ರೇಣುಕಾಸ್ವಾಮಿ ಕೊಲೆ ಪ್ರಕರಣ: ಕನ್ನಡ ಚಿತ್ರರಂಗದ ಮತ್ತೋರ್ವ ನಟನ ಬಂಧನ
ಬೆಂಗಳೂರು, ಜೂನ್ 13: ಕನ್ನಡ ಚಿತ್ರರಂಗದ ನಟ ದರ್ಶನ್ ಭಾಗಿಯಾಗಿದ್ದಾರೆ ಎನ್ನಲಾದ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣ ದಿನದಿಂದ ದಿನಕ್ಕೆ ಟ್ವಿಸ್ಟ್ ಪಡೆದುಕೊಳ್ಳುತ್ತಿದ್ದು, ಪ್ರಕರಣದಲ್ಲಿ ಕನ್ನಡ ಚಿತ್ರರಂಗದ ಮತ್ತೋರ್ವ ನಟನನ್ನು ಬಂಧಿಸಲಾಗಿದೆ. ಈ ಮೂಲಕ ಪ್ರಕರಣದಲ್ಲಿ ನಟ ದರ್ಶನ್, ಪವಿತ್ರಾ ಗೌಡ ಸೇರಿ ಬಂಧಿತ ಆರೋಪಿಗಳ ಸಂಖ್ಯೆ 14ಕ್ಕೆ ಏರಿಕೆಯಾಗಿದೆ.
ಸದ್ಯ ಬಂಧಿತ ಆರೋಪಿಯನ್ನು ನಟ ಪ್ರದೋಶ್ ಎಂದು ಗುರುತಿಸಲಾಗಿದೆ. ಪ್ರಕರಣದ 14ನೇ ಆರೋಪಿಯಾಗಿರುವ ಪ್ರದೋಶ್, ದರ್ಶನ್ ಜೊತೆಗಿನ ಬೃಂದಾವನ, ಬುಲ್ ಬುಲ್ ಚಿತ್ರಗಳಲ್ಲಿ ನಟಿಸಿದ್ದಾನೆ. ಅಲ್ಲದೇ ದರ್ಶನ್ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದಾನೆ ಎನ್ನಲಾಗಿದೆ. ಇನ್ನು ಪ್ರದೋಶ್ ಬಿಜೆಪಿ ನಾಯಕನ ಜೊತೆ ಆಪ್ತ ಸಹಾಯಕನಾಗಿ ಕೂಡ ಕೆಲಸ ಮಾಡಿದ್ದಾನೆ ಎನ್ನುವ ಮಾಹಿತಿ ಲಭ್ಯವಾಗಿದೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ಪ್ರದೋಶ್ ಪಾತ್ರ ಮುಖ್ಯವಾಗಿದೆ ಎನ್ನಲಾಗುತ್ತಿದೆ. ರೇಣುಕಾಸ್ವಾಮಿ ಮೃತಪಟ್ಟ ಬಳಿಕ ದರ್ಶನ್ ಸೂಚನೆ ಮೇರೆಗೆ ಪ್ರದೋಶ್ ಹಾಗೂ ಮತ್ತಿತರರು ರೇಣುಕಾಸ್ವಾಮಿ ಮೃತ ದೇಹವನ್ನು ಸ್ಕಾರ್ಪಿಯೋ ಕಾರಿನಲ್ಲಿ ಒಯ್ದು ಸುಮ್ಮನಹಳ್ಳಿಯ ಅಪಾರ್ಟ್‌ಮೆಂಟ್ ಒಂದರ ಮುಂಭಾಗದ ಮೋರಿ ಬಳಿ ಎಸೆದು ಹೋಗಿದ್ದಾರೆ ಎನ್ನಲಾಗುತ್ತಿದೆ.
ದರ್ಶನ್ ಪ್ರಕರಣ: ನಾಗರಾಜ್ ರಾಚಯ್ಯ ಪೊಲೀಸರ ಮುಂದೆ ಕಣ್ಣೀರು
ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದ 11ನೇ ಆರೋಪಿಯಾಗಿ ಬಂಧನ ಆಗಿರುವ ನಾಗರಾಜ್ ರಾಚಯ್ಯ ಪೊಲೀಸರ ಮುಂದೆ ಕಣೀರು ಹಾಕುತ್ತಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಕೊಲೆ ಆರೋಪದಲ್ಲಿ ನಟ ದರ್ಶನ್ ಜೊತೆ ನಾಗರಾಜ್ ರಾಚಯ್ಯ ಜೈಲಿನಲ್ಲಿ ಎರಡು ರಾತ್ರಿ ಕಳೆದಿದ್ದಾರೆ.
ಸ್ಥಳ ಮಹಜರು ಮಾಡಲೆಂದು ನಾಗರಾಜ್ ರಾಚಯ್ಯನನ್ನ ಪೊಲೀಸರು ಕರೆದುಕೊಂಡು ಹೋಗಿದ್ದಾಗ ಮಾಡಿದ ತಪ್ಪಿಗೆ ಕಣ್ಣೀರು ಹಾಕಿದ್ದು, ಪೊಲೀಸ್ ಠಾಣೆಯಲ್ಲಿ ಎಲ್ಲಾ ಆರೋಪಿಗಳನ್ನು ವಿಚಾರಣೆ ಮಾಡುವಂತೆ ರಾಚಯ್ಯನನ್ನ ವಿಚಾರಿಸುವಾಗಲೂ ಅಳುತ್ತಿದ್ದರು ಎನ್ನಲಾಗಿದೆ. ನಟ ದರ್ಶನ್ ಅವರ ಆಪ್ತನಾಗಿರುವ ನಾಗರಾಜ್ ರಾಚಯ್ಯ, ಅವರ ಮೇಲೆ ಅಪಾರವಾದ ಅಭಿಮಾನ ಹೊಂದಿದ್ದನು. ಈ ಹಿಂದೆ ದರ್ಶನ್ ವಿರುದ್ಧ ಅವಹೇಳನಕಾರಿ ಪೋಸ್ಟ್ ಶೇರ್ ಮಾಡಲಾಗಿತ್ತು. ಈ ಸಂಬಂಧ ಪೊಲೀಸ್ ಠಾಣೆಗೆ ದೂರು ನೀಡಿ ಆರೋಪಿಗಳ ವಿರುದ್ಧ ಕ್ರಮಕೈಗೊಳ್ಳುವಂತೆ ನಾಗರಾಜ್ ರಾಚಯ್ಯ ಮನವಿ ಮಾಡಿದ್ದರು ಎನ್ನಲಾಗಿದೆ.












Click it and Unblock the Notifications