Bangalore-Chennai Expressway: ಎಕ್ಸ್‌ಪ್ರೆಸ್ ವೇ ಸೇರಲು 21 ಕಿ. ಮೀ. ಲಿಂಕ್ ರಸ್ತೆ
ಬೆಂಗಳೂರು, ಮಾರ್ಚ್ 06: ಬೆಂಗಳೂರು ನಗರದ ಹೊರ ವಲಯದಲ್ಲಿ ನಿರ್ಮಾಣವಾಗುತ್ತಿರುವ ಸ್ಯಾಟಲೈಟ್ ಟೌನ್ ರಿಂಗ್ ರಸ್ತೆಯ (ಎಸ್‌ಟಿಟಿಆರ್) 21 ಕಿ. ಮೀ. ಮಾರ್ಗ ಮಾರ್ಚ್ ಅಂತ್ಯಕ್ಕೆ ವಾಹನ ಸಂಚಾರಕ್ಕೆ ಮುಕ್ತವಾಗುವ ನಿರೀಕ್ಷೆ ಇದೆ. ಈ ರಸ್ತೆ ವಾಹನ ಸವಾರರು ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್ ವೇ ಸೇರಲು ಸಹಕಾರಿಯಾಗಿದ್ದು, ಬೇಗ ಕಾಮಗಾರಿ ಪೂರ್ಣಗೊಳ್ಳಲಿ ಎಂದು ವಾಹನ ಸವಾರರು ಒತ್ತಾಯಿಸುತ್ತಿದ್ದಾರೆ.
ಎಸ್‌ಟಿಟಿಆರ್ ದಾಬಸ್‌ಪೇಟೆಯಿಂದ ಹೊಸಕೋಟೆ ಮಾರ್ಗವಾಗಿ ನಿರ್ಮಾಣವಾಗುತ್ತಿದೆ. ಈ ಎಸ್‌ಟಿಟಿಆರ್ ರಸ್ತೆ ಹೊಸಕೋಟೆ ಮೂಲಕ ತಮಿಳುನಾಡು ರಾಜ್ಯದ ಗಡಿ ಭಾಗಕ್ಕೆ ತೆರಳುವ ವಾಹನ ಸವಾರರಿಗೆ ಅನುಕೂಲ ಮಾಡಿಕೊಟ್ಟಿದೆ. ಈ ರಸ್ತೆಯನ್ನು ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್ ವೇ ಲಿಂಕ್ ರಸ್ತೆಯಾಗಿಯೂ ಅಭಿವೃದ್ಧಿಗೊಳಿಸಲಾಗಿದೆ.

288 ಕಿ. ಮೀ. ಉದ್ದದ ಎಸ್‌ಟಿಟಿಆರ್ ಯೋಜನೆಯನ್ನು 2027ರಲ್ಲಿ ಪೂರ್ಣಗೊಳಿಸುವ ಗುರಿಯನ್ನು ಹಾಕಿಕೊಳ್ಳಲಾಗಿದೆ. ಈ ಯೋಜನೆಯಲ್ಲಿ 21 ಕಿ. ಮೀ. ರಸ್ತೆ ಈಗಾಗಲೇ ವಾಹನ ಸಂಚಾರಕ್ಕೆ ಮುಕ್ತವಾಗಿರುವ ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇ ಸಂಪರ್ಕಿಸುತ್ತದೆ. ಈ ಲಿಂಕ್ ರಸ್ತೆಯ ಕಾಮಗಾರಿ ಬಹುತೇಕ ಅಂತಿಮ ಹಂತದಲ್ಲಿದೆ.
ನಗರ ಸಂಚಾರ ದಟ್ಟಣೆ ಕಡಿಮೆ: ಬೆಂಗಳೂರು ನಗರಕ್ಕೆ ಆಗಮಿಸುವ ವಾಣಿಜ್ಯ ವಾಹನಗಳ ದಟ್ಟಣೆಯನ್ನು ಈ ರಸ್ತೆ ಕಡಿಮೆ ಮಾಡಲಿದೆ ಎಂದು ಅಂದಾಜಿಸಲಾಗಿದೆ. ಈ ರಸ್ತೆ ಬೈಪಾಸ್ ಮಾದರಿಯಲ್ಲಿ ಕಾರ್ಯ ನಿರ್ವಹಣೆ ಮಾಡಲಿದ್ದು, ತುಮಕೂರು ಮೂಲಕ ಬರುವ ವಾಣಿಜ್ಯ ವಾಹನಗಳು ನಗರಕ್ಕೆ ಪ್ರವೇಶ ಮಾಡದೇ ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್ ವೇ ಸೇರಲು 21 ಕಿ. ಮೀ. ರಸ್ತೆ ಅನುಕೂಲ ಮಾಡಿಕೊಡಲಿದೆ.
ಎಸ್‌ಟಿಟಿಆರ್ ರಸ್ತೆ ಬನ್ನೇರುಘಟ್ಟ ಜೈವಿಕ ಉದ್ಯಾನದ ಮೂಲಕ ಹಾದು ಹೋಗಲಿದ್ದು, 11 ಅಂಡರ್‌ಪಾಸ್, 6 ಪಥದ ರಸ್ತೆ, ನೈಸ್ ರೋಡ್ ಲಿಂಕ್ ಮಾಡುವಲ್ಲಿ ವಿಶಾಲವಾದ ಜಾಗ ಸೇರಿದಂತೆ ಹಲವಾರು ವೈಶಿಷ್ಟ್ಯಗಳನ್ನು ಈ ರಸ್ತೆ ಒಳಗೊಂಡಿದೆ.
ಸುಮಾರು 4,479 ಕೋಟಿ ರೂ.ಗಳ ವೆಚ್ಚದ ಯೋಜನೆಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಒಟ್ಟು 5 ವಿಭಾಗವಾಗಿ ಮಾಡಿಕೊಂಡು ಜಾರಿಗೊಳಿಸುತ್ತಿದೆ. ಇನ್ನೂ ನಾಲ್ಕು ಹಂತದ 144.25 ಕಿ. ಮೀ. ರಸ್ತೆ ಕಾಮಗಾರಿ ಬಾಕಿ ಇದ್ದು, ಇದಕ್ಕಾಗಿ ಎನ್‌ಹೆಚ್‌ಎಐ ಟೆಂಡರ್ ಕರೆಯಲು ಸಿದ್ಧತೆ ನಡೆಸಿದೆ.
ಸಂಪೂರ್ಣ ಎಸ್‌ಟಿಟಿಆರ್ ಯೋಜನೆ ಪೂರ್ಣಗೊಂಡರೆ ಬೆಂಗಳೂರು ನಗರದ ದಟ್ಟಣೆ ಬಹಳಷ್ಟು ಕಡಿಮೆಯಾಗಲಿದೆ ಎಂದು ಅಂದಾಜಿಸಲಾಗಿದೆ. ಅಲ್ಲದೇ ಚೆನ್ನೈ, ಮಂಗಳೂರು ಹೀಗೆ ವಿವಿಧ ನಗರದ ಸಂಚಾರದ ಅವಧಿಯೂ ಕಡಿಮೆಯಾಗಲಿದೆ. ವಾಣಿಜ್ಯ ವಾಹನಗಳಿಗೆ ಈ ರಸ್ತೆ ಬಹಳಷ್ಟು ಸಹಕಾರಿಯಾಗಿದೆ.
ವರದಿಗಳ ಪ್ರಕಾರ ಹೊಸಕೋಟೆಯಿಂದ ಕೆಲವು ಕಿ. ಮೀ. ತನಕ ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್ ವೇ ಮತ್ತು ಎಸ್‌ಟಿಟಿಆರ್ ಒಟ್ಟಿಗೆ ಸಾಗಲಿವೆ. ಬಳಿಕ ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್ ವೇ ಹೊಸೂರು ಕಡೆಗೆ ಸಾಗಲಿದೆ. ಈ ರಸ್ತೆಯನ್ನು ಗಂಟೆಗೆ 120 ಕಿ. ಮೀ. ವೇಗದಲ್ಲಿ ಸಾಗುವಂತೆ ಅಭಿವೃದ್ಧಿಗೊಳಿಸಲಾಗಿದ್ದು, ಬಸ್‌ಗಳಿಗೆ ಸಹ 100 ಕಿ. ಮೀ. ವೇಗವನ್ನು ನಿಗದಿ ಮಾಡಲಾಗಿದೆ.
ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್ ವೇ ಕರ್ನಾಟಕ, ತಮಿಳುನಾಡು ಮತ್ತು ಆಂಧ್ರ ಪ್ರದೇಶ ಮೂಲಕ ಹಾದು ಹೋಗುತ್ತದೆ. ಕರ್ನಾಟಕದ ಭಾಗದ ಕಾಮಗಾರಿ ಸಂಪೂರ್ಣವಾಗಿ ಪೂರ್ಣಗೊಂಡಿದ್ದು, ವಾಹನಗಳ ಸಂಚಾರಕ್ಕೆ ಮುಕ್ತವಾಗಿದೆ. ಈ ಯೋಜನೆ ಸಂಪೂರ್ಣವಾಗಿ ಮುಗಿದರೆ ಬೆಂಗಳೂರು-ಚೆನ್ನೈ ನಡುವಿನ ಸಂಚಾರದ ಅವಧಿ ಸಹ ಕಡಿಮೆಯಾಗಲಿದೆ.












Click it and Unblock the Notifications