ಬೆಳಗಾವಿ ಜಿಲ್ಲೆಯ ಈ ಗ್ರಾಮದ ಪ್ರತಿ ಮನೆಯಲ್ಲೂ ಶಿಕ್ಷಕರು, ಯೋಧರು: ಇಂತಹ ಕ್ರಾಂತಿ ಆಗಿದ್ದೇಗೆ?, ಇಲ್ಲಿದೆ ವಿವರ
ಬೆಳಗಾವಿ, ಸೆಪ್ಟೆಂಬರ್ 07: ಪ್ರತಿಯೊಬ್ಬರ ಜೀವನದಲ್ಲಿ ಶಿಕ್ಷಣ ಮಹತ್ವದ ಪಾತ್ರವಹಿಸುತ್ತದೆ. ಶೈಕ್ಷಣಿಕವಾಗಿ ದೇಶ ಅದೆಷ್ಟೇ ಮುಂದುವರಿದರೂ ಕೂಡ ಇನ್ನೂ ಕೆಲವು ಗ್ರಾಮಗಳು ಸಾಕ್ಷರತೆ ಕಂಡಿಲ್ಲ. ಆದರೆ ಕರ್ನಾಟಕ ರಾಜ್ಯದ ಬೆಳಗಾವಿ ಜಿಲ್ಲೆಯ ಇಂಚಲ ಗ್ರಾಮ ಇಡೀ ಶೈಕ್ಷಣಿಕ ಕ್ಷೇತ್ರಕ್ಕೆ ಮಾದರಿ ಗ್ರಾಮವಾಗಿದೆ.
ಶಿಕ್ಷಣ ಹಾಗೂ ಆಧ್ಯಾತ್ಮ ಕ್ಷೇತ್ರದಲ್ಲಿ ಈ ಗ್ರಾಮ ದೊಡ್ಡ ಕ್ರಾಂತಿ ಮಾಡಿದೆ. ಶಿಕ್ಷಣದ ಬಗ್ಗೆ ಮಾತನಾಡುವ ಸಂದರ್ಭದಲ್ಲಿ ತಟ್ಟನೆ ನೆನಪಿಗೆ ಬರುವುದು ಇಂಚಲ ಗ್ರಾಮ. ಈ ಪ್ರದೇಶಕ್ಕೆ ಹಿಂದಿನ ಇತಿಹಾಸವೇನೂ ಇಲ್ಲ. 12 ವರ್ಷ ಹಿಂದಷ್ಟೆ ಇದು ಅತ್ಯಂತ ಕುಗ್ರಾಮವಾಗಿತ್ತು. ಶಿಕ್ಷಣ ಕ್ಷೇತ್ರದಲ್ಲಂತೂ ಈ ಗ್ರಾಮ ಸಾಕಷ್ಟು ಹಿಂದೆ ಬಿದ್ದಿತ್ತು. ಇದೀಗ ಈ ಒಂದೇ ಒಂದು ಗ್ರಾಮದಲ್ಲಿ ಸುಮಾರು ಐನೂರಕ್ಕೂ ಹೆಚ್ಚು ಶಿಕ್ಷಕರಿದ್ದಾರೆ ಎನ್ನುವುದು ವಿಶೇಷ.

ಈ ಗ್ರಾಮದಲ್ಲಿ ಸರ್ಕಾರಿ, ಖಾಸಗಿ, ಅನುದಾನಿತ ಶಾಲೆ ಶಿಕ್ಷಕರಿದ್ದಾರೆ. ಸದ್ಯ ಅವರೆಲ್ಲ ಪ್ರಾಥಮಿಕ, ಪ್ರೌಢ, ಹಾಗೂ ಕಾಲೇಜುಗಳಿಗೆ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದು, ಮಕ್ಕಳ ಜೀವನ ರೂಪಿಸುತ್ತಿದ್ದಾರೆ. ಐದು ಸಾವಿರ ಜನಸಂಖ್ಯೆ ಇರುವ ಈ ಗ್ರಾಮದಲ್ಲಿ ಐನೂರಕ್ಕೂ ಅಧಿಕ ಮನೆಗಳಿವೆ.
ಇನ್ನು ಶಿಕ್ಷಣದಿಂದ ವಂಚಿತವಾಗಿದ್ದ ಈ ಗ್ರಾಮದ ಸ್ಥಿತಿ ಕಂಡು ಇಂಚಲ ಮಠದ ಶಿವಾನಂದ ಭಾರತಿ ಸ್ವಾಮೀಜಿಯವರು 1986ರಲ್ಲಿ ಶಿವಾನಂದ ಭಾರತಿ ಶಿಕ್ಷಣ ಸಂಸ್ಥೆಯಿಂದ ಡಿಇಎಡ್ ಶಿಕ್ಷಣವನ್ನು ಪ್ರಾರಂಭ ಮಾಡಿದರು. ಹೀಗೆ ಇಂಚಲ ಗ್ರಾಮ 1997ರಲ್ಲಿ ಇದೊಂದೇ ಊರಿನಲ್ಲಿ 50 ಜನ ಶಿಕ್ಷಕರಾಗಿ ಸೆಲೆಕ್ಟ್ ಆದರೆ, ಊರಿನ ಕರಿಗಾರ ಎಂಬ ಮನೆತನದ ಏಳು ಜನ ಶಿಕ್ಷಕರಾಗಿ ಆಯ್ಕೆಯಾಗಿದ್ದು ದಾಖಲೆಯಾಗಿದೆ. ಅಂದಿನಿಂದ ಈ ಗ್ರಾಮದಲ್ಲಿ ಶಿಕ್ಷಣ ಕ್ರಾಂತಿಯಾಗಿ ಇದೀಗ ಅತೀ ಹೆಚ್ಚು ಶಿಕ್ಷಕರಿರುವ ಗ್ರಾಮವಾಗಿ ಮಾರ್ಪಟ್ಟಿದೆ.
ಇದು ಯೋಧರ ಗ್ರಾಮ ಕೂಡ ಹೌದು
ಇನ್ನು ಈ ಗ್ರಾಮದಲ್ಲಿ ಬರೀ ಶಿಕ್ಷಕರು ಅಷ್ಟೇ ಅಲ್ಲ. ಜೊತೆಗೆ ದೇಶದ ಗಡಿ ಕಾಯುವ ಹೆಮ್ಮೆಯ ಯೋಧರು ಅತೀ ಹೆಚ್ಚಿದ್ದಾರೆ. ಇಲ್ಲಿಯವರೆಗೂ ಸುಮಾರು 381ಕ್ಕೂ ಅಧಿಕ ಯೋಧರು ದೇಶ ಸೇವೆ ಮಾಡಿಕೊಂಡು ಬರುತ್ತಿದ್ದಾರೆ. ಶಿಕ್ಷಣದಲ್ಲಿ ಕ್ರಾಂತಿ ಆಗುವುದರ ಜೊತೆಗೆ ದೇಶಾಭಿಮಾನದ ಬೀಜ ಕೂಡ ಇಲ್ಲಿ ಬಿತ್ತಿ ಬೆಳೆಸಿದ್ದು ಸ್ವಾಮೀಜಿಯವರು.
1969ರಲ್ಲಿ ಇಂಚಲ ಶ್ರೀಗಳಾದ ಶಿವಾನಂದ ಭಾರತಿಯವರು ಇಂಚಲ ಮಠಕ್ಕೆ ಪೀಠಾಧಿಪತಿಗಳಾದರು. ಪಟ್ಟಕ್ಕೇರಿದ ಮಾರನೇ ವರ್ಷದಿಂದಲೇ ಗ್ರಾಮದಲ್ಲಿ ಶ್ರೀಗಳು ವೇದಾಂತ ಪರಿಷತ್ ಆರಂಭಿಸಿದರು. ಊರಿಗೆ ಶಿಕ್ಷಕರ ಸಂಖ್ಯೆ ಕಡಿಮೆ ಇರುವುದನ್ನು ಗಮನಿಸಿ ಪ್ರೌಢಶಾಲೆ ಪ್ರಾರಂಭಿಸಿದರು.
ಪ್ರೌಢಶಾಲೆ ಪ್ರಗತಿ ಹೊಂದುತ್ತಾ ಬಂದಂತೆ ಪಿಯುಸಿ ಕಾಲೇಜು ಪ್ರಾರಂಭ ಮಾಡಿದರು. ಶಿಕ್ಷಣ ಶಾಸ್ತ್ರದಲ್ಲಿ ಮಕ್ಕಳಿಗೆ ಅಧ್ಯಯನ ಮಾಡುವಂತೆ ವಿದ್ಯಾರ್ಥಿಗಳಿಗೆ ಶ್ರೀಗಳು ಪ್ರೇರಣೆ ಮಾಡಿದರು. ಪಿಯುಸಿ ನಂತರ ವಿದ್ಯಾರ್ಥಿಗಳಿಗೆ ಶಿಕ್ಷಣ ಶಾಸ್ತ್ರದಲ್ಲಿ ಅಧ್ಯಯನ ಮಾಡುವಂತೆ ಪ್ರೇರೆಪಿಸಿ ಹೆಚ್ಚಿನ ವಿದ್ಯಾರ್ಥಿಗಳು ಶಿಕ್ಷಕರಾಗುವಂತೆ ಶ್ರೀಗಳು ಮಾಡಿದ್ದಾರೆ.
ಡಿಎಲ್ಇಡಿ ಪ್ರತಿ ವರ್ಷ 80 ವಿದ್ಯಾರ್ಥಿಗಳು ಪ್ರವೇಶಾತಿ ಪಡೆದು ಪ್ರತಿ ವರ್ಷ ಅಷ್ಟು ಜನ ಶಿಕ್ಷಕರು ಪಾಸಾಗುತ್ತಿದ್ದಾರೆ. ಪ್ರಾರಂಭದಲ್ಲಿ ಟಿಸಿಹೆಚ್ ಕಲಿಯುವ ವಿದ್ಯಾರ್ಥಿಗಳಿಗೆ ಯಾವುದೇ ಶುಲ್ಕ ಇಲ್ಲದೆ ಪ್ರವೇಶಾತಿ ಮಾಡಿಸುವಲ್ಲಿ ಶ್ರೀಶಿವಾನಂದ ಭಾರತಿ ಸ್ವಾಮೀಜಿಗಳು ಶ್ರಮಿಸಿದ್ದಾರೆ. ಹೀಗಾಗಿ ಈ ಗ್ರಾಮ ಇಂದು ಶಿಕ್ಷಕರ ತವರಾಗಿದೆ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ.
ಒಟ್ಟಿನಲ್ಲಿ ಕುಗ್ರಾಮವಾಗಿದ್ದ ಇಂಚಲ ಗ್ರಾಮ ಇಂದು ಸುಶಿಕ್ಷಿತರ ಬೀಡಾಗಿದೆ. ಒಂದು ಮಠ ಗ್ರಾಮದಲ್ಲಿ ಸಾಕಷ್ಟು ಬದಲಾವಣೆಗೆ ಮುನ್ನುಡಿ ಬರೆದಿದೆ. ಮಠಾಧೀಶರರ ಧಾರ್ಮಿಕ ಕ್ರಾಂತಿ ಜೊತೆಗೆ ಅಕ್ಷರ ಕ್ರಾಂತಿ ಸಹ ಮಾಡುತ್ತಿದ್ದಾರೆ.












Click it and Unblock the Notifications