ಮೂರುದಿನ ಮಾತ್ರ ಶಾಲಾ ಮಕ್ಕಳಿಗೆ ಹಾಲು!

ಮಂಗಳವಾರ ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಅಂಗನವಾಡಿ ಮಕ್ಕಳು ಸೇರಿದಂತೆ ಸರ್ಕಾರಿ ಶಾಲಾ ಮಕ್ಕಳಿಗೆ ಎರಡು ದಿನಕ್ಕೊಮ್ಮೆ ನಂದಿನಿ ಹಾಲು ವಿತರಿಸುವ ಕುರಿತು ಚಿಂತನೆ ನಡೆಸಲಾಗಿದೆ. ಇದೇ ತಿಂಗಳಿನಲ್ಲಿ ಯೋಜನೆ ಜಾರಿಯಾಗಲಿದೆ ಎಂದರು.
ಈ ಯೋಜನೆಯ ರೂಪುರೇಷೆ ಸಿದ್ಧಗೊಳ್ಳುತ್ತಿದ್ದು, ಜುಲೈ 15ಕ್ಕೆ ಯೋಜನೆ ಪ್ರಾರಂಭಿಸಲಾಗುವುದು. ಯೋಜನೆ ರಾಜ್ಯದ ತುಂಬಾ ಜಾರಿಯಾಗಲು ಹಲವು ದಿನಗಳು ಬೇಕು. ಆದ್ದರಿಂದ, ಪ್ರಾಯೋಗಿಕವಾಗಿ ವಾರದಲ್ಲಿ ಮೂರು ದಿನ ಮಾತ್ರ ಹಾಲು ನೀಡಲಾಗುವುದು ಎಂದು ಹೇಳಿದರು.
ಲಕ್ಷಾಂತರ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ಕಾರಿ ಶಾಲೆಯ ಮಕ್ಕಳಿಗೆ ಉಚಿತವಾಗಿ ಹಾಲು ನೀಡುವ ಮೂಲಕ ಸದೃಢರನ್ನಾಗಿ ಮಾಡಲು ಈ ಯೋಜನೆ ಜಾರಿಮಾಡಲು ಸರ್ಕಾರ ತೀರ್ಮಾನಿಸಿದೆ ಎಂದು ತಿಳಿಸಿದರು. (ಜುಲೈನಿಂದ ಶಾಲಾ ಮಕ್ಕಳಿಗೆ ಹಾಲು : ಸಿಎಂ)
ಸ್ವ ಸಹಾಯ ಸಂಘಗಳಿಂದ ಖರೀದಿ : ಶಾಲಾ ಮಕ್ಕಳಿಗೆ ಅಗತ್ಯವಿರುವ ಹಾಲನ್ನು ಸ್ಥಳೀಯ ಮಟ್ಟದಲ್ಲಿ ಸ್ವ ಸಹಾಯ ಸಂಘದಿಂದ ಖರೀದಿಸಲು ನಿರ್ಧರಿಸಲಾಗಿದೆ. ಶಾಲೆಯ ಸುತ್ತ-ಮುತ್ತ ಸ್ವ ಸಹಾಯ ಸಂಘಗಳು ಇಲ್ಲದಿದ್ದರೆ. ಕೆಎಂಎಫ್ ಮೂಲಕ ಹಾಲು ಪೂರೈಸಲಾಗುವುದು ಎಂದರು.
ಸರ್ಕಾರ ಹಾಲಿನ ಪ್ರೋತ್ಸಾಹಧನವನ್ನು 2ರಿಂದ 4 ರೂ.ಪಾಯಿಗಳಿಗೆ ಹೆಚ್ಚಿಸಿದ್ದರಿಂದ ಪ್ರತಿನಿತ್ಯ ಕೆಎಂಎಫ್ ಗೆ 10 ಲಕ್ಷ ಲೀಟರ್ ಹಾಲು ಹೆಚ್ಚಿಗೆ ಹರಿದು ಬರುತ್ತಿದೆ. ಈ ಹಾಲನ್ನು ಶಾಲಾ ಮಕ್ಕಳಿಗೆ ನೀಡಲು ಬಳಸಿಕೊಳ್ಳಲಾಗುತ್ತದೆ ಎಂದು ಮಾಹಿತಿ ನೀಡಿದರು.
ಯೋಜನೆಯನ್ನು ಜಾರಿಗೊಳಿಸಲು ಪ್ರತಿನಿತ್ಯ 7ರಿಂದ 8 ಲಕ್ಷ ಲೀಟರ್ ಹಾಲು ಬೇಕಾಗಬಹುದು ಎಂದು ಅಂದಾಜಿಸಲಾಗಿದೆ. ಸುಮಾರು 60 ಲಕ್ಷ ವಿದ್ಯಾರ್ಥಿಗಳು ಈ ಯೋಜನೆಯ ವ್ಯಾಪ್ತಿಗೆ ಬರಲಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.
ಸಿಎಂ ಅವರ 1 ರೂ.ಗೆ ಅಕ್ಕಿ ಯೋಜನೆ ಮತ್ತು ಶಾಲಾ ಮಕ್ಕಳಿಗೆ ಹಾಲು ವಿತರಿಸುವ ಯೋಜನೆ ಜುಲೈ 1 ರಿಂದ ಜಾರಿಯಾಗಬೇಕಾಗಿತ್ತು. ಸದ್ಯ ಈ ಯೋಜನೆಗಳು ಸ್ವಲ್ಪ ಮುಂದೆ ಹೋಗಿವೆ. ತರಾತುರಿಯಲ್ಲಿ ಯೋಜನೆ ಘೋಷಿಸಿದ ಸಿಎಂ ಅದಕ್ಕೆ ಬೇಕಾದ ಸಿದ್ಧತೆಗಳನ್ನು ಮಾಡಿಕೊಂಡಿರಲಿಲ್ಲವೇ ಎಂಬ ಅನುಮಾನ ಈಗ ಹುಟ್ಟಿಕೊಂಡಿದೆ.











Click it and Unblock the Notifications