Anna Bhagya Scheme: ಪಡಿತರ ಹಂಚಿಕೆ ತೂಕದಲ್ಲಿ ಏರುಪೇರು ಬಗ್ಗೆ ಖಡಕ್ ಸೂಚನೆ
ಬೆಂಗಳೂರು: ಫೆಬ್ರವರಿ 19: ಕರ್ನಾಟಕ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ಐದು ಗ್ಯಾರಂಟಿ ಯೋಜನೆಗಳಲ್ಲಿ ಅನ್ನಭಾಗ್ಯವು ಒಂದು. ಇತ್ತೀಚೆಗೆ ಹೆಚ್ಚುವರಿ ಐದು ಕೆ.ಜಿ. ಅಕ್ಕಿಗೆ ಕೊಡುತ್ತಿದ್ದ ಹಣ ಬಂದಿಲ್ಲ ಎಂಬ ಮಾತುಗಳು ಕೇಳಿ ಬಂದವು. ಇದರ ಬೆನ್ನಲ್ಲೆ, ಹತ್ತು ಕೆ.ಜಿ.ಅಕ್ಕಿ ನೀಡುವುದಾಗಿ ರಾಜ್ಯ ಸರ್ಕಾರ ಬುಧವಾರ ತಿಳಿಸಿದೆ. ಇದರ ಬೆನ್ನಲ್ಲೆ ಪಡಿತರ ಹಂಚಿಕೆ ತೂಕದಲ್ಲಿ ಏರುಪೇರು ಕುರಿತು ಬಿಬಿಎಂಪಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ಜಿ.ಕೃಷ್ಣಪ್ಪ ಅವರು ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಬುಧವಾರ ಜಯನಗರ ವಿಧಾನ ಸಭಾ ಕ್ಷೇತ್ರದ ಕಛೇರಿಯಲ್ಲಿ ಇಂದು ಪರಿವೀಕ್ಷಣೆ ನಡೆಸಿದ ವೇಳೆ ಗ್ಯಾರಂಟಿ ಯೋಜನೆಗಳ ಪರಿಣಾಮಕಾರಿ ಅನುಷ್ಠಾನದ ಕುರಿತು ಚರ್ಚಿಸಿದರು. ಈ ವೇಳೆ ಮಾತನಾಡಿದ ಅವರು ರಾಜ್ಯದ್ಲಲಿ ಅನ್ನಭಾಗ್ಯ ಯೋಜನೆಯಡಿ ಪಡಿತರ ಹಂಚುವಾಗ ತೂಕದಲ್ಲಿ ಯಾವುದೇ ರೀತಿಯ ಏರುಪೇರು ಆಗದಂತೆ ನೋಡಿಕೊಳ್ಳಬೇಕು.

ಪಡಿತರ ಹಂಚುವಾಗ ತೂಕದಲ್ಲಿ ಯಾವುದೇ ರೀತಿಯ ಏರುಪೇರು ಆಗದಂತೆ ಪ್ರತಿ ಫಲಾನುಭವಿಗಳಿಗೆ ತಲಾ 5 ಕೆ.ಜಿ ಆಹಾರ ಧಾನ್ಯವನ್ನು ವಿತರಿಸುವಂತೆ ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ನಿರ್ದೇಶಿಸಿದರು. ಇದೇ ವೇಳೆ ಪಡಿತರ ಸರಿಯಾಗಿ ವಿತರಿಸುತ್ತಿರುವ ಬಗ್ಗೆ ನಿಯಮಿತವಾಗಿ ಮೇಲುಸ್ತುವಾರಿ ವಹಿಸುವಂತೆ ಆಹಾರ ನಿರೀಕ್ಷಕರಿಗೆ ಹೇಳಿದರು.
ಜಯನಗರ ವ್ಯಾಪ್ತಿಯಲ್ಲಿ 80 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ, ಅಂಗವಿಕಲರಿಗೆ, ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿರುವವರಿಗೆ ಅನ್ನ ಸುವಿಧ ಕಾರ್ಯಕ್ರಮದ ಮೂಲಕ ಫಲಾನುಭವಿಗಳ ಮನೆ ಬಾಗಿಲಿಗೆ ಪಡಿತರ ಕಟ್ಟುನಿಟ್ಟಾಗಿ ವಿತರಿಸುವಂತೆ ಸೂಚಿಸಿದರು.

ಪಂಚ್ಯ ಗ್ಯಾರಂಟಿ ಯೋಜನೆಗಳಿಂದ ನಾಗರಿಕರಿಗೆ ಸಾಕಷ್ಟು ಅನುಕೂಲವಾಗಿದೆ. ಬಡ ವರ್ಗದ ಜನರ ಜೀವನ ನಿರ್ವಹಣೆಯ ಒತ್ತಡ ಕಡಿಮೆಯಾಗಿ, ಜನರ ಜೀವನ ಮಟ್ಟ ಸುಧಾರಣೆಯಾಗಿದೆ ಎಂದು ಮಾಹಿತಿ ನೀಡಿದರು. ಈ ವೇಳೆ ಜಯನಗರ ಕ್ಷೇತ್ರದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಎನ್ ನಾಗರಾಜು, ಬಿಬಿಎಂಪಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಉಪಾಧ್ಯಕ್ಷರಾದ ಸ್ವಪ್ನಚಂದ್ರ ಶೆಟ್ಟಿ, ಸ್ಥಳೀಯ ಸಮಿತಿಯ ಸದಸ್ಯ ಕಾರ್ಯದರ್ಶಿಗಳು ಇದ್ದರು.
ಐದು ಕೆ.ಜಿ. ಹೆಚ್ಚುವರಿ ಅಕ್ಕಿ ವಿತರಣೆ
ರಾಜ್ಯದಲ್ಲಿ ಐದು ಕೇಜಿಗೆ ಬದಲಾಗಿ ತಲಾ ಹತ್ತು ಕೆ.ಜಿ. ಅಕ್ಕಿ ನೀಡುತ್ತೇವೆ ಎಂದು ರಾಜ್ಯ ಕಾಂಗ್ರೆಸ್ ಹೇಳಿತ್ತು. ಆದರೆ ಚುನಾವಣೆಯಲ್ಲಿ ಗೆದ್ದ ಬಳಿಕ ಅಕ್ಕಿ ಸಿಗದ ಕಾರಣ, ಐದು ಕೆ.ಜಿ. ಅಕ್ಕಿ ನೀಡುತ್ತೇವೆ. ಇನ್ನೈದು ಕೆ.ಜಿ. ಅಕ್ಕಿ ಬದಲಾಗಿ, ಮನೆ ಯಜಮಾನಿ ಖಾತೆಗೆ ತಲಾ 170 ರೂಪಾಯಿ ಹಾಕುತ್ತೇವೆ ಎಂದು ಮಾತು ಕೊಟ್ಟಿತ್ತು. ಅದರಂತೆ ಕೆಲವು ತಿಂಗಳು ನಡೆದುಕೊಂಡು ಬಂದಿತ್ತು.
ಇದೀಗ ಐದು ತಿಂಗಳಿಂದ ಹೆಚ್ಚುವರಿ ಅಕ್ಕಿ ನೀಡುತ್ತಿಲ್ಲ. ಇತ್ತ ಖಾತೆಗೆ ಹಣವು ಬರುತ್ತಿಲ್ಲ. ಈ ಕಾರಣದಿಂದ ಬುಧವಾರ ರಾಜ್ಯ ಸರ್ಕಾರ ಹೆಚ್ಚುವರಿ ಅಕ್ಕಿಯನ್ನೇ ನೀಡುತ್ತೇವೆ. ಎಲ್ಲ ಗ್ಯಾರಂಟಿ ಮುಂದುವರಿಯಲಿವೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.












Click it and Unblock the Notifications