ಮೂರು ಪತ್ರದ ಮೂಲಕ ಬಿಜೆಪಿ ಮನೆ-ಮನೆ ಪ್ರಚಾರ
ಬೆಂಗಳೂರು, ಜ.28 : ಲೋಕಸಭೆ ಚುನಾವಣೆಗೆ ಭರ್ಜರಿ ತಯಾರಿ ಆರಂಭಿಸಿರುವ ಬಿಜೆಪಿ ಬೆಂಗಳೂರಿನಲ್ಲಿ ಮನೆಮನೆ ಪ್ರಚಾರ ಆರಂಭಿಸಿದೆ. ಪಕ್ಷದ ರಾಷ್ಟ್ರೀಯ ಪ್ರದಾನ ಕಾರ್ಯದರ್ಶಿ ಅನಂತ್ ಕುಮಾರ್ ಭಾನುವಾರ ಮನೆ-ಮನೆ ಪ್ರಚಾರಕ್ಕೆ ಚಾಲನೆ ನೀಡಿದ್ದಾರೆ. ಕಾಂಗ್ರೆಸ್ ಸರ್ಕಾರದ 10 ವರ್ಷದ ದುರಾಡಳಿತವನ್ನು ಮನೆ-ಮನೆಗೆ ತಪುಪಿಸಲು ಈ ಪ್ರಚಾರ ಕಾರ್ಯ ಕೈಗೊಳ್ಳಲಾಗಿದೆ.
ಪ್ರಚಾರ ಆರಂಭಿಸಿ ಮಾತನಾಡಿದ ಅನಂತ್ ಕುಮಾರ್, ಮನೆ-ಮನೆ ಪ್ರಚಾರದಲ್ಲಿ ನಾವು ವಿಕಾಸ ಪತ್ರ (ಬಿಜೆಪಿ ಅಧಿಕಾರದಲ್ಲಿರುವ ರಾಜ್ಯದ ಸಾಧನೆ), ಆರೋಪ ಪತ್ರ (ಕಾಂಗ್ರೆಸ್ ಅಧಿಕಾರದಲ್ಲಿರುವ ರಾಜ್ಯಗಳ ದುರಾಡಳಿತ), ನಮೋ ಪತ್ರ (ನರೇಂದ್ರ ಮೋದಿ ಅವರ ಸಾಧನೆ ಬಿಂಬಿಸುವ ಪತ್ರ)ಗಳನ್ನು ಜನರಿಗೆ ತಲುಪಿಸಲಾಗುತ್ತದೆ ಎಂದು ಹೇಳಿದ್ದಾರೆ.

ದೇಶಾದ್ಯಂತ ನರೇಂದ್ರ ಮೋದಿ ಅವರ ಅಲೆ ಎದ್ದಿದೆ. ಕಳೆದ ಹತ್ತು ವರ್ಷಗಳಿಂದ ಕೇಂದ್ರ ಸರ್ಕಾರದ ಭಷ್ಟಾಚಾರ, ಬೆಲೆ ಏರಿಕೆ, ಹಗರಣಗಳನ್ನು ನೋಡಿ ಜನರು ಹತಾಶರಾಗಿದ್ದಾರೆ. ಸದ್ಯ ಬದಲಾವಣೆಯ ಕಾಲ ಬಂದಿದ್ದು, ಜನರು ಬಿಜೆಪಿಗೆ ಬೆಂಬಲ ನೀಡಲಿದ್ದಾರೆ. ನರೇಂದ್ರ ಮೋದಿ ದೇಶದ ಪ್ರಧಾನಿಯಾಗುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಅನಂತ್ ಕುಮಾರ್ ಹೇಳಿದರು. [ಅನಂತ್-ನಿಲೇಕಣಿ ಮುಖಾಮುಖಿ]
ಮೊದಲ ದಿನದ ಪ್ರಚಾರದಲ್ಲಿಯೇ ನಮಗೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ನನ್ನ ಕ್ಷೇತ್ರದ ಜನರು ನರೇಂದ್ರ ಮೋದಿ ಮತ್ತು ತಮಗೆ ಬೆಂಬಲ ನೀಡಿದ್ದಾರೆ. ಇದಕ್ಕಾಗಿ ಕ್ಷೇತ್ರದ ಜನರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಅನಂತ್ ಕುಮಾರ್ ಹೇಳಿದರು.
ಭ್ರಷ್ಟಾಚಾರ, ವಲಸೆ, ನಿರುದ್ಯೋಗ, ರಾಷ್ಟ್ರೀಯ ಭದ್ರತೆ ಮುಂತಾದ ಸಮಸ್ಯೆಗಳನ್ನು ನಿವಾರಿಸಲುವಲ್ಲಿ ಕೇಂದ್ರದ ಯುಪಿಎ ಸರ್ಕಾರ ವಿಫಲವಾಗಿದೆ. ದೇಶದ ಜನರು ಇಂದಿನ ರಾಜಕೀಯ ಪರಿಸ್ಥಿತಿಯಿಂದ ಜಾಗೃತವಾಗಿದ್ದು, ಬಿಜೆಪಿಗೆ ಬೆಂಬಲ ನೀಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇತ್ತೀಚೆಗೆ ನಡೆದ ಐದು ರಾಜ್ಯಗಳ ಚುನಾವಣೆ ಫಲಿತಾಂಶದಂತೆ ಲೋಕಸಭೆ ಚುನಾವಣೆ ಫಲಿತಾಂಶ ಬರಲಿದ್ದು, ಕಾಂಗ್ರೆಸ್ ಧೂಳಿಪಟವಾಗಲಿದೆ ಎಂದು ಅನಂತ್ ಕುಮಾರ್ ಹೇಳಿದರು. ಸಮರ್ಥನಾಯಕರಿಲ್ಲದ ಪಕ್ಷಕ್ಕೆ ಜನರು ಬೆಂಬಲ ನೀಡುವುದಿಲ್ಲ. ಜನರು ನರೇಂದ್ರ ಮೋದಿ ಬೆಂಬಲಿಸಲಿದ್ದಾರೆ ಎಂದರು.











Click it and Unblock the Notifications