Bengaluru: 73.5 ಕಿಮೀ, 8 ಪಥಗಳ ಪೆರಿಫೆರಲ್ ರಿಂಗ್ ರೋಡ್- ಎಷ್ಟು ವೆಚ್ಚ? ಅಂಕಿಅಂಶ, ಮಾಹಿತಿ
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ತನ್ನ ಎಂಟು ಪಥದ ಪೆರಿಫೆರಲ್ ರಿಂಗ್ ರಸ್ತೆಗೆ ಕೇಂದ್ರ ಪರಿಸರ ಸಮಿತಿಯಿಂದ ಅಂತಿಮವಾಗಿ ಹಸಿರು ನಿಶಾನೆಯನ್ನು ಪಡೆದಿದೆ. ಈ ರಸ್ತೆ ಬಗ್ಗೆ ತಿಳಿಯಿರಿ.
ಬೆಂಗಳೂರು, ಮಾರ್ಚ್ 21: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ( BDA ) ತನ್ನ ಎಂಟು ಪಥದ ಪೆರಿಫೆರಲ್ ರಿಂಗ್ ರೋಡ್ (PRR) ಗೆ ಕೇಂದ್ರ ಪರಿಸರ ಸಮಿತಿಯಿಂದ ಅಂತಿಮವಾಗಿ ಹಸಿರು ನಿಶಾನೆಯನ್ನು ಪಡೆದಿದೆ. ಈಗ ಭೂಸ್ವಾಧೀನ ಮಾಡಿಕೊಳ್ಳುವ ಪ್ರಕ್ರಿಯೆಗೆ ಚಾಲನೆ ನೀಡಲಿದೆ. 73.5 ಕಿಮೀ ರಸ್ತೆಯು ಆರು ಕೆರೆಗಳು ಮತ್ತು ತಿಪ್ಪಗೊಂಡನಹಳ್ಳಿ ಜಲಾನಯನ ಪ್ರದೇಶದ ಮೂಲಕ ಹಾದುಹೋಗುತ್ತದೆ.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಎಂಟು ಪಥದ ಪೆರಿಫೆರಲ್ ರಿಂಗ್ ರೋಡ್ ನಿರ್ಮಿಸುವುದರಿಂದ ಪರಿಸರದ ಮೇಲೆ ದುಷ್ಪರಿಣಾಮ ಬೀರಲಿದೆ ಎಂಬ ಆರೋಪಗಳು ಕೇಳಿಬಂದಿದ್ದವು. ಈ ವಿಚಾರವಾಗಿ ಸಾರ್ವಜನಿಕರು ಆಕ್ರೋಶವನ್ನು ವ್ಯಕ್ತಪಡಿಸಿದ್ದರು.

ಯೋಜನೆಗಾಗಿ 200 ಮರಗಳನ್ನು ಮಾತ್ರ ಕಡಿಯಲಾಗುವುದು ಎಂದು ಅಧಿಕಾರಿಗಳು ಹೇಳಿದ್ದರು. ನಂತರ ಈ ಸಂಖ್ಯೆ 16, 685ಕ್ಕೆ ಏರಿತು. ಕಳೆದ ವರ್ಷ ಪರಿಷ್ಕೃತ ವರದಿಯಲ್ಲಿ 32, 175 ಮರಗಳಿದ್ದವು. ಇದು ವ್ಯಾಪಕ ಟೀಕೆಗೆ ಗುರಿಯಾಗಿತ್ತು.
ನವೆಂಬರ್ 2014 ರಲ್ಲಿ ರಾಜ್ಯ ಪರಿಸರ ಪ್ರಾಧಿಕಾರ (SEIAA) ನೀಡಿದ ಮೊದಲ ಪರಿಸರ ಅನುಮತಿಯನ್ನು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯು ರದ್ದುಗೊಳಿಸಿತು. ಕಾರಣ, ಇದರಲ್ಲಿ ವಿವಿಧ ಲೋಪದೋಷಗಳು ಕಂಡುಬಂದಿದ್ದವು.

ಕಳೆದ ವರ್ಷ, ಬಿಡಿಎ ಅನುಮತಿ ಪಡೆಯಲು ಮತ್ತೊಮ್ಮೆ SEIAA ಅನ್ನು ಸಂಪರ್ಕಿಸಿತು. ಈ ಬಾರಿ, SEIAA ಪಕ್ಕಕ್ಕೆ ಸರಿದು ಕೇಂದ್ರ ಪರಿಸರ, ಅರಣ್ಯ ಹವಾಮಾನ ಬದಲಾವಣೆ ಸಚಿವಾಲಯದ ಅಡಿಯಲ್ಲಿ ತಜ್ಞರ ಮೌಲ್ಯಮಾಪನ ಸಮಿತಿಗೆ ಪ್ರಸ್ತಾವನೆಯನ್ನು ರವಾನಿಸಿತು.
ಅರಣ್ಯೀಕರಣ ಮತ್ತು ಮಳೆ ನೀರು ಕೊಯ್ಲು ಸೇರಿದಂತೆ ಸುಮಾರು 20 ನಿರ್ದೇಶನಗಳನ್ನು ಬಿಡಿಎ ಪಾಲಿಸುವಂತೆ ಕೇಂದ್ರ ಸಮಿತಿಯು ಕಳೆದ ವಾರ ಪರಿಸರ ಅನುಮತಿಗೆ ಶಿಫಾರಸು ಮಾಡಿದೆ. ಪಾರಂಪರಿಕ ಮರಗಳನ್ನು ಕಡಿಯುವಂತಿಲ್ಲ ಎಂಬುದು ಒಂದು ಷರತ್ತು ಆಗಿದೆ.

ಎಂಟು ಪಥಗಳ ರಸ್ತೆಯು ಆರು ಕೆರೆಗಳ ಮೂಲಕ ಅಥವಾ ಪಕ್ಕದಲ್ಲಿ ಹಾದುಹೋಗುತ್ತದೆ. ಪಾರಂಪರಿಕ ಮರಗಳಿಗೆ ಅಡ್ಡಿ ಆದರೆ ಅಲೈನ್ ಮೆಂಟ್ ಬದಲಾಯಿಸುವಂತೆ ಬಿಡಿಎಗೆ ಸಮಿತಿ ತಿಳಿಸಿದೆ. ಜಲ ಪಕ್ಷಿಗಳಿಗೆ (ಪೆಲಿಕಾನ್‌ಗಳು, ಕೊಕ್ಕರೆಗಳು, ಇತ್ಯಾದಿ) ನೆಲೆ ಒದಗಿಸುವ ಮರಗಳನ್ನು BDA ಬೈಪಾಸ್ ಮಾಡಬೇಕು ಎಂದೂ ಸಮಿತಿ ಹೇಳಿದೆ.
ಭೂ ಪರಿಹಾರದ ಹೊರತಾಗಿ ಬೆಳೆ ನಷ್ಟಕ್ಕೂ ಪರಿಹಾರ ನೀಡಬೇಕು ಎಂದು ಕೇಂದ್ರ ಪರಿಸರ ಸಮಿತಿ ಹೇಳಿದೆ.
ಜರಕಬಂಡೆಯಲ್ಲಿ ಫ್ಲೈಓವರ್
ಜಾರಕ ಬಂಡೆ ಮೀಸಲು ಅರಣ್ಯದ 20 ಎಕರೆಗೆ ಸಂಬಂಧಿಸಿದಂತೆ ಅರಣ್ಯ ಸಲಹಾ ಸಮಿತಿಯಿಂದ ಬಿಡಿಎ ಅನುಮತಿ ಪಡೆಯಬೇಕು. ಇದು ಸಣ್ಣ ಸಸ್ಯಾಹಾರಿ ಪ್ರಾನಿಗಳು ಮತ್ತು ಪಕ್ಷಿಗಳ ಆವಾಸ ಸ್ಥಾನ ಎಂದು ಅರಣ್ಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
'ನಾವು ಅರಣ್ಯ ಅಧಿಕಾರಿಗಳಿಗೆ ಪತ್ರ ನೀಡಿದ್ದೇವೆ ಮತ್ತು ಅವರು ರಸ್ತೆ ಅರಣ್ಯವನ್ನು ಎರಡು ಭಾಗಗಳಾಗಿ ವಿಭಜಿಸಬಾರದು ಎಂದು ಹೇಳಿದ್ದಾರೆ. ಪ್ರಾಣಿಗಳಿಗೆ ತೊಂದರೆಯಾಗದಂತೆ ರಸ್ತೆಯ ಮಟ್ಟವನ್ನು ಹೆಚ್ಚಿಸುವ ಪ್ರಸ್ತಾವನೆಯನ್ನು ನಾವು ಮುಂದಿಡುತ್ತಿದ್ದೇವೆ' ಎಂದು ಬಿಡಿಎ ಹಿರಿಯ ಅಧಿಕಾರಿಯೊಬ್ಬರು ' ಡೆಕ್ಕನ್ ಹೆರಾಲ್ಡ್' ಗೆ ತಿಳಿಸಿದ್ದಾರೆ.
ಭೂಸ್ವಾಧೀನ ಪ್ರಕ್ರಿಯೆ
ಬಿಡಿಎ ಈಗ ಭೂಸ್ವಾಧೀನ ಪೂರ್ಣಗೊಳಿಸುವ ಸವಾಲಿನತ್ತ ದೃಷ್ಟಿ ನೆಟ್ಟಿದೆ. 2007ರಲ್ಲಿ ಸ್ವಾಧೀನಕ್ಕೆ ಅಂತಿಮ ಅಧಿಸೂಚನೆ ಹೊರಡಿಸಿದ್ದರೂ ಪರಿಹಾರದ ಬಗ್ಗೆ ಗೊಂದಲ ಉಳಿದಿದೆ.
ನ್ಯಾಯಯುತ ಪರಿಹಾರ ಕಾಯಿದೆ ಯಡಿಯಲ್ಲಿ ನಿಗದಿಪಡಿಸಿದಂತೆ ಪರಿಹಾರವನ್ನು ರೈತರು ಒತ್ತಾಯಿಸುತ್ತಿದ್ದಾರೆ. ಅಂದರೆ ಯೋಜನೆಯ ವೆಚ್ಚವು ಅಂದಾಜು 21, 000 ಕೋಟಿ ರೂಪಾಯಿಗಳನ್ನು ಮೀರಬಹುದು.
'ಬಿಡಿಎ ಮಂಡಳಿಯು ಭೂಮಿ ವೆಚ್ಚದ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ರಾಜ್ಯ ಸಚಿವ ಸಂಪುಟಕ್ಕೆ ಪ್ರಸ್ತಾವನೆಯನ್ನು ಕಳುಹಿಸಿದೆ. ಯೋಜನೆಯನ್ನು ಮುಂದಕ್ಕೆ ಕೊಂಡೊಯ್ಯಲು ಸರ್ಕಾರಕ್ಕೆ ಬಿಡಲಾಗಿದೆ' ಎಂದು ಹಿರಿಯ ಅಧಿಕಾರಿ ತಿಳಿಸಿದ್ದಾರೆ.












Click it and Unblock the Notifications