Taxic: ಟಾಕ್ಸಿಕ್ ಟೀಸರ್ ರದ್ದುಗೊಳಿಸಲು ಕರ್ನಾಟಕ ಮಹಿಳಾ ಆಯೋಗ ದೂರು
ಬೆಂಗಳೂರು: ನಟ ಯಶ್ ಹುಟ್ಟು ಹಬ್ಬದಂದು (ಜನವರಿ 08) ಬಹುನಿರೀಕ್ಷೆಯ ಅವರ 'ಟಾಕ್ಸಿಕ್' ಸಿನಿಮಾ ಟೀಸರ್ ಬಿಡುಗಡೆ ಆಗಿತ್ತು. ಇದರ ಬಗ್ಗೆ ವ್ಯಾಪಕ ಚರ್ಚೆಗಳು ಶುರುವಾದ ಬೆನ್ನಲ್ಲೆ, ರಾಜಧಾನಿ ಬೆಂಗಳೂರಿನಲ್ಲಿ 'ಟಾಕ್ಸಿಕ್' ರದ್ದುಗೊಳಿಸುವಂತೆ ಕರ್ನಾಟಕ ರಾಜ್ಯ ಮಹಿಳಾ ಆಯೋಗಕ್ಕೆ ದೂರುವೊಂದು ನೀಡಲಾಗಿದೆ. ಇದು ಮತ್ತಷ್ಟು ಚರ್ಚೆಗೆ ಗ್ರಾಸವಾಗಿದೆ.
ಕೆಜಿಎಫ್ ಸರಣಿ ಸಿನಿಮಾಗಳ ಮೂಲಕ ಕನ್ನಡ ಹಾಗೂ ಸ್ಯಾಂಡಲ್‌ವುಡ್ ಅನ್ನು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡುವಂತೆ ಮಾಡಿದ ನಟ ಯಶ್ ಅವರ ಸಿನಿಮಾ ಟೀಸರ್ ನಲ್ಲಿನ ಹಸಿಬಿಸಿ ದೃಶ್ಯಗಳು ವ್ಯಾಪಕ ಚರ್ಚೆಗೆ ಕಾರಣವಾಗಿವೆ. ಟೀಸರ್ ಬಗ್ಗೆ ಚಕಾವೆತ್ತಿರುವ ಆಮ್ ಆದ್ಮಿ ಪಕ್ಷದ (AAP) ಮಹಿಳಾ ಘಟಕ ರಾಜ್ಯ ಮಹಿಳಾ ಆಯೋಗಕ್ಕೆ ರದ್ದುಗೊಳಿಸುವಂತೆ ಕೋರಿದೆ.

ಟೀಸರ್‌ನಿಂದ ಸಾಮಾಜಿಕ ಸ್ವಾಸ್ಥ್ಯಕ್ಕೆ ಧಕ್ಕೆ
ಇಂದು ಸೋಮವಾರ ರಾಜ್ಯ ಮಹಿಳಾ ಆಯೋಗದ ಕಚೇರಿಗೆ ಭೇಟಿ ನೀಡಿದ ಎಎಪಿ ಮಹಿಳಾ ಘಟಕದ ಸದಸ್ಯರು ದೂರು ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಪಕ್ಷದ ರಾಜ್ಯ ಕಾರ್ಯದರ್ಶಿ ಉಷಾ ಮೋಹನ್' ಈ ಟೀಸರ್ ನಲ್ಲಿರುವ ಅಶ್ಲೀಲ ಹಾಗೂ ಪ್ರೌಢ ದೃಶ್ಯಗಳು ಹೆಂಗಳೆಯರ ಹಾಗೂ ಮಕ್ಕಳ ಸಾಮಾಜಿಕ ಸ್ವಾಸ್ಥ್ಯಕ್ಕೆ ಧಕ್ಕೆ ಉಂಟು ಮಾಡುತ್ತಿದೆ. ಯಾವುದೇ ವಯಸ್ಸಿನ ಮಿತಿ ಅಥವಾ ಮುನ್ನೆಚ್ಚರಿಕೆ ಇಲ್ಲದೆ ಸಾರ್ವಜನಿಕವಾಗಿ ಬಿಡುಗಡೆಯಾಗಿರುವ ಈ ದೃಶ್ಯಗಳು ಮಹಿಳೆಯರ ಘನತೆಗೆ ಕುಂದು ತರುವಂತಿವೆ. ಕನ್ನಡದ ಐತಿಹಾಸಿಕ ಸಾಂಸ್ಕೃತಿಕ ಜಗತ್ತಿಗೆ ಮಾಡುತ್ತಿರುವ ತೀವ್ರ ಅಪಮಾನವಾಗಿದೆ, ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಮಾಜದ ಮೇಲೆ ವಿಶೇಷವಾಗಿ ಅಪ್ರಾಪ್ತ ವಯಸ್ಕರ ಮೇಲೆ ಇದು ಗಂಭೀರ ದುಷ್ಪರಿಣಾಮಗಳನ್ನು ಬೀರುತ್ತಿದೆ. ರಾಜ್ಯ ಮಹಿಳಾ ಆಯೋಗವು ಈ ಕೂಡಲೇ ಮಧ್ಯ ಪ್ರವೇಶಿಸಬೇಕು ಹಾಗೂ ಈ ಟೀಸರ್ ಅನ್ನು ಕೂಡಲೇ ರದ್ದುಗೊಳಿಸಲು ಮತ್ತು ಸಾಮಾಜಿಕ ಜಾಲತಾಣಗಳಿಂದ ತೆಗೆದು ಹಾಕಲು ರಾಜ್ಯ ಸರ್ಕಾರಕ್ಕೆ ಹಾಗೂ ಪೊಲೀಸ್ ಇಲಾಖೆಗೆ ನಿರ್ದೇಶನ ನೀಡಬೇಕು.
ನಮ್ಮ ನಾಡಿನ ಮಹಿಳೆಯರ ಸಾಂಸ್ಕೃತಿಕ ಮತ್ತು ನೈತಿಕ ಮೌಲ್ಯಗಳನ್ನು ಎತ್ತಿ ಹಿಡಿಯುವ ಸಾಂವಿಧಾನಿಕ ಕರ್ತವ್ಯಕ್ಕೆ ಬದ್ಧವಾಗಿರುವ ಮಹಿಳಾ ಆಯೋಗವು ಕೂಡಲೇ ಕ್ರಮಕ್ಕೆ ಮುಂದಾಗಬೇಕು. ಸರ್ಕಾರವು ಸಹ ಈ ಬಗ್ಗೆ ಕಠಿಣವಾದಂತಹ ಕಾನೂನುಗಳನ್ನು ರೂಪಿಸಬೇಕು "ಎಂದು ಉಷಾ ಮೋಹನ್ ಆಗ್ರಹಿಸಿದರು. ಇದೇ ಸಂದರ್ಭದಲ್ಲಿದ್ದ ಎಎಪಿಯ ಮಹಿಳಾ ಮುಖಂಡಯರಾದ ವೀಣಾ ಸರ್ರಾವ್. ಜ್ಯೋತಿ ಮತ್ತು ಇನ್ನಿತರ ಸದಸ್ಯರು ಒಕ್ಕೋರಲಿನಿಂದ ಈ ವಿಷಯದ ಬಗ್ಗೆ ಮನವಿ ಮಾಡಿದರು.












Click it and Unblock the Notifications