Bengaluru: ಎಮರ್ಜೆನ್ಸಿ ಇದ್ದರೂ ಆಂಬುಲೆನ್ಸ್‌ಗೆ ದಾರಿ ಬಿಡದ ಆಟೋ ಚಾಲಕ: ವಿಡಿಯೋ
ಬೆಂಗಳೂರು, ಜನವರಿ 24: ರಾಜಧಾನಿ ಬೆಂಗಳೂರಿನ ಟ್ರಾಫಿಕ್ ನಲ್ಲಿ ತುರ್ತು ವೈದ್ಯಕೀಯ ಸೇವೆಯ ಆಂಬುಲೆನ್ಸ್ ವಾಹನಗಳ ಸಂಚಾರ ಕಷ್ಟ ಎನ್ನುವ ಸ್ಥಿತಿ ಇದೆ. ಇಂತಹ ಸಂದರ್ಭದಲ್ಲಿ ಇಲ್ಲೊಬ್ಬ ಆಟೋ ಚಾಲಕ ತುರ್ತು ಸನ್ನಿವೇಶ ಇದೆ ದಾರಿ ಬಿಡಿ ಎಂದು ಮನವಿ ಮಾಡಿದರೂ ಆಂಬುಲೆನ್ಸ್‌ಗೆ ದಾರಿ ಬಿಡದ ಅಸಹನೀಯ ಘಟನೆ ನಡೆದಿದೆ. ನಗರದ ಹಲಸೂರು ರಸ್ತೆಯಲ್ಲಿ ನಡೆದಿದೆ ಈ ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆಟೋ ಚಾಲಕನ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.
ತುರ್ತು ಚಿಕಿತ್ಸೆಗೆ ಅಗತ್ಯವಿರುವ ರೋಗಿಯೊಬ್ಬರು ಇದ್ದ ಆಂಬುಲೆನ್ಸ್ ಹಲಸೂರು ರಸ್ತೆಯಲ್ಲಿ ಸಂಚರಿಸುತ್ತಿದ್ದ ವೇಳೆ ಈ ಘಟನೆ ನಡೆದಿದೆ. ರೋಗಿಯನ್ನು ಆಸ್ಪತ್ರೆಗೆ ಕರೆದೊಯ್ಯುವ ದಾರಿ ಮಧ್ಯೆ ಆಂಬುಲೆನ್ಸ್ ವಾರ್ನಿಂಗ್ ಸೌಂಡ್ ಕೇಳಿದರೂ ಸಹ ದಾರಿ ಬಿಡದೇ ವಾಹನಕ್ಕೆ ಅಡ್ಡಲಾಗಿ ಆಟೋ ಚಲಾಯಿಸಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. KA 03 AD6342 ಸಂಖ್ಯೆಯ ಆಟೋ ಇದಾಗಿದೆ.

ವಾರ್ನಿಂಗ್ ಬೆಲ್ ಜೊತೆಗೆ ಧ್ವನಿ ವರ್ಧಕ ಮೂಲಕ ಆಂಬುಲೆನ್ಸ್ ಚಾಲಕ ತುರ್ತು ಸಂದರ್ಭವಿದೆ. ದಯವಿಟ್ಟು ಆಟೋ ಚಾಲಕ ದಾರಿ ಕೊಡಬೇಕು ಎಂದು ಕೆಲವು ಬಾರಿ ಮನವಿ ಮಾಡಿಕೊಂಡಿದ್ದಾರೆ. ಮೇಲಿಂದ ಮೇಲೆ ಮನವಿ ಮಾಡಿಕೊಂಡರೂ ದಾರಿ ಬಿಡದೇ ನಡು ರಸ್ತೆಯಲ್ಲಿ ಆಟೋ ಚಲಯಿಸಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಸೇರಿದಂತೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ವಿಡಿಯೋದಲ್ಲಿ ಒಳಗೆ ರೋಗಿಗಳು ಮತ್ತವರ ಕುಟುಂಬಸ್ಥರಲ್ಲಿ ಆಸ್ಪತ್ರೆಗೆ ಬೇಗ ತಲುಪಬೇಕೆಂಬ ಹಪಾಹಪಿ ಕಾಣಿಸುತ್ತದೆ. ಆಂಬುಲೆನ್ಸ್ ಚಾಲಕ ಧ್ವನಿ ವರ್ಧಕದ ಮೂಲಕ ಆಟೋ ಚಾಲಕನಿಗೆ ಮನವಿ ಮಾಡಿಕೊಳ್ಳುವ ದೃಶ್ಯಗಳು, ಸೆರೆಯಾಗಿವೆ. ಸದ್ಯ ಈ ವಿಡಿಯೋ ಅನ್ನು ಬೆಂಗಳೂರು ಸಂಚಾರಿ ಪೊಲೀಸರಿಗೆ ಟ್ಯಾಗ್ ಮಾಡಲಾಗಿದೆ.
ಎಮರ್ಜೆನ್ಸಿ ಇದ್ದರೂ ಆಂಬುಲೆನ್ಸ್‌ಗೆ ದಾರಿ ಬಿಡದೇ ದುರುದ್ದೇಶ ಮೆರೆದಿದ್ದಾರೆ. ಆಟೋ ಚಾಲಕ ಸಂಚಾರಿ ನಿಯಮ ಉಲ್ಲಂಘಿಸಿದ್ದಾನೆ. ಕನಿಷ್ಠ ಮಾನವೀಯತೆ ಇಲ್ಲದೇ ವರ್ತಿಸಿದ್ದಾನೆ. ಆತನ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ. ಈ ವಿಡಿಯೋ ಗುರುವಾರ ಪೋಸ್ಟ್ ಆಗಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಈವರೆಗೆ ಒಟ್ಟು 2.5 ಲಕ್ಷಕ್ಕೂ ಹೆಚ್ಚು ಜನರು ಈ ವಿಡಿಯೋ ವೀಕ್ಷಿಸಿದ್ದಾರೆ.
ಮನುಷ್ಯರು ಎಷ್ಟೇ ಧಾವಂತ, ಅವಸರದಲ್ಲಿದ್ದರು ಸಹ ಆಂಬುಲೆನ್ಸ್ ಶಬ್ದ ಕೇಳಿದ ತಕ್ಷಣವೇ ದಾರಿ ಬಿಡುವುದು ಮಾನವೀಯತೆ ಮತ್ತು ನಿಯಮ. ಆದರೆ ಈ ಆಟೋ ಚಾಲಕ ಮಾತ್ರ ಇದಕ್ಕೆ ತದ್ವಿರುದ್ಧ. ಎಷ್ಟು ಕೇಳಿಕೊಂಡರು ದಾರಿ ಬಿಡದೇ ಮೊಂಡು ಹಠ ಪ್ರದರ್ಶಿಸಿದ್ದಾನೆ.
ಹಲಸೂರು ರಸ್ತೆಯಲ್ಲಿ ಒಂದು ಬದಿಗೆ (ಬಲಗಡೆಗೆ) ಎದುರಿನ ವಾಹನಗಳು ಬರುತ್ತಿದ್ದರೆ, ಎಡಗಡೆಗೆ ಆಂಬುಲೆನ್ಸ್ ಮುಂದೆ ಆಟೋ ಜೋರಾಗಿ ಓಡಿಸುತ್ತಿರುವ ದೃಶ್ಯ ಕಂಡು ನೆಟ್ಟಿಗರು ಆಟೋ ಚಾಲಕನ ಮೇಲೆ ಕಿಡಿ ಕಾರಿದ್ದಾರೆ. ಇಂತದ್ದೆ ಘಟನೆಗಳು ನಡೆಯುತ್ತಲೇ ಇವೆ. ಕಠಿಣ ನಿಯಮ ಜಾರಿಗೆ ತರಬೇಕು, ಇಂತವರಿಗೆ ಶಿಕ್ಷೆ ಆಗಲಿದೆ ಎಂದೆಲ್ಲ ಕಾಮೆಂಟ್ ಮಾಡಲಾಗಿದೆ. ಈ ಘಟನೆ ಸಂಬಂಧ ಬೆಂಗಳೂರು ನಗರ ಪೊಲೀಸರು ಯಾವ ಕ್ರಮ ಕೈಗೊಂಡಿದ್ದಾರೆ ಎಂಬ ಮಾಹಿತಿ ಗೊತ್ತಾಗಬೇಕಿದೆ.












Click it and Unblock the Notifications