ತಂದೆಯನ್ನು ಸರಪಳಿಯಿಂದ ಕಟ್ಟಿಹಾಕಿದ ಪಾಪಿ ಪುತ್ರರು

ಬನಶಂಕರಿಯ ದೇವಾಲಯದ ಸಮೀಪದ ಶಾಖಾಂಬರಿ ನಗರದಲ್ಲಿ ಮನೆಯ ಮಹಡಿಯ ಮೇಲೆ ಮಕ್ಕಳು ಕೂಡಿಹಾಕಿದ್ದ ಅನಂತಯ್ಯಶೆಟ್ಟಿ (90) ಎಂಬ ವೃದ್ಧನನ್ನು ಇಂದು ಪೊಲೀಸರು ರಕ್ಷಿಸಿ, ಜಯನಗರದ ಸರ್ಕಾರಿ ಆಸ್ಪತ್ರಗೆ ದಾಖಲಿಸಿದ್ದಾರೆ.
ಕಳೆದ ಆರು ತಿಂಗಳಿನಿಂದ ಅನಂತಯ್ಯ ಅವರನ್ನು ಬಿಸಿಲು, ಮಳೆ ಎಂದು ನೋಡದೆ ತೆರೆದ ಮಹಡಿಯ ಮೇಲೆ ಬಂಧಿಸಲಾಗಿತ್ತು. ಅನಂತಯ್ಯನಿಗೆ ನಾಲ್ಕು ಜನ ಗಂಡು ಮಕ್ಕಳಿದ್ದು, ಯಾರೊಬ್ಬರು ಅವರ ಸಹಾಯಕ್ಕೆ ಬರದೆ, ಸರಿಯಾಗಿ ಊಟ ನೀಡದೆ, ಕೂಡಿ ಹಾಕಿದ್ದರು.
ಘಟನೆಯ ಹಿನ್ನೆಲೆ : ಬುಧವಾರ ಬೆಳಗ್ಗೆ ಶಾಖಾಂಬರಿ ನಗರದ 7 ನೇ ಮುಖ್ಯರಸ್ತೆಯ ಮೂರಂತಸ್ತಿನ ಮಹಡಿಯ ಮೇಲೆ ಪೊಲೀಸರು ಮತ್ತು ಮಾಧ್ಯಮದವರು ತೆರಳಿದಾಗ ವೃದ್ಧನನ್ನು ಕೂಡಿ ಹಾಕಿರುವ ಅಮಾನವೀಯ ಘಟನೆ ಬಯಲಾಗಿದೆ.
ಮನೆಯ ಟೆರೇಸ್‌ನ ನೀರಿನ ಟ್ಯಾಂಕ್ ಕೆಳಗೆ ಕಬ್ಬಿಣದ ಗ್ರಿಲ್‌ಗಳ ಒಳಗೆ, ಒಂದು ಬಟ್ಟೆ ಹಾಸಿ ಅನಂತಯ್ಯಶೆಟ್ಟಿ ಅವರ ಕಾಲಿಗೆ ಸರಪಳಿ ಬಿಗಿದು ಪ್ರಾಣಿಗಳಂತೆ ಕಟ್ಟಿ ಹಾಕಲಾಗಿತ್ತು. ತಂದೆ ಹೆಚ್ಚಿನ ಊಟ ಕೇಳುತ್ತಾರೆ ಮತ್ತು ಮನೆ ಗಲೀಜು ಮಾಡುತ್ತಾರೆ ಎಂದು ಮಕ್ಕಳು ಈ ರೀತಿ ಕೂಡಿ ಹಾಕಿದ್ದರು.
ಬೇಕಾದಷ್ಟು ಆಸ್ತಿ ಇದೆ : ಒಟ್ಟು ನಾಲ್ಕು ಮಂದಿ ಗಂಡು ಮಕ್ಕಳ ಪೈಕಿ ಸುರೇಶ ಎಂಬ ಪುತ್ರ ಮನೆಯಲ್ಲಿ ಅನಂತಯ್ಯಶೆಟ್ಟಿ ವಾಸವಾಗಿದ್ದರು. ಅದೇ ಮನೆಯ ಕೆಳ ಅಂತಸ್ತಿನಲ್ಲಿ ಸುರೇಶ ದಿನಸಿ ಅಂಗಡಿ ನಡೆಸುತ್ತಿದ್ದಾರೆ. ಎರಡು ಅಂತಸ್ತುಗಳನ್ನು ಬಾಡಿಗೆಗೆ ನೀಡಲಾಗಿದ್ದು, ಒಳ್ಳೆಯ ಸ್ಥಿತಿವಂತರಾಗಿದ್ದಾರೆ.
ಸುಮಾರು ಆರು ತಿಂಗಳಿನಿಂದ ಹೀಗೆ ತಂದೆಯನ್ನು ಕೂಡಿಹಾಕಿ ಸುರೇಶ ಅಮಾನವೀಯ ವರ್ತನೆ ಪ್ರದರ್ಶಿಸಿದ್ದಾನೆ. ಮಾಧ್ಯಮಗಳ ಮುಂದೆ ಮಾತನಾಡಿದ ಸುರೇಶ ಜಾಸ್ತಿ ಊಟ ಕೇಳುತ್ತಾರೆ, ಆದ್ದರಿಂದ ಕಟ್ಟಿ ಹಾಕಲಾಗಿದೆ ಎಂದು ಮಾನವೀಯತೆ ಮರೆತಂತೆ ಮಾತನಾಡುತ್ತಾನೆ.
ಕುಳಿತುಕೊಳ್ಳಲೂ ಸ್ಥಳವಿಲ್ಲದಷ್ಟು ಜಾಗದಲ್ಲಿ ಶೆಟ್ಟಿ ಆರು ತಿಂಗಳು ಕಳೆದಿರುವುದರಿಂದ ಕಾಲುಗಳು ಮರಗಟ್ಟಿ ನಡೆಯುವುದು ಕಷ್ಟಕರವಾಗಿದೆ. ಪೊಲೀಸರು ವೈದ್ಯರ ಸಹಾಯದಿಂದ ಅನಂತಯ್ಯ ಶೆಟ್ಟಿ ಅವರನ್ನು ರಕ್ಷಿಸಿ, ಆಸ್ಪತ್ರಗೆ ದಾಖಲಿಸಿದ್ದಾರೆ.
ದಕ್ಷಿಣ ವಲಯ ಡಿಸಿಪಿ ರೇವಣ್ಣ ಮತ್ತು ಅವರ ಸಿಬ್ಬಂದಿ ಸ್ಥಳೀಯರು ನೀಡಿದ ಮಾಹಿತಿ ಆಧರಿಸಿ ಅನಂತಯ್ಯ ಶೆಟ್ಟಿ ಅವರನ್ನು ಬಂಧಮುಕ್ತಗೊಳಿಸಿದ್ದಾರೆ. ಘಟನೆ ಕುರಿತು ಯಾರು ದೂರು ನೀಡಿಲ್ಲ. ದೂರುಗಳು ಬಂದರೆ ಪುತ್ರರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಅವರು ತಿಳಿಸಿದ್ದಾರೆ.
ವಿರುದ್ಧ ಪ್ರಕರಣ : ಮಂಗಳವಾರ ಮಲ್ಲೇಶ್ವರಂ ನಲ್ಲಿ ತಂದೆ ಮತ್ತು ತಾಯಿ ಮಗಳು ಪ್ರೀತಿ ಮಾಡಿದಳು ಎಂದು ನಾಲ್ಕು ವರ್ಷಗಳಿಂದ ಗೃಹ ಬಂಧನದಲ್ಲಿ ಕೂಡಿಹಾಕಿದ್ದ ಪ್ರಕರಣ ಬೆಳಕಿಗೆ ಬಂದಿತ್ತು. ( ಮಗಳಿಗೇ ಗೃಹಬಂಧನ)












Click it and Unblock the Notifications