ಬೆಂಗಳೂರಲ್ಲಿ ತ್ಯಾಜ್ಯದಿಂದ ವಿದ್ಯುತ್ ಉತ್ಪಾದನೆ: ಹೊಸ ಘಟಕ ಸ್ಥಾಪನೆಗೆ ಬಿಬಿಎಂಪಿ ಪ್ಲಾನ್
ಬೆಂಗಳೂರು, ಜುಲೈ 24: ರಾಜಧಾನಿ ಬೆಂಗಳೂರಿನಲ್ಲಿ ನಿತ್ಯ ಸಾವಿರಾರು ಟನ್ ತ್ಯಾಜ್ಯ ಉತ್ಪಾದನೆ ಆಗುತ್ತದೆ. ಇದರ ವಿಲೇವಾರಿಯದ್ದೆ ಸಮಸ್ಯೆ ಇದೆ. ಈ ಮಧ್ಯೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವಿವಿಧ ಪ್ರದೇಶಗಳಲ್ಲಿ ನಿತ್ಯ ಸೃಷ್ಟಿಯಾಗುವ ಹಸಿ ಹಾಗೂ ಒಣ ಕಸದಿಂದ ವಿದ್ಯುತ್ ಉತ್ಪಾದಿಸಲು ಉತ್ತೇಜನ ನೀಡುತ್ತಿದೆ. ಈ ಸಂಬಂಧ ಹೊಸ ವಿದ್ಯುತ್ ಉತ್ಪಾದನಾ ಘಟಕ ಸ್ಥಾಪನೆಗೆ ಪಾಲಿಕೆ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅವರು ಸೂಚಿಸಿದರು.
ಬೆಂಗಳೂ ಘನ ತ್ಯಾಜ್ಯ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಆಗಿರುವ ಮಹೇಶ್ವರ್ ರಾವ್ ಅವರು ಗುರುವಾರ ತ್ಯಾಜ್ಯ ಸಂಸ್ಕರಣಾ ಘಟಕ ಹಾಗೂ ರಾಜಕಾಲುವೆ ಕಾಮಗಾರಿಗಳ ಸ್ಥಳಕ್ಕೆ ಇಂದು ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ಕನ್ನಹಳ್ಳಿ ತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ ತ್ಯಾಜ್ಯ ವಿದ್ಯುತ್ ಉತ್ಪಾದನಾ ಘಟಕ ಸ್ಥಾಪಿಸಲು ಯೋಜನೆ ರೂಪಿಸುವಂತೆ ಪಾಲಿಕೆ ಅಧಿಕಾರಿಗಳಿಗೆ ನಿರ್ದೇಶಿಸಿದರು.

ಕನ್ನಹಳ್ಳಿ ತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ ಪ್ರತಿನಿತ್ಯ 350 ಮೆಟ್ರಿಕ್ ಟನ್ ತ್ಯಾಜ್ಯ ಸಂಸ್ಕರಣೆ ಮಾಡಲಾಗುತ್ತಿದೆ. ಈ ಘಟಕವನ್ನು ಖಾಸಗಿ ಸಂಸ್ಥೆಯಾದ ಸತಾರಾಂ ಮೂಲಕ ನಡೆಸಲಾಗುತ್ತಿದೆ. ತ್ಯಾಜ್ಯ ವಿದ್ಯುತ್ ಉತ್ಪಾದನಾ ಘಟಕ ಸ್ಥಾಪಿಸುವ ಸಲುವಾಗಿ ಸಾಧಕ-ಭಾದಕಗಳನ್ನು ಚರ್ಚಿಸಿ ಯೋಜನೆ ರೂಪಿಬೇಕಿದೆ ಎಂದರು.
ಇನ್ನೂ ಸೀಗೇಹಳ್ಳಿ ತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ 120 ಮೆಟ್ರಿಕ್ ಟನ್ ತ್ಯಾಜ್ಯ ಸಂಸ್ಕರಿಸುವ ಸಾಮರ್ಥ್ಯ ಇದೆ. ಸಂಪೂರ್ಣ ತ್ಯಾಜ್ಯವನ್ನು ಸ್ವೀಕರಿಸಿ ಸಂಸ್ಕರಣೆ ಮಾಡಲಾಗುತ್ತಿದೆ. ಘಟಕದಲ್ಲಿ 5 ಲಕ್ಷ ಟನ್ ಲೆಗಸಿ ವೇಸ್ಟ್ ಇದ್ದು, ಟ್ರಾಮಲ್ ಯಂತ್ರ ಬಳಸಿಕೊಂಡು ಲೆಗೆಸಿ ವೇಸ್ಟ್ ಅನ್ನು ರೀಪ್ರೊಸೆಸಿಂಗ್ ಮಾಡಬೇಕು. ಅದರಲ್ಲಿ ಆರ್.ಡಿ.ಎಫ್ ತ್ಯಾಜ್ಯವನ್ನು ಬಿಡದಿಯಲ್ಲಿರುವ ವಿದ್ಯುತ್ ಉತ್ಪಾದನಾ ಘಟಕಕ್ಕೆ ಕಳುಹಿಸಿ ಇನರ್ಟ್ ಅನ್ನು ಲ್ಯಾಂಡ್‌ಫಿಲ್ ಗೆ ವಿಲೇವಾರಿ ಮಾಡಬೇಕೆಂದು ಹೇಳಿದರು.

ಸೀಗೇಹಳ್ಳಿ ಘಟಕದಲ್ಲಿ ಪಾಲಿಕೆಯ ಬಳಕೆಯಾಗದ ವಾಹನಗಳಿಗೆ (ಸ್ಕ್ರ್ಯಾಪ್), ಆರ್.ಟಿ.ಓ. ಇಲಾಖೆಯು ಅದನ್ನು ತಪಾಸಣೆ ಮಾಡಿ ವಾಹನಗಳ ದರವನ್ನು ನಿಗದಿಪಡಿಸಿ ಇ-ಆಕ್ಷನ್ ಮಾಡಬೇಕು. ಸುಬ್ಬರಾಯನ ಪಾಳ್ಯ ತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ 150 ಮೆಟ್ರಿಕ್ ಟನ್ ತ್ಯಾಜ್ಯ ಉತ್ಪತ್ತಿ ಆಗುತ್ತಿದೆ. ಸದ್ಯ 120 ಟನ್ ತ್ಯಾಜ್ಯವನ್ನು ಸ್ವೀಕರಿಸಲಾಗುತ್ತಿದೆ. ಘಟಕಕ್ಕೆ ಸಂಪೂರ್ಣ ತ್ಯಾಜ್ಯ ಸ್ವೀಕರಿಸಿ ಸಂಸ್ಕರಣೆ ಮಾಡಬೇಕು. ಏನಾದರು ದುರಸ್ತಿ ಕಾರ್ಯವಿದ್ದರೆ ಅದನ್ನು ಸರಿಪಡಿಸಿಕೊಂಡು ಪೂರ್ಣ ಪ್ರಮಾಣದಲ್ಲಿ ಕಾರ್ಯ ನಿರ್ವಹಿಸುವಂತೆ ಮಾಡಬೇಕು. ಸ್ಥಳೀಯ ನಿವಾಸಿಗಳಿಗೆ ಯಾವುದೇ ರೀತಿಯ ದುರ್ವಾಸನೆ ಬಾರದಂತೆ ಔಷಧಿ ಸಿಂಪಡಣೆ ಮಾಡಿ, ವೈಜ್ಞಾನಿಕ ರೀತಿಯಲ್ಲಿ ಸಂಸ್ಕರಣೆ ಮಾಡುವಂತೆ ಸೂಚಿಸಿದರು.
ಪಕ್ಕಾ ರಾಜಕಾಲುವೆ ನಿರ್ಮಿಸಿ
ನಾಗರಭಾವಿಯ ಟೀಚರ್ಸ್ ಕಾಲೋನಿಯಲ್ಲಿ ಮಳೆಗಾಲದ ವೇಳೆ ಪ್ರವಾಹ ಸಮಸ್ಯೆ ಎದುರಾಗುತ್ತಿದೆ. ಆ ಸಮಸ್ಯೆಯನ್ನು ಬಗೆಹರಿಸಬೇಕಾದರೆ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿ ಆವರಣದಲ್ಲಿರುವ ಕಚ್ಚಾ ರಾಜಕಾಲುವೆಯನ್ನು ಪಕ್ಕಾ ರಾಜಕಾಲುವೆ ಮಾಡಬೇಕಿದೆ. ಈ ಸಂಬಂಧ ಇಂದು ಪಾಲಿಕೆ ಹಾಗೂ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರರ್ಸಿಟಿ ಯ ಉಪ ಕುಲಪತಿಗಳು ಜಂಟಿ ಪರಿಶೀಲನೆ ನಡೆಸಿ ರಾಜಕಾಲುವೆ ನಿರ್ಮಾಣ ಮಾಡಲು ಕ್ರಮವಹಿಸಲಾಗಿದೆ. ಈ ನಿಟ್ಟಿನಲ್ಲಿ ಕೂಡಲೆ ರಾಜಕಾಲುವೆ ಕಾಮಗಾರಿ ಆರಂಭಿಸಿ ಈ ಭಾಗದಲ್ಲಿ ಯಾವುದೇ ರೀತಿಯ ಸಮಸ್ಯೆ ಆಗದಂತೆ ಕ್ರಮ ವಹಿಸಬೇಕು ಎಂದು ತಿಳಿಸಿದರು.












Click it and Unblock the Notifications