ಮತ್ತೊಂದು ಗೃಹಬಂಧನ, ಏನಾಗಿದೆ ಇವರಿಗೆ?

ಧಾರವಾಡದ ಮಾಳಮಡ್ಡಿ ಪ್ರದೇಶದಲ್ಲಿ ಎಂಬಿಎ ಪದವೀಧರೆಯಾದ ಸಂಧ್ಯಾಳನ್ನು(28) ಆಕೆಯ ತಾಯಿ ರೇಖಾ ಎರಡು ವರ್ಷಗಳಿಂದ ಗೃಹ ಬಂಧನದಲ್ಲಿಟ್ಟಿದ್ದರು. ಸ್ಥಳೀಯರಿಂದ ಈ ಕುರಿತು ಮಾಹಿತಿ ಪಡೆದ ಪೊಲೀಸರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳ ಸಹಾಯದಿಂದ, ಆಕೆಯನ್ನು ರಕ್ಷಿಸಿದ್ದಾರೆ.
ಸಂಧ್ಯಾಳನ್ನು ಧಾರವಾಡ ಸರ್ಕಾರಿ ಆಸ್ಪತ್ರಗೆ ಪ್ರಾಥಮಿಕ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಎರಡು ವರ್ಷಗಳಿಂದ ಕೊಠಡಿಯಲ್ಲಿದ್ದ ಸಂಧ್ಯಾ ಮಾನಸಿಕ ಖಿನ್ನತೆಗೆ ಒಳಗಾಗಿರಬಹುದು ಎಂದು ವೈದ್ಯರು ಶಂಕೆ ವ್ಯಕ್ತಪಡಿಸಿದ್ದಾರೆ.
ವಿದ್ಯಾವಂತ ತಾಯಿ : ಸಂಧ್ಯಾಳ ತಾಯಿ ಖಾಸಗಿ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮಗಳು ಮಾನಸಿಕವಾಗಿ ಅಸ್ವಸ್ಥಳಾಗಿದ್ದಾಳೆ. ಆದ್ದರಿಂದ ಆಕೆಯನ್ನು ಕೂಡಿ ಹಾಕಿದ್ದೇವೆ. ಹಲವು ವೈದ್ಯರ ಬಳಿ ತೋರಿಸಿದರೂ ಆಕೆ ಗುಣಮುಖವಾಗಿಲ್ಲ ಎಂದು ರೇಖಾ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಕತ್ತಲೆ ಕೋಣೆ ಶಿಕ್ಷೆ : ಮಗಳು ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾಳೆ ಎಂದು ಆರೋಪಿಸುವ ತಾಯಿ ಕತ್ತಲ ಕೋಣೆಯಲ್ಲಿ ಸಂಧ್ಯಾಳನ್ನು ಕೂಡಿಹಾಕಿ, ಉಟವಿಟ್ಟು ಕೆಲಸಕ್ಕೆ ತೆರಳುತ್ತಿದ್ದಳು. ಸಂಧ್ಯಾಳಿಗೆ ಬಟ್ಟೆಯನ್ನು ನೀಡದೆ, ಬೆತ್ತಲೆಯಾಗಿ ಕೂಡಿ ಹಾಕಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಬುದ್ಧಿವಂತ ಹುಡುಗಿ : ಎಂಬಿಎ ಪದವೀಧರೆಯಾದ ಸಂಧ್ಯಾ ಕಾಲೇಜಿನಲ್ಲೂ ಉತ್ತಮ ಅಂಕಗಳನ್ನು ಗಳಿಸಿ ಪ್ರತಿಭಾವಂತೆ ಎಂದು ಹೆಸರು ಪಡೆದಿದ್ದಳು. ಆದರೆ, ಅವಳು ಮಾನಸಿಕ ಸ್ಥಿಮಿತ ಕಳೆದುಕೊಳ್ಳಲು ಕಾರಣವೇನು ಎಂದು ತಾಯಿ ಬಹಿರಂಗ ಪಡಿಸಿಲ್ಲ.
ಆರ್ಥಿಕ ಮುಗ್ಗಟ್ಟು ಕಾರಣ : ಮಗಳನ್ನು ಕೂಡಿ ಹಾಕಲು ಆರ್ಥಿಕ ಮುಗ್ಗಟ್ಟು ಕಾರಣ ಎಂದು ತಾಯಿ ಹೇಳಿದ್ದಾಳೆ. ಹಲವಾರು ಆಸ್ಪತ್ರಗೆಗಳಲ್ಲಿ ಮಗಳಿಗೆ ಚಿಕಿತ್ಸೆ ಕೊಡಿಸಿದ್ದೇವೆ. ಹೆಚ್ಚಿನ ಚಿಕಿತ್ಸೆ ನೀಡಲು ಹಣದ ಕೊರತೆ ಇತ್ತು. ಆದ್ದರಿಂದ ಕೂಡಿ ಹಾಕಿದ್ದೇವೆ ಎಂದು ಅವರು ತಿಳಿಸಿದ್ದಾರೆ.
ಸ್ಥಳೀಯರಿಂದ ಮಾಹಿತಿ ಪಡೆದ ಪೊಲೀಸರು ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಗುರುವಾರ, ಸಂಧ್ಯಾಳನ್ನು ರಕ್ಷಿಸಿ, ಆಸ್ಪತ್ರೆಗೆ ದಾಖಲಿಸಿದ್ದಾರೆ.
ಕಳೆದ ಎರಡು ದಿನಗಳ ಹಿಂದೆ ಮಗಳು ಪ್ರೀತಿ ಮಾಡಿದಳು ಎಂದು ತಾಯಿ ಗೃಹ ಬಂಧನದಲ್ಲಿಟ್ಟಿದ್ದ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿತ್ತು. ತಂದೆ ಹೆಚ್ಚಿನ ಊಟ ಕೇಳುತ್ತಾರೆ ಎಂದು ಮಕ್ಕಳು ಸರಪಳಿ ಬಿಗಿದು, ಬಂಧಿಸಿದ್ದ ಘಟನೆ ಬುಧವಾರ ಬೆಳಕಿಗೆ ಬಂದಿತ್ತು. (ತಂದೆಯನ್ನು ಕಟ್ಟಿಹಾಕಿದ ಪಾಪಿ ಪುತ್ರರು)












Click it and Unblock the Notifications