚಿಕೆ ಮಾಡಲು ಅವಕಾಶವಿದೆ. ಆದರೆ ಇದಕ್ಕಾಗಿ ಕರ್ನಾಟಕ ಹೈಕೋರ್ಟ್‌ನ ಅಂತಿಮ ತೀರ್ಪಿಗಾಗಿ ಬಿಡಿಎ ಕಾದು ಕುಳಿತಿದೆ.
ಈಗ ಬೆಂಗಳೂರು ಬ್ಯುಸಿನೆಸ್ ಕಾರಿಡಾರ್ ಹಾದು ಹೋಗುವಲ್ಲಿ ಹೊಸ ಬಡಾವಣೆ ನಿರ್ಮಾಣವಾಗಲಿದೆ. ಬೆಂಗಳೂರು ಬ್ಯುಸಿನೆಸ್ ಕಾರಿಡಾರ್ (ಬಿಬಿಸಿ) ಯೋಜನೆಯ ವೆಚ್ಚವನ್ನು ಭರಿಸಲು ಈಗಾಗಲೇ ವಸತಿ ಮತ್ತು ನಗರಾಭಿವೃದ್ಧಿ ನಿಗಮ ನಿಯಮಿತ (ಹುಡ್ಕೊ) ಒಪ್ಪಿಗೆ ನೀಡಿದೆ. ಈ ಕುರಿತು ಒಪ್ಪಂದ ಪೂರ್ಣಗೊಂಡ ಬಳಿಕ ಮುಂದಿನ ಪ್ರಕ್ರಿಯೆಗೆ ಚಾಲನೆ ಸಿಗಲಿದೆ.












Click it and Unblock the Notifications