ಅತ್ತಿಬೆಲೆ ಪಟಾಕಿ ದುರಂತ: 5 ಮಂದಿ ವಿರುದ್ಧ FIR, ಇಬ್ಬರ ಬಂಧನ, ಸಾವಿನ ಸಂಖ್ಯೆ ಏರಿಕೆ
ಬೆಂಗಳೂರು, ಅಕ್ಟೋಬರ್ 09: ರಾಜಧಾನಿಯ ಬೆಂಗಳೂರು ಬಳಿಯ ಅತ್ತಿಬೆಲೆಯಲ್ಲಿ ಕಳೆದ ಶನಿವಾರ ಪಟಾಕಿ ಗೋದಾಮಿಗೆ ಬೆಂಕಿ ತಗುಲಿ ಒಟ್ಟು 14 ಮಂದಿ ಸಾವಿಗೀಡಾಗಿದ್ದಾರೆ. ಈ ಪ್ರಕರಣ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತನಿಖೆಗೆ ಆದೇಶಿಸಿದ ಬೆನ್ನಲ್ಲೆ ಐವರ ವಿರುದ್ಧ FIR ದಾಖಲಾಗಿದೆ.
ಭಾನುವಾರ ಪಟಾಕಿ ದುರಂತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಮತ್ತಿಬ್ಬರು ಸಾವು ಸೇರಿ ಒಟ್ಟು ಸಂಖ್ಯೆ 14ಕ್ಕೆ ಏರಿಕೆ ಆಗಿದೆ. ಘಟನಾ ಸ್ಥಳಕ್ಕೆ ತೆರಳಿದ್ದ ಮುಖ್ಯಮಂತ್ರಿಗಳು ಪರಿಶೀಲಿಸಿದ್ದಾರೆ. ಪ್ರಕರಣವನ್ನು ಅಪರಾಧ ತನಿಖಾ ಇಲಾಖೆಗೆ ವಹಿಸಿ ತನಿಖೆ ನಡೆಸಲಾಗುವುದು ಎಂದು ಹೇಳಿದ್ದರು. ಸೋಮವಾರ ಆದೇಶ ಸಹ ಆಗಿತ್ತು.

ಪ್ರಕರಣದಲ್ಲಿ ಪೊಲೀಸ್ ಅಧಿಕಾರಿಗಳು 05 ಮಂದಿ ವಿರುದ್ಧ FIR ದಾಖಲಿಸಲಾಗಿದೆ. ಇಬ್ಬರನ್ನು ಬಂಧಿಸಿದ್ದಾರೆ. ಬಾಲಾಜಿ ಟ್ರೇಡರ್ಸ್ (ಪಟಾಕಿ) ಅಂಗಡಿಯ ಮಾಲೀಕರಾದ ವಿ ರಾಮಸ್ವಾಮಿ ರೆಡ್ಡಿ ಮತ್ತು ಅವರ ಪುತ್ರ ನವೀನ್ ರೆಡ್ಡಿ, ಅಕಾ ನವೀನ್ ಕುಮಾರ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಪಟಾಲಿ ಮಳಿಗೆ ಮತ್ತು ಗೋದಾಮು ಇದ್ದ ಕಟ್ಟಡದ ಮಾಲೀಕರು ಜಯಮ್ಮ, ಅವರ ಮಗ ಅನಿಲ್ ರೆಡ್ಡಿ ಮತ್ತು ವ್ಯವಸ್ಥಾಪಕ ಲೋಕೇಶ್ ಅವರದ್ದು ಎಂಬುದು ಗೊತ್ತಾಗಿದೆ.
ಭಾನುವಾರ ಇಬ್ಬರ ಬಂಧನ
ತಪ್ಪಿತಸ್ಥರ ಪೈಕಿ ರಾಮಸ್ವಾಮಿ ಮತ್ತು ಅನಿಲ್ ಅವರನ್ನು ಪೊಲೀಸರು ಭಾನುವಾರ ಬಂಧಿಸಿದ್ದಾರೆ. ವೈದ್ಯರ ಸಲಹೆ ಮೆರೆಗೆ ನವೀನ್‌ರನ್ನು ವಿಚಾರಣೆ ನಡೆಸಲಾಗುವುದು. ಲೋಕೇಶ್‌ನ ಬಂಧನಕ್ಕೆ ಬಲೆ ಬೀಸಲಾಗಿದೆ. ಬಂಧಿಸುವ ಪ್ರಯತ್ನಗಳು ನಡೆಯುತ್ತಿವೆ. ರಾಮಸ್ವಾಮಿ ಮತ್ತು ಅನಿಲ್ ಅವರನ್ನು ವಿಚಾರಣೆ ನಡೆಸಲಾಗುತ್ತಿದೆ ಮತ್ತು ಸೋಮವಾರ ಬೆಳಗ್ಗೆ ನ್ಯಾಯಾಲಯದ ಮುಂದೆ ಹಾಜರು ಮಾಡಲಿದ್ದೇವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕೇಂದ್ರ ವ್ಯಾಪ್ತಿಯ ಐಜಿಪಿ ಬಿ.ಆರ್.ರವಿಕಾಂತೇಗೌಡ ಅವರು ಪ್ರಕರಣ ಕುರಿತು ಪ್ರತಿಕ್ರಿಯಿಸಿದ್ದು, ಪಟಾಕಿ ಮಳಿಗೆಯಲ್ಲಿ ಯಾವ ಅಗ್ನಿ ಸುರಕ್ಷತಾ ವ್ಯವಸ್ಥೆಗಳು, ಕ್ರಮಗಳು ಇರಲಿಲ್ಲ. ನಾವು ಪರವಾನಗಿ ಷರತ್ತುಗಳ ಉಲ್ಲಂಘನೆಯನ್ನು ಪರಿಶೀಲಿಸುತ್ತಿದ್ದೇವೆ. ಈ ಕಾರಣದಿಂದ ಬೆಂಕಿ ಹೊತ್ತಿಕೊಂಡಿರಬಹುದು. ಆದರೆ ವಿಧಿ ವಿಜ್ಞಾನ ಪ್ರಯೋಗಾಲಯ (FSL), ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಅಧಿಕಾರಿಗಳು ವಿವರವಾದ ವರದಿಗಳ ಬಳಿಕವೆ ದುರಂತೆ ನೈಜ ಕಾರಣ ತಿಳಿಯಲಿದೆ ಎಂದು ಅವರು ತಿಳಿಸಿದರು.
ಮೃತರಲ್ಲಿ ಐವರು 17-20 ವರ್ಷ ವಯಸ್ಸಿನವರು
ಘಟನೆಯಲ್ಲಿ ಮೃತರು ತಮಿಳುನಾಡಿನ ಧರ್ಮಪುರಿ ಜಿಲ್ಲೆಯ ಹರೂರು ತಾಲೂಕಿನ ಗಿರಿ, ವಿಳಂಬರತಿ, ಆಕಾಶ್, ಸಚಿನ್, ವಿಜಯರಾಘವನ್, ವೇದಿಯಪ್ಪನ್, ಆದಿಕೇಶವನ್, ತಿರುಪತ್ತೂರು ಜಿಲ್ಲೆಯ ವಾಣಿಯಂಬಾಡಿ ತಾಲೂಕಿನ ವಸಂತ ರಾಜ, ಅಬ್ಬಾಸ್, ಸಂತೋಷ್, ಪ್ರಭಾಕರ್, ನಿತೀಶ್ ಎಲ್ಲಾ ಐವರು 17 ರಿಂದ 20 ವರ್ಷ ವಯಸ್ಸಿನವರಾಗಿದ್ದಾರೆ. , ತಿರುವಣ್ಣಾಮಲೈನ ಸಂಗಮ್ ತಾಲೂಕಿನ ಪ್ರಕಾಶ ಮತ್ತು ಹೊಸೂರಿನ ಅಂತೋನಿ ಪಾಲ್ ರಾಜ್ (25) ಎಂದು ಗುರುತಿಸಲಾಗಿದೆ.
ತಮಿಳುನಾಡಿನ ಧರ್ಮಪುರಿ ಜಿಲ್ಲೆಯ ಹರೂರ್ ನಿವಾಸಿ ಲೋಕೇಶ್ವರನ್ ಎಂಬವರು ನೀಡಿದ ದೂರಿನ ಆಧಾರದ ಮೇಲೆ ಅತ್ತಿಬೆಲೆ ಪೊಲೀಸರು IPC ಸೆಕ್ಷನ್ 285 ರ ಅಡಿ ಆರೋಪಿಗಳ ವಿರುದ್ಧ FIR ದಾಖಲಿಸಿಕೊಂಡಿದ್ದಾರೆ. ಬೆಂಕಿಗೆ ಆಹುತಿಯಾಗುವ ವಸ್ತುಗಳಿಗೆ ಸಂಬಂಧಿಸಿದ ನಿರ್ಲಕ್ಷ್ಯದ ವರ್ತನೆ 286 - ಸ್ಫೋಟಕ ವಸ್ತುವಿಗೆ ಸಂಬಂಧಿಸಿದಂತೆ ನಿರ್ಲಕ್ಷ್ಯ ನಡವಳಿಕೆ 337 - ಇತರರ ಜೀವ ಅಥವಾ ವೈಯಕ್ತಿಕ ಸುರಕ್ಷತೆಗೆ ಅಪಾಯ ಉಂಟು ಮಾಡುವ ಕ್ರಿಯೆ 338 ಒಳಗೊಂಡ ಸ್ಪೋಟಕ ಕಾಯ್ದೆಗಳಡಿ ಪ್ರಕರಣ ದಾಖಲಾಗಿದೆ.












Click it and Unblock the Notifications