ಬೆಳಗಾವಿ; ನವೆಂಬರ್ 1ರಂದು ಕರಾಳ ದಿನಾಚರಣೆಗೆ ಅನುಮತಿ ಇಲ್ಲ
ಬೆಳಗಾವಿ, ಅಕ್ಟೋಬರ್ 13; ನವೆಂಬರ್ 1ರಂದು ಬೆಳಗಾವಿಯಲ್ಲಿ ಕರಾಳ ದಿನಾಚರಣೆ ನಡೆಸಲು ಅನುಮತಿ ನೀಡುವುದಿಲ್ಲ. ದಸರಾ ಉತ್ಸವ ಮಾದರಿಯಲ್ಲಿ ಅತೀ ವಿಜೃಂಭಣೆಯಿಂದ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಗುವುದು ಎಂದು ಬೆಳಗಾವಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಹೇಳಿದರು.
ಕನ್ನಡ ರಾಜ್ಯೋತ್ಸವ ಆಚರಿಸುವ ಕುರಿತು ಬೆಳಗಾವಿ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿನಡೆದ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಜಿಲ್ಲಾಧಿಕಾರಿಗಳು ಮಾತನಾಡಿದರು. ಸಭೆಗೂ ಮೊದಲು ಕರವೇ ಕನ್ನಡಪರ ಹೋರಾಟಗಾರ ಮಹಾದೇವ ತಳವಾರ ಹಾಗೂ ಅಶೋಕ ಚಂದರಗಿ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು.

ಮನವಿಯಲ್ಲಿ ಕರ್ನಾಟಕದ ಗಡಿ ವಿವಾದ ಪದೇ ಪದೇ ಕೇಳಿ ಬರುತ್ತಿದ್ದು, ಬೆಳಗಾವಿಯಲ್ಲಿ ಯಾವುದೇ ಸ್ಥಳಗಳಲ್ಲಿ ಕರಾಳ ದಿನಾಚರಣೆ ನಡೆಸಲು ಜಿಲ್ಲಾಡಳಿತ ಅನುಮತಿ ಕೊಡಬಾರದು. ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ವಿವಾದದ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಸರ್ಕಾರ ಕಳೆದ 1 ವರ್ಷದಲ್ಲಿ ಕೈಕೊಳ್ಳುತ್ತಿರುವ ಆಕ್ರಮಣಕಾರಿ ಮತ್ತು ಕರ್ನಾಟಕ ವಿರೋಧಿ ನಿಲವುಗಳ ಬಗ್ಗೆ ಕನ್ನಡ ಸಂಘಟನೆಗಳು ಕರ್ನಾಟಕ ಸರಕಾರಕ್ಕೆ ನಿರಂತರ ವರದಿ ಸಲ್ಲಿಸುತ್ತಿವೆ. ಆದರೆ ಸರ್ಕಾರದ ಈ ಸಂಬಂಧ ಯಾವುದೇ ದೃಢ ನಿರ್ಧಾರ ಕೈಗೊಂಡಿಲ್ಲ ಎಂದು ವಿವರಿಸಲಾಗಿದೆ.
ಕರ್ನಾಟಕದ 5 ಜಿಲ್ಲೆಗಳ 855 ಹಳ್ಳಿ ಪಟ್ಟಣಗಳಲ್ಲಿ ವಾಸಿಸುವ ಮರಾಠಿ ಭಾಷಿಕರಿಗೆ ಅನ್ವಯವಾಗುವಂತೆ ಮಹಾತ್ಮ ಫುಲೇ ಜನಾರೋಗ್ಯ ಯೋಜನೆಯನ್ನು ಜಾರಿಗೊಳಸಲು ಇದೇ ವರ್ಷದ ಮಾರ್ಚ್ ತಿಂಗಳಲ್ಲಿ ಮಹಾರಾಷ್ಟ್ರ ಸರ್ಕಾರ ನಿರ್ಧಾರ ಕೈಕೊಂಡಿದೆ. ಈ ನಿರ್ಧಾರದಿಂದ ಮಹಾರಾಷ್ಟ್ರವು ಕರ್ನಾಟಕದ ಆಡಳಿತದಲ್ಲಿ ನೇರವಾಗಿ, ಹಸ್ತಕ್ಷೇಪ ಮಾಡಿದೆ ಇದನ್ನು ತಡೆಯಲು ಜಿಲ್ಲಾಡಳಿತದಿಂದ ಸರ್ಕಾರಕ್ಕೆ ವರದಿ ಸಲ್ಲಿಸಬೇಕು ಎಂದು ಮನವಿ ಪತ್ರದಲ್ಲಿ ಒತ್ತಾಯಿಸಲಾಗಿದೆ.
ಕನ್ನಡ ರಾಜ್ಯೋತ್ಸವ ಆಚರಣೆ; ಜಿಲ್ಲಾಧಿಕಾರಿಗಳು ಕನ್ನಡ ರಾಜ್ಯೋತ್ಸವ ಆಚರಣೆ ಕುರಿತು ಮಾತನಾಡಿ, "ಕಳೆದ ವರ್ಷ ಸುಮಾರು 5 ಲಕ್ಷ ಜನರು ರಾಜ್ಯೋತ್ಸವದಲ್ಲಿ ಪಾಲ್ಗೊಂಡಿದ್ದರು. ಈ ಬಾರಿ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಲಿದ್ದಾರೆ. ದಸರಾ ಉತ್ಸವ ಮಾದರಿಯಲ್ಲಿ ಅತೀ ವಿಜೃಂಭಣೆಯಿಂದ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಗುವುದು" ಎಂದರು.
ಜಿಲ್ಲಾ ಕ್ರೀಡಾಂಗಣದಲ್ಲಿ ಭುವನೇಶ್ವರಿ ದೇವಿಗೆ ಪೂಜೆ ಸಲ್ಲಿಸಿ ಧ್ವಜಾರೋಹಣ ನೆರವೇರಿಸಲಾಗುವುದು. ಪೊಲೀಸ್ ಇಲಾಖೆ, ಎನ್‌ಸಿಸಿ, ಸ್ಕೌಟ್ಸ್ ಮತ್ತು ಗೈಡ್ಸ್, ಶಾಲಾ ಕಾಲೇಜು ವಿದ್ಯಾರ್ಥಿಗಳು, ಗೃಹರಕ್ಷಕ ದಳದ ಸಿಬ್ಬಂದಿ, ಭಾರತ ಸೇವಾ ದಳ ಪರೇಡ್ ನಡೆಸಲು ಸಿದ್ಧತೆ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿದರು.
ರಾಜ್ಯೋತ್ಸವ ಆಚರಣೆಗೆ ವೇದಿಕೆ, ಆಸನ ವ್ಯವಸ್ಥೆ, ದೀಪಾಲಂಕಾರ, ಮೈಕ್, ಸೂಕ್ತ ಪೊಲೀಸ್ ಬಂದೋಬಸ್ತ್, ಕವಾಯತು ಸೇರಿದಂತೆ ಅಗತ್ಯ ವ್ಯವಸ್ಥೆ ಕಲ್ಪಿಸಬೇಕು. ಮೆರವಣಿಗೆಯ ರೂಪಕ ವಾಹನಗಳು, ಕೋಲಾಟ, ಡೊಳ್ಳಿನ ಮೇಳ ಸೇರಿದಂತೆ ಇತರೆ ಕಾರ್ಯಕ್ರಮ ಪಟ್ಟಿಯನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಸೂಚಿಸಿದರು.
ಎಲ್ಲಾ ಕನ್ನಡಪರ ಸಂಘಟನೆಗಳ ಒಕ್ಕೊರಲಿನ ಒತ್ತಾಯದಂತೆ ಈ ಬಾರಿ ಕೂಡ ಕನ್ನಡ ರಾಜ್ಯೋತ್ಸವವನ್ನು ಅತ್ಯಂತ ಅದ್ಧೂರಿಯಾಗಿ ಆಚರಿಸಲಾಗುವುದು. ಇದಕ್ಕಾಗಿ 1 ಕೋಟಿ ರೂಪಾಯಿ ಅನುದಾನ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಕಳಿಸಲಾಗುವುದು ಎಂದರು.
ಕನ್ನಡ ಫಲಕಗಳು ಕಡ್ಡಾಯ: ಸಭೆಯಲ್ಲಿ ರಾಜ್ಯೋತ್ಸವ ಆಚರಣೆ ಹೆಚ್ಚಿನ ಅನುದಾನ ನೀಡಲು ಸರ್ಕಾರಕ್ಕೆ ನಿರಂತರ ಮನವಿಗಳನ್ನು ಸಲ್ಲಿಸಲಾಗುತ್ತಿದೆ. ಅದಕ್ಕೆ ಈವರೆಗೆ ಸ್ಪಂದನೆ ಸಿಗುತ್ತಿಲ್ಲ. ನಗರದ ಚನ್ನಮ್ಮ ಸರ್ಕಲ್, ಕನ್ನಡ ಸಾಹಿತ್ಯ ಭವನ ಹತ್ತಿರದಲ್ಲಿ ಹಾಗೂ ನಗರದ ಪ್ರಮುಖ ವೃತ್ತಗಳಲ್ಲಿ ಇಂಗ್ಲಿಷ್ ಫಲಕಗಳಿವೆ. ನಗರದ ಯಾವುದೇ ಒಂದು ಸ್ಥಳದಲ್ಲಿಯೂ ಕನ್ನಡ ಫಲಕಗಳಿಲ್ಲ. ಇಂತಹ ಜಾಹೀರಾತು ಫಲಕಗಳನ್ನು ಅಳವಡಿಸಲು ಅನುಮತಿ ನೀಡಬಾರದು ಎಂದು ಕರವೇ ರಾಜ್ಯ ಸಂಚಾಲಕ ಮಹಾದೇವ ತಳವಾರ ಸಭೆಯಲ್ಲಿ ಒತ್ತಾಯಿಸಿದರು.
ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣಗೊಂಡ 50 ವರ್ಷಗಳು ಪೂರೈಸಿವೆ. ಆದಕಾರಣ 50 ವರ್ಷಗಳ ಸಂಭ್ರಮಾಚರಣೆ ಅದ್ದೂರಿಯಾಗಿರಬೇಕು. ಪೌರ ಕಾರ್ಮಿಕರು, ಪೊಲೀಸ್ ಇಲಾಖೆ ಸಿಬ್ಬಂದಿಗಳ ಸೇವೆ ಶ್ಲಾಘನೀಯ ರಾಜ್ಯೋತ್ಸವ ದಿನ ಅವರನ್ನೂ ಸನ್ಮಾನಿಸಬೇಕು ಹಾಗೂ ಎಲ್ಲಾ ಸರ್ಕಾರಿ ಕಚೇರಿಗಳನ್ನು ಹಳದಿ ಕೆಂಪು ಬಣ್ಣದ ದೀಪಾಲಂಕಾರ ಮಾಡಬೇಕು ಎಂದು ಕನ್ನಡಪರ ಹೋರಾಟಗಾರ ಶ್ರೀನಿವಾಸ ತಾಳೂರಕರ ಮನವಿ ಮಾಡಿದರು.
ನಗರದ ಚನ್ನಮ್ಮ ವೃತ್ತದ ಸುತ್ತಮುತ್ತ ಕಿರು ಕೋಟೆ ನಿರ್ಮಾಣ ಮಾಡಬೇಕು ಎಂದು ಕನ್ನಡಪರ ಹೋರಾಟಗಾರ್ತಿ ಕಸ್ತೂರಿ ಬಾಯಿ ಮನವಿ ಮಾಡಿದರು. ಇದೇ ವೇಳೆ ನಗರದ ಚನ್ನಮ್ಮ ವೃತ್ತದ ಅಗಲೀಕರಣ, ಮೂರ್ತಿ ಎತ್ತರ ಹಾಗೂ ಮೂರ್ತಿಯ ಸುತ್ತ ಮುತ್ತ ಕಬ್ಬಿಣ ಸರಪಳಿ ವ್ಯವಸ್ಥೆ ಮಾಡಬೇಕು ಎಂದು ಕನ್ನಡ ಪರ ಹೋರಾಟಗಾರ ಭಾವಕಣ್ಣಾ ಬಂಕ್ಯಾಗೋಳ ಸಭೆಯ ಗಮನ ಸೆಳೆದರು.
ಕನ್ನಡಪರ ಹೋರಾಟಗಳಲ್ಲಿ ತೊಡಗಿರುವವರ ವಿರುದ್ಧ ಈಗಾಗಲೇ ಎಫ್ಐಆರ್ ದಾಖಲಾಗಿರುವ ಪ್ರಕರಣಗಳನ್ನು ಹಿಂತೆಗೆದುಕೊಳ್ಳಲು ಜಿಲ್ಲಾಧಿಕಾರಿಗಳಿಗೆ ಕರ್ನಾಟಕ ವಾಲ್ಮೀಕಿ ಯುವ ಘಟಕದ ರಾಜ್ಯಾಧ್ಯಕ್ಷ ಮಹೇಶ ಶಿಗಿಹಳ್ಳಿ ಮನವಿ ಮಾಡಿಕೊಂಡರು.












Click it and Unblock the Notifications