ಬೆಳಗಾವಿ-ಧಾರವಾಡ; ನೇರ ರೈಲು ಮಾರ್ಗದ ಅಪ್‌ಡೇಟ್

ಬೆಳಗಾವಿ, ಮಾರ್ಚ್ 03: ಬೆಳಗಾವಿ-ಕಿತ್ತೂರು-ಧಾರವಾಡ ನಡುವಿನ ನೇರ ರೈಲು ಮಾರ್ಗ ರಾಜ್ಯದ ಮಹತ್ವದ ರೈಲು ಯೋಜನೆಗಳಲ್ಲಿ ಒಂದು. ಈ ಮಾರ್ಗ ನಿರ್ಮಾಣಗೊಂಡರೆ ಧಾರವಾಡ-ಬೆಳಗಾವಿ ನಡುವಿನ ರೈಲು ಸಂಚಾರದ ಅವಧಿ ಕಡಿಮೆಯಾಗಲಿದೆ.

ಬೆಳಗಾವಿ ಜಿಲ್ಲಾ ಉಸ್ತುವಾರಿ ಹಾಗೂ ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಅಧ್ಯಕ್ಷತೆಯಲ್ಲಿ ಸುವರ್ಣ ವಿಧಾನಸೌಧದಲ್ಲಿ 2023-24 ಸಾಲಿನ ಮೂರನೇ ತ್ರೈಮಾಸಿಕ ಕೆ.ಡಿ.ಪಿ. ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ರೈಲು ಮಾರ್ಗದ ಕುರಿತು ಚರ್ಚೆ ನಡೆಯಿತು.

Belagavi Dharwad Railway Line Land Acquisition Update

ಸಭೆಯಲ್ಲಿ ಬೆಳಗಾವಿ ಸಂಸದೆ ಮಂಗಲ ಅಂಗಡಿ, ರಾಯಬಾಗ ಶಾಸಕರಾದ ದುರ್ಯೋಧನ ಐಹೊಳೆ, ಬೆಳಗಾವಿ (ಉತ್ತರ) ಶಾಸಕ ಆಸಿಫ್ (ರಾಜು) ಸೇಠ್, ಖಾನಾಪುರ ಶಾಸಕ ವಿಠ್ಠಲ ಹಲಗೇಕರ್, ಕಿತ್ತೂರು ಶಾಸಕ ಬಾಬಾಸಾಹೇಬ್ ಪಾಟೀಲ, ಕುಡಚಿ ಶಾಸಕ ಮಹೇಂದ್ರ ತಮ್ಮಣ್ಣವರ ಮುಂತಾದವರು ಉಪಸ್ಥಿತರಿದ್ದರು.

ಸತೀಶ್‌ ಜಾರಕಿಹೊಳಿ ಮಾತು: ಸಭೆಯಲ್ಲಿ ಮಾತನಾಡಿಸ ಸಚಿವ ಸತೀಶ್ ಜಾರಕಿಹೊಳಿ, "ಬೆಳಗಾವಿ-ಧಾರವಾಡ ರೈಲು ಮಾರ್ಗ ಕಾಮಗಾರಿ ಭೂಸ್ವಾಧೀನ ಹಾಗೂ ಹೆಚ್ಚಿನ ಪರಿಹಾರ ನೀಡುವುದಕ್ಕೆ ಸಂಬಂಧಿಸಿದಂತೆ ರೈತರ ಪ್ರತಿಭಟನೆಯಿಂದಾಗಿ ರೈಲುಮಾರ್ಗ, ಎಸ್.ಟಿ.ಪಿ. ಸೇರಿದಂತೆ ಅನೇಕ ಪ್ರಮುಖ ಯೋಜನೆಗಳು ವಿಳಂಬಗೊಳ್ಳುತ್ತಿವೆ" ಎಂದು ಹೇಳಿದರು.

"ಈ ಯೋಜನೆಗಳ ಸಮರ್ಪಕ‌ ಅನುಷ್ಠಾನಕ್ಕಾಗಿ ಸೂಕ್ತ ಪರಿಹಾರ ಕಂಡುಕೊಳ್ಳಬೇಕು. ಈಗಾಗಲೇ ಎಸ್.ಟಿ.ಪಿ. ಕಾಮಗಾರಿಗಳು ಮುಕ್ತಾಯದ ಹಂತದಲ್ಲಿರುವುದರಿಂದ ಯೋಜನೆ ಅನುಷ್ಠಾನಗೊಳಿಸುವುದು ಅನಿವಾರ್ಯ" ಎಂದು ಸಚಿವರು ಅಭಿಪ್ರಾಯಪಟ್ಟರು.

ಬೆಳಗಾವಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಮಾತನಾಡಿ, "ತೇಗೂರದಿಂದ ದೇಸೂರವರೆಗೆ ಮಾರ್ಗ ನಿರ್ಮಾಣವಾಗುತ್ತಿದೆ. ದೇಸೂರ-ಕಣವಿನಕೊಪ್ಪ ನಡುವೆ 150 ಎಕರೆ ನೀರಾವರಿ ಭೂಮಿ ಇರುವುದರಿಂದ ಮಾರ್ಗ ಬದಲಾಯಿಸುವಂತೆ ರೈತರು ಕೋರಿರುತ್ತಾರೆ" ಎಂದರು.

"ಆದರೆ ಮಾರ್ಗ ಬದಲಾವಣೆ ಸಾಧ್ಯವಿಲ್ಲ ಎಂದು ರೈಲ್ವೆ ಇಲಾಖೆ ಸ್ಪಷ್ಟಪಡಿಸಿರುವುದರಿಂದ ರೈತರಿಗೆ ಹೆಚ್ಚುವರಿ ಪರಿಹಾರ ನೀಡುವ ಕುರಿತು ಹಲವಾರು ಬಾರಿ ಸಭೆ ನಿಗದಿಪಡಿಸಲಾಗಿತ್ತು. ಆದರೆ ಕಾರಣಾಂತರಗಳಿಂದ ಸಾಧ್ಯವಾಗಿಲ್ಲ" ಎಂದು ಜಿಲ್ಲಾಧಿಕಾರಿಗಳು ವಿವರಿಸಿದರು.

608ರ ಪೈಕಿ 444ರಲ್ಲಿ ಕೆಲಸ ಆರಂಭಗೊಂಡಿದ್ದು, ಕೇವಲ 150 ಎಕರೆ ಜಮೀನು ಸ್ವಾಧೀನದ ಬಗ್ಗೆ ಮಾತ್ರ ಸಮಸ್ಯೆ ಉದ್ಭವಿಸಿದೆ ಎಂದು ಭೂಸ್ವಾಧೀನಕ್ಕೆ ಸಂಬಂಧಿಸಿದ ಅಧಿಕಾರಿಗಳು ತಿಳಿಸಿದರು. ಈಗಾಗಲೇ ಕಾಮಗಾರಿ ಆರಂಭಗೊಂಡಿರುವುದರಿಂದ ಆದಷ್ಟು ಬೇಗನೇ ಇನ್ನುಳಿದ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಿ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಸಭೆಯಲ್ಲಿ ಚರ್ಚೆ ನಡೆಯಿತು.

ಸಂಸದೆ ಮಂಗಲ‌ ಅಂಗಡಿ ಮಾತನಾಡಿ, "ಬೆಳಗಾವಿ-ಧಾರವಾಡ ರೈಲು ಯೋಜನೆ ಮಹತ್ವದ ಯೋಜನೆಯಾಗಿದೆ. ಆದ್ದರಿಂದ ಸಮಸ್ಯೆ ಇರುವ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸದಿದ್ದರೆ ಯೋಜನೆ ವಿಳಂಬವಾಗುತ್ತದೆ" ಎಂದರು.

ಸುರೇಶ್ ಅಂಗಡಿ ಕನಸಿನ ಯೋಜನೆ: ಬೆಳಗಾವಿ-ಕಿತ್ತೂರು-ಧಾರವಾಡ ನಡುವಿನ ನೇರ ರೈಲು ಮಾರ್ಗ ಬೆಳಗಾವಿ ಸಂಸದ, ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವರಾಗಿದ್ದ ಸುರೇಶ್‌ ಅಂಗಡಿ ಕನಸಿನ ಯೋಜನೆಯಾಗಿದೆ. ಬಿ. ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ರಾಜ್ಯ ಸರ್ಕಾರವು ಸಹ ಈ ಯೋಜನೆಗೆ ಒಪ್ಪಿಗೆ ನೀಡಿತ್ತು.

73 ಕಿ. ಮೀ. ಉದ್ದದ ಈ ರೈಲು ಮಾರ್ಗವನ್ನು 2020-21ರ ಬಜೆಟ್‌ನಲ್ಲಿ ಘೋಷಣೆ ಮಾಡಲಾಗಿತ್ತು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಶೇ 50:50ರಂತೆ ವೆಚ್ಚವನ್ನು ಹಂಚಿಕೆ ಮಾಡಿಕೊಂಡು ಯೋಜನೆಯನ್ನು ಅನುಷ್ಠಾನಗೊಳಿಸುತ್ತಿವೆ.

ಈ ನೂತನ ರೈಲು ಮಾರ್ಗ ನಿರ್ಮಾಣಕ್ಕೆ 927.42 ಕೋಟಿ ರೂ. ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. 2023-24ನೇ ಸಾಲಿನಲ್ಲಿ ಯೋಜನೆಗಾಗಿ 10 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಯೋಜನೆಗೆ ರಾಜ್ಯ ಸರ್ಕಾರವೇ ಉಚಿತವಾಗಿ ಭೂಮಿ ನೀಡಬೇಕು ಎಂಬ ಷರತ್ತಿಗೆ ರಾಜ್ಯ ಸರ್ಕಾರ 2021ರ ಡಿಸೆಂಬರ್‌ನಲ್ಲಿ ಒಪ್ಪಿಗೆ ನೀಡಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+