ನಿಗಮ, ಮಂಡಳಿಗಳ ಅಧ್ಯಕ್ಷ ಸ್ಥಾನದ ಬೆಲೆ 50 ಲಕ್ಷ!

ಕೇಂದ್ರ ಸರ್ಕಾರದ ನಿಗಮ, ಮಂಡಳಿಗಳ ಸದಸ್ಯತ್ವಕ್ಕೆ 50 ಲಕ್ಷ, ರಾಜ್ಯದ ಲಾಭದಾಯಕ ನಿಗಮ-ಮಂಡಳಿಗಳ ಅಧ್ಯಕ್ಷ ಹುದ್ದೆಗಳಿಗೆ 1 ಕೋಟಿ ಹಣ ನೀಡಿದರೆ, ನೀವು ಅಧ್ಯಕ್ಷ ಹುದ್ದೆ ಪಡೆಯಬಹುದು ಎಂದು ನಡೆಸಿದ ಭರ್ಜರಿ ಡೀಲಿಂಗ್ ಖಾಸಗಿ ವಾಹಿನಿಗಳ ರಹಸ್ಯ ಕಾರ್ಯಚರಣೆಯಲ್ಲಿ ಸೆರೆಯಾಗಿ, ಬಹಿರಂಗವಾಗಿದೆ.
ಆರ್ ಟಿಐ ಕಾರ್ಯಕರ್ತ ಸಾಯಿದತ್ತ ಎಂಬುವವರು ಈ ವಂಚಕರ ಜಾಲವನ್ನು ಪತ್ತೆಹಚ್ಚಿದ್ದಾರೆ. ನಿಗಮ ಮಂಡಳಿಗಳ ಹುದ್ದೆ ಕೊಡಿಸುತ್ತೇನೆ ಎಂದು ಆಕಾಂಕ್ಷಿಗಳಿಂದ ಹಣ ಪಡೆದು ವಂಚಿಸುವ ವ್ಯಕ್ತಿಗಳನ್ನು ಸಾಯಿದತ್ತ ಸಂಪರ್ಕಿಸಿ, ಡೀಲಿಂಗ್ ನ ರಹಸ್ಯಗಳನ್ನು ಬೆಳಕಿಗೆ ತಂದಿದ್ದಾರೆ.
ಆಡಳಿತ ಕೇಂದ್ರ ಟಾರ್ಗೆಟ್ : ರಾಜ್ಯದ ಆಡಳಿತ ಕೇಂದ್ರ ವಿಧಾನಸೌಧದ ಸುತ್ತಮುತ್ತಲಿನ ಪ್ರದೇಶದವೇ ವಂಚಕರ ಚಟುವಟಿಕೆಯ ಕೇಂದ್ರ ಸ್ಥಾನ. ಕಾಂಗ್ರೆಸ್ ನಾಯಕರ ಬೆಂಬಲಿಗರು ಇಲ್ಲಿಗೆ ಬಂದು, ತಮಗೆ ಅಧ್ಯಕ್ಷ ಹುದ್ದೆ, ಉಪಾಧ್ಯಕ್ಷ ಹುದ್ದೆ, ಸದಸ್ಯತ್ವ ನೀಡಿ ಎಂದು ಒತ್ತಡ ಹಾಕುತ್ತಿರುತ್ತಾರೆ.
ಇದನ್ನೇ ಬಂಡವಾಳ ಮಾಡಿಕೊಂಡು ಆಕಾಂಕ್ಷಿಗಳಿಂದ ಹಣ ದೋಚುವ ದೊಡ್ಡ ಜಾಲವೇ ಹುಟ್ಟಿಕೊಂಡಿದೆ. ರಹಸ್ಯ ಕಾರ್ಯಾಚರಣೆಯಲ್ಲಿ ಸಾಯಿದತ್ತ ಅವರು, ಪಡೆದ ಮಾಹಿತಿಯಂತೆ, ಬೆಂಗಳೂರು, ಮೈಸೂರು ಹಾಗೂ ಹುಬ್ಬಳಿಯಲ್ಲಿ ಅಧ್ಯಕ್ಷ ಹುದ್ದೆಯ ಆಕಾಂಕ್ಷಿಗಳನ್ನು ಪತ್ತೆ ಹಚ್ಚಿ, ಅವರಿಂದ ಹಣ ಪಡೆದು ವಂಚಿಸುವುದು ಇವರ ಕಾಯಕ.
ಯಾವ ಸ್ಥಾನಗಳಿಗೆ ಎಷ್ಟು : ರಹಸ್ಯ ಕಾರ್ಯಾಚರಣೆ ಪ್ರಕಾರ, ಕೇಂದ್ರ ಸರ್ಕಾರದ ಕಾರ್ಮಿಕ ಇಲಾಖೆಗೆ ಸಂಬಂಧಿಸಿದ ಸಮಿತಿಗಳು ಮತ್ತು ಮಂಡಳಿಗಳಿಗೆ ಭಾರೀ ಬೇಡಿಕೆ ಇದ್ದು, ಭರ್ಜರಿ ಬೆಲೆ ಕಟ್ಟಲಾಗುತ್ತದೆ.
ಕಾರ್ಮಿಕ ಸಂಘಟನೆಗಳು ಮತ್ತು ಸರ್ಕಾರ ನಡುವಿನ ವಿವಾದಗಳನ್ನು ನಿಗಮಗಳು ಇತ್ಯರ್ಥ ಪಡಿಸುವುದರಿಂದ ಕಾರ್ಮಿಕ ಇಲಾಖೆಗೆ ಸಂಬಂಧಿಸಿದ ಹುದ್ದೆಗಳಿಗೆ ಭಾರೀ ಬೇಡಿಕೆ ಇದೆ ಎಂದು ವಂಚಕರು ಸಾಯಿದತ್ತ ಅವರಿಗೆ ತಿಳಿಸಿರುವುದು ದಾಖಲಾಗಿದೆ.
ಹಾಗೆಯೇ ಮಂಡಳಿಗಳ ಸದಸ್ಯರಿಗೆ ದೊರೆಯುವ ಭತ್ಯೆಗಳು, ಸರ್ಕಾರ ನೀಡುವ ಸೌಕರ್ಯ ಮುಂತಾದವುಗಳ ಮೇಲೂ ಹುದ್ದೆಯ ದರವನ್ನು ನಿಗದಿಗೊಳಿಸುವುದು ಬೆಳಕಿಗೆ ಬಂದಿದೆ. ಆದ್ದರಿಂದ ಸದಸ್ಯತ್ವಕ್ಕೆ 50ಲಕ್ಷ ಮತ್ತು ಅಧ್ಯಕ್ಷ ಹುದ್ದೆಗೆ 1 ಕೋಟಿ ದರವನ್ನು ನಿಗದಿ ಮಾಡಿರುವುದು ಕಾರ್ಯಾಚರಣೆಯಲ್ಲಿ ಸೆರೆಯಾಗಿದೆ.












Click it and Unblock the Notifications