E-Khata: ಬೆಂಗಳೂರು ಆಸ್ತಿ ಮಾಲೀಕರಿಗೆ ಬಿಬಿಎಂಪಿ ಗುಡ್‌ನ್ಯೂಸ್, ಇ-ಖಾತೆ ಇಲ್ಲೂ ಲಭ್ಯ
ಬೆಂಗಳೂರು, ಜನವರಿ 28: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು (ಬಿಬಿಎಂಪಿ) ಲಕ್ಷಾಂತರ ಆಸ್ತಿಗಳ ಖಾತೆಗಳನ್ನು ಡಿಜಿಟಲೀಕರಣಗೊಳಿಸಿದೆ. ಈ ಕಾರ್ಯ ಮುಂದುವರಿದಿದ್ದು, ಅವುಗಳನ್ನು ವಿತರಣೆ ಕಾರ್ಯಕ್ಕೆ ವೇಗ ನೀಡುವ ನಿಟ್ಟಿನಲ್ಲಿ ಹೊಸ ನಿರ್ಧಾರ ಪ್ರಕಟಿಸಿದೆ. ಕಂದಾಯ ಅಧಿಕಾರಿಗಳ ಕಚೇರಿ, ಬೆಂಗಳೂರು ಒನ್‌ಗಳಲ್ಲಿ ಇ-ಖಾತೆ ನೀಡಿದಂತೆ ಇದೀಗ ಸೈಬರ್ ಕೆಫೆಗಳಲ್ಲಿ ಸಹ ಇ-ಖಾತಾ ನೀಡುವುದಾಗಿ ತಿಳಿಸಿದೆ.
ಖಾಸಗಿ ಸಹಭಾಗಿತ್ವದಲ್ಲಿ ಇ-ಖಾತೆ ನೀಡಲು ಬಿಬಿಎಂಪಿ ನಿರ್ಧರಿಸಿದ್ದು, ಶೀಘ್ರವೇ ಈ ಕುರಿತು ಆದೇಶ ಪ್ರಕಟಿಸಲಾಗುವುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದ್ದಾರೆ. ಇದರಿಂದ ಗ್ರಾಹಕರು/ಆಸ್ತಿ ಮಾಲೀಕರು ಮುಂದಿನ ದಿನಗಳಲ್ಲಿ ಬೆಂಗಳೂರು ಒನ್ ನಂತೆ ಹತ್ತಿರದ ಸೈಬರ್ ಕೆಫೆಗಳಲ್ಲೂ ಇ-ಖಾತೆ ಲಭ್ಯವಿವೆ.

ಬೆಂಗಳೂರಿನಂತಹ ಬೃಹತ್ ನಗರದಲ್ಲಿ ಆಸ್ತಿ ವಿವರಗಳನ್ನು ನಕಲಿ ಮಾಡಿ ಇತರರಿಗೆ ಆಸ್ತಿ ಮಾರಾಟ, ಇನ್ನಿತರ ಅಕ್ರಮಗಳ ತಡೆಗೆ ಮುಂದಾದ ಬಿಬಿಎಂಪಿ ಆಸ್ತಿಗಳ ವಿವರವನ್ನು ಡಿಜಿಟಲೀಕರಣಗೊಳಿಸುತ್ತಿದೆ. ಡಿಜಿಟಲೀಕರಣಗೊಂಡ ಉದ್ದೇಶಿತ 22 ಲಕ್ಷ ಇ-ಖಾತಾ ವಿತರಣೆ ಪೈಕಿ ಕೇವಲ ಒಂದು ಲಕ್ಷಕ್ಕೂ ಹೆಚ್ಚಿನ ಇ-ಖಾತಾಗಳು ವಿತರಣೆ ಆಗಿದೆ. ಈ ಕಾರ್ಯಕ್ಕೆ ವೇಗ ನೀಡುವ ಉದ್ದೇಶದಿಂದ ಸೈಬರ್ ಕೆಫೆಗಳಲ್ಲೂ ವಿತರಣೆಗೆ ಕ್ರಮ ವಹಿಸಲಾಗುವುದು ಎಂದರು.
ಇ-ಖಾತಾ ವಿತರಣೆ ಮುಂದಿನ ದಿನಗಳಲ್ಲಿ ನಿರೀಕ್ಷಿತ ಮಟ್ಟದಲ್ಲಿ ತಲುಪುವ ಉದ್ದೇಶದಿಂದ ಈ ನಿರ್ಧಾರ ಮಾಡಲಾಗಿದೆ. ರಾಜ್ಯದಲ್ಲಿ ಪಹಣಿ ವಿತರಣೆಯನ್ನು ಖಾಸಗಿ ಸಹಭಾಗಿತ್ವದಲ್ಲಿ ಅಂದರೆ ಖಾಸಗಿ ಯವರು ನೀಡಬಹುದಾಗಿದೆ. ಅದರಂತೆ ಪಾಸ್‌ಪೋರ್ಟ್ ವಿತರಣೆಯನ್ನು ಖಾಸಗಿಯವರಿಗೆ ನೀಡಲಾಗಿದೆ. ಇದೇ ಮಾದರಿಯಲ್ಲಿ ಡಿಜಿಟಲೀಕರಣಗೊಂಡ ಇ-ಖಾತಾಗಳನ್ನು ಸೈಬರ್ ಸೆಂಟರ್‌ಗಳಲ್ಲೂ ಶೀಘ್ರವೇ ವಿತರಣೆ ಆರಂಭವಾಗಲಿದೆ ಎಂದು ಅವರು ತಿಳಿಸಿದರು.
ಈಗಾಗಲೇ ಯಾರೆಲ್ಲ ಬಿಬಿಎಂಫಿ ವ್ಯಾಪ್ತಿಯಲ್ಲಿ ನೋಂದಣಿ ಮಾಡಿಕೊಂಡಿದ್ದಾರೋ ಅಂತಹ ಸೈಬರ್ ಕೆಫೆಗಳಿಗೆ ಸಂಪರ್ಕಿಸುವಂತೆ ತಿಳಿಸಲಾಗಿದೆ. ಅನುಮತಿ ಪಡೆದ ಸೈಬರ್ ಕೆಫೆಗಳು ಮಾತ್ರವೇ ಜನರಿಂದ ದಾಖಲಾತಿ ಪಡೆದು ಸೂಚಿತ ವೆಬ್‌ಸೈಟ್‌ನಲ್ಲಿ ಅಪ್ಲೋಡ್ ಮಾಡಲಿವೆ. ಅದನ್ನು ಸಂಬಂಧಿಸಿದ ಬಿಬಿಎಂಪಿ ಅಧಿಕಾರಿಗಳು ಪರಿಶೀಲಿಸುತ್ತಾರೆ. ಇದೆಲ್ಲ ಆಗಿ ಅಪ್ಲೋಡ್ ಆದ ಬಳಿಕ ನಿಮಗೆ ಸೈಬರ್ ಕೆಫೆಯಲ್ಲಿ ಇ-ಸಿಗುತ್ತವೆ.
45 ರೂಪಾಯಿಗೆ ಇ-ಖಾತೆ ಪಡೆಯಿರಿ
ಬಿಬಿಎಂಪಿ ಇ-ಖಾತೆಯನ್ನು ಸೈಬರ್ ಕೆಫೆಗಳಲ್ಲಿ ನೀಡಲು 45 ರೂಪಾಯಿ ನಿಗದಿ ಪಡಿಸಲಾಗಿದೆ. ಹೆಚ್ಚುವರಿಯಾಗಿ 05 ರೂಪಾಯಿ ಪಡೆಯಲು ಅವಕಾಶ ಇದೆ. ಸ್ಕ್ಯಾನ್ , ಝರಾಕ್ಸ್ ಸಂಬಂಧಿಸಿದಂತೆ ಐದು ರೂಪಾಯಿ ಹೆಚ್ಚುವರಿ ಪಡೆಯಬಹುದು. ಇದಕ್ಕಿಂತ ಹೆಚ್ಚಿನ ಹಣ ಪಡೆಯುವಂತಿಲ್ಲ ಎಂದು ಬಿಬಿಎಂಪಿ ಸೂಚನೆ ನೀಡಿದೆ. ಕೆಲವೇ ದಿನಗಳಲ್ಲಿ ಈ ಬಗ್ಗೆ ಆದೇಶ ಪ್ರಕಟವಾದ ಬಳಿಕ ಅದರಲ್ಲಿ ಎಲ್ಲ ಅಂಶಗಳು ಇರಲಿವೆ.












Click it and Unblock the Notifications