ವಿಧಾನಪರಿಷತ್ ಉಪಸಭಾಪತಿಯಾಗಿ ಜೆಡಿಎಸ್‌ನ ಧರ್ಮೇಗೌಡ ಆಯ್ಕೆ ಖಚಿತ
ಬೆಳಗಾವಿ, ಡಿಸೆಂಬರ್ 18: ವಿಧಾನಪರಿಷತ್‌ನ ಉಪಸಭಾಪತಿ ಆಗಿ ಜೆಡಿಎಸ್‌ನ ಧರ್ಮೇಗೌಡ ಅವರು ಆಯ್ಕೆ ಆಗುವುದು ಬಹುತೇಕ ಖಚಿತವಾಗಿದೆ.
ಜೆಡಿಎಸ್‌ನ ಧರ್ಮೇಗೌಡ ಅವರು ವಿಧಾನಪರಿಷತ್ ಉಪಸಭಾಪತಿ ಸ್ಥಾನಕ್ಕೆ ಇಂದು ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಸಲು ಇಂದೇ ಕೊನೆ ದಿನವಾಗಿತ್ತು. ಧರ್ಮೇಗೌಡ ಹೊರತು ಪಡಿಸಿ ಇನ್ಯಾರು ನಾಮಪತ್ರ ಸಲ್ಲಿಸಿಲ್ಲ.
ಧರ್ಮೇಗೌಡ ಅವರಿಗೆ ಜೆಡಿಎಸ್‌ನ ಭೋಜೇಗೌಡ, ಶ್ರೀಕಂಠೇಗೌಡ, ಅಪ್ಪಾಜಿಗೌಡ, ಬಸವರಾಜ್ ಹೊರಟ್ಟಿ ಅವರು ಸೂಚಕರಾಗಿದ್ದರು. ಧರ್ಮೇಗೌಡ ಹೊರತು ಪಡಿಸಿ ಇನ್ಯಾರು ನಾಮಪತ್ರ ಹಾಕಿಲ್ಲವಾದ್ದರಿಂದ ಅವರು ಅವಿರೋಧವಾಗಿ ಉಪಸಭಾಪತಿಯಾಗಿ ಆಯ್ಕೆ ಆಗಲಿದ್ದಾರೆ.

ಈ ಹಿಂದೆ ಉಪಸಭಾಪತಿ ಸ್ಥಾನಕ್ಕೆ ಶ್ರೀಕಂಠೇಗೌಡ, ಅಪ್ಪಾಜಿಗೌಡ ಹಾಗೂ ಮರಿತಿಬ್ಬೇಗೌಡ ಅವರ ಹೆಸರುಗಳು ಕೇಳಿಬಂದಿದ್ದವು. ಈ ಮೂವರಲ್ಲಿ ಯಾರನ್ನೇ ಉಪಸಭಾಪತಿ ಮಾಡಿದರೆ ಅಸಮಾಧಾನ ಉಂಟಾಗಬಹುದು ಎಂಬ ಹಿನ್ನೆಲೆಯಲ್ಲಿ ಧರ್ಮೇಗೌಡರನ್ನು ಕಣಕ್ಕಿಳಿಸಲು ಜೆಡಿಎಸ್ ತೀರ್ಮಾನಿಸಿದೆ.
ಧರ್ಮೇಗೌಡ ಅವರು ನಾಮಪತ್ರ ಸಲ್ಲಿಸಿದ ಬಳಿಕ ಬಸವರಾಜ ಹೊರಟ್ಟಿ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ರಾಜಕಾರಣದಲ್ಲಿ ಹೀಗೆ ಕೊನೆ ಕ್ಷಣದ ಬದಲಾವಣೆ ಆಗುತ್ತಲೇ ಇರುತ್ತವೆ. ಸಭಾಪತಿ ಸ್ಥಾನಕ್ಕೆ ನನ್ನ ಹೆಸರು ಇತ್ತು ಆದರೆ ಪ್ರತಾಪ್ ಚಂದ್ರ ಶೆಟ್ಟಿ ಅವರಿಗೆ ಸ್ಥಾನ ಒಲಿಯಿತು. ಈಗ ಅಪ್ಪಾಜಿಗೌಡ ಹಾಗೂ ಮರಿತಿಬ್ಬೇಗೌಡ ಅವರ ಹೆಸರುಗಳು ಕೇಳಿಬಂದಿತ್ತು ಆದರೆ ಧರ್ಮೇಗೌಡ ಅವರಿಗೆ ಸ್ಥಾನ ಒಲಿದಿದೆ ಎಂದರು.












Click it and Unblock the Notifications