ಹಾವೇರಿ : ಆಸ್ತಿಗಾಗಿ ತಮ್ಮನಿಗೆ ಗೃಹ ಬಂಧನ

ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಬೇಲೂರಿನಲ್ಲಿ ದುರ್ಗಮ್ಮ ಎಂಬ ಪಾಪಿ ಅಕ್ಕ, ತಮ್ಮ ಹನುಮಂತಪ್ಪ ಎನ್ನುವವರನ್ನು ಇಪ್ಪತ್ತು ವರ್ಷಗಳಿಂದ ಕೂಡಿ ಹಾಕಿದ್ದಳು. ಆಸ್ತಿಯ ಆಸೆಗಾಗಿ, ದನದ ಕೊಟ್ಟಿಗೆಯಲ್ಲಿ ಸರಪಳಿಯಿಂದ ಕಟ್ಟಿಹಾಕಿ ಅಮಾನವೀಯತೆ ಪ್ರದರ್ಶಿಸಿದ್ದಳು.
ಸ್ಥಳೀಯರು ನೀಡಿದ ಮಾಹಿತಿ ಆಧರಿಸಿ ರಾಣೆಬೆನ್ನೂರು ಪೊಲೀಸರು ಹನುಮಂತಪ್ಪನನ್ನು ಇಂದು ರಕ್ಷಿಸಿದರು. ಆರೋಗ್ಯ ತಪಾಸಣೆಗಾಗಿ ಹನುಮಂತಪ್ಪ ಅವರನ್ನು ರಾಣೆಬೆನ್ನೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಊಟವೂ ಕೊಡುತ್ತಿರಲಿಲ್ಲ : ದುರ್ಗಮ್ಮ ಮತ್ತವರ ಕುಟುಂಬದವರು ಹನಮಂತಪ್ಪನಿಗೆ ಊಟವನ್ನು ನೀಡದೆ, ಮೃಗದಂತೆ ಕೂಡಿಹಾಕಿದ್ದರು. ಹನುಮಂತಪ್ಪ ಮಾನಸಿಕವಾಗಿ ಖಿನ್ನತೆಗೆ ಒಳಗಾಗಿರಬಹುದು ಎಂದು ವೈದ್ಯರು ಹೇಳಿದ್ದಾರೆ.
12 ಎಕರೆ ಒಡೆಯ : ಮೂಲತಃ ನಾಟಕ ಕಲಾವಿದನಾಗಿದ್ದ ಹನುಮಂತಪ್ಪನ ತಂದೆಗೆ 12 ಎಕರೆ ಹೊಲವಿತ್ತು. ತಂದೆ ತಾಯಿ ಮರಣಹೊಂದಿದ ನಂತರ ಆಸ್ತಿ ಹನುಮಂತಪ್ಪನ ಕೈ ಸೇರಿದೆ. ಆದರೆ, ಆತನ ಅಕ್ಕ ದುರ್ಗಮ್ಮ, ಆಸ್ತಿಯ ಮೇಲಿನ ಆಸೆಯಿಂದ ತವರಿನಲ್ಲೇ ನೆಲೆಸಿದ್ದಳು.
ದುರ್ಗಮ್ಮ ಮತ್ತು ಆಕೆಯ ಪತಿ ಹನುಮಂತಪ್ಪನಿಗೆ ಮಾನಸಿಕ ಕಿರುಕುಳ ನೀಡುತ್ತಾ, ತನ್ನ ಮನೆಯಲ್ಲಿಯೇ ಆತನನ್ನು ಮೃಗದಂತೆ ನೋಡಿಕೊಳ್ಳುತ್ತಿದ್ದಾರೆ. ಮನೆಯಿಂದ ಹೊರಗೆ ಕಳುಹಿಸಿದೆ, ದನದ ಕೊಟ್ಟಿಗೆಯಲ್ಲಿ ಸರಪಳಿ ಹಾಕಿ ಕೂಡಿ ಹಾಕಿದ್ದಾರೆ.
ಸ್ಥಳೀಯರ ಸಹಕಾರ : ಬೆಂಗಳೂರಿನ ಎರಡು ಗೃಹಬಂಧನ ಪ್ರಕರಣಗಳು ಮಾಧ್ಯಮಗಳಲ್ಲಿ ವರದಿಯಾದ ನಂತರ ಸ್ಥಳೀಯರು ಹನುಮಂತಪ್ಪನ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಆಗಮಿಸುವುದು ತಿಳಿದು ದುರ್ಗಮ್ಮ, ಸರಪಳಿ ಬಿಚ್ಚಿ ಹನುಮಂತಪ್ಪನನ್ನು ಮನೆಗೆ ಕರೆತರಲು ಯತ್ನಿಸಿದ್ದಳು.(ಮತ್ತೊಂದು ಗೃಹಬಂಧನ, ಏನಾಗಿದೆ ಇವರಿಗೆ?)












Click it and Unblock the Notifications