ಫಿಕ್ಸಿಂಗ್: ದಾವೂದ್ ಜತೆ ಶ್ರೀಶಾಂತ್ ಸಹ ಆರೋಪಿ
ಮುಂಬೈ, ಜೂ.4: ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೀಡಾಗಿರುವ ಕ್ರಿಕೆಟಿಗ ಶ್ರೀಶಾಂತ್ ವಿರುದ್ಧ ದೆಹಲಿ ಪೊಲೀಸರು ಮೋಕಾ ಕಾಯ್ದೆಯಡಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಇದರ ಬೆನ್ನಲ್ಲೇ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಹಾಗೂ ಛೋಟಾ ಶಕೀಲ್ ಅವರನ್ನು ಶ್ರೀಶಾಂತ್ ಜೊತೆ ಸಹ ಆರೋಪಿಗಳಾಗಿ ದೆಹಲಿ ಪೊಲೀಸರು ಹೆಸರಿಸಿದ್ದಾರೆ.
ಫಿಕ್ಸಿಂಗ್ ಪ್ರಕರಣದಲ್ಲಿ ಭೂಗತ ಜಗತ್ತಿನ ಪಾತಕಿಗಳ ನಂಟಿರುವ ಕುರಿತು ಸಂಶಯ ಈ ಹಿಂದೆ ಕೂಡಾ ವ್ಯಕ್ತವಾಗಿತ್ತು. ಬುಕ್ಕಿಗಳು ನಿರಂತರವಾಗಿ ದುಬೈ ಹಾಗೂ ಪಾಕಿಸ್ತಾನದ ಕರಾಚಿಗೆ ಕರೆ ಮಾಡಿರುವ ಬಗ್ಗೆ ಮಾಹಿತಿ ಸಿಕ್ಕಿತ್ತು. ಶ್ರೀಶಾಂತ್ ಜೊತೆ ಬಂಧನರಾದ ಬುಕ್ಕಿಗಳು ಕೂಡಾ ಈ ಬಗ್ಗೆ ಮಾಹಿತಿ ಹೊರ ಹಾಕಿದ್ದರು.
ಹೀಗಾಗಿ ಪ್ರಕರಣ ಮತ್ತೊಂದು ತಿರುವು ಪಡೆಯುತ್ತಿದ್ದು, ಶ್ರೀಶಾಂತ್ ಮತ್ತು ಸ್ಪಾಟ್ ಫಿಕ್ಸಿಂಗ್ ನಲ್ಲಿ ಬಂಧನಕ್ಕೀಡಾಗಿರುವ ಇತರೆ 25 ಆರೋಪಿಗಳ ವಿರುದ್ಧ ಮೋಕಾ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

ಈ MCOCAಕಾಯ್ದೆ ಪ್ರಕಾರ ತಪ್ಪೊಪ್ಪಿಗೆ ನೀಡುವ ಆರೋಪಿಗಳು ಅಥವಾ ಸಾಕ್ಷಿಗಳು ನ್ಯಾಯಾಲಯಕ್ಕೆ ಹಾಜರಾಗುವ ಮುನ್ನ ಉಪ ಪೊಲೀಸ್ ಆಯುಕ್ತ ಅಥವಾ ಅದೇ ಸ್ಥಾನದ ಅಧಿಕಾರಿಗಳ ಎದುರು ಹಾಜರಾಗಿ ವಿಚಾರಣೆ ಎದುರಿಸಬೇಕಿದೆ. ಇದರಿಂದ ಆರೋಪಿಗಳು ಮತ್ತು ಸಾಕ್ಷಿಗಳು ತನಿಖಾಧಿಕಾರಿಗಳ ದಿಕ್ಕು ತಪ್ಪಿಸುವ ಪ್ರಯತ್ನಕ್ಕೆ ಕಡಿವಾಣ ಬೀಳುತ್ತದೆ.
1994ರಲ್ಲಿ ಮೊದಲ ಬಾರಿಗೆ ಮಹಾರಾಷ್ಟ್ರ ರಾಜ್ಯದಲ್ಲಿ ಜಾರಿಗೆ ಬಂದ ಮೋಕಾ ಕಾಯ್ದೆ ಯೋಜಿತ ಅಪರಾಧಗಳ ಕುರಿತು ತನಿಖೆ ನಡೆಸಲು ತನಿಖಾಧಿಕಾರಿಗಳಿಗೆ ವಿಶೇಷ ಹಕ್ಕನ್ನು ನೀಡುತ್ತದೆ. ಆರಂಭದಲ್ಲಿ ಈ ಕಾಯ್ದೆಯನ್ನು ಖೋಟಾ ನೋಟು ಚಲಾವಣೆ ಮತ್ತು ಮಂಪರು ಭಯೋತ್ಪಾದನೆ (ಮಾದಕ ವಸ್ತುಗಳ ಅನಧಿಕೃತ ರವಾನೆ ಮತ್ತು ಮಾದಕ ವಸ್ತುಗಳ ಕಾನೂನು ಬಾಹಿರ ಬಳಕೆ)ಯಂತಹ ಅಪರಾಧಗಳಲ್ಲಿ ಬಳಸಲಾಗುತ್ತಿತ್ತು. ಇದೀಗ ಇದೇ ಮೊದಲ ಬಾರಿಗೆ ಕ್ರೀಡಾ ಕ್ಷೇತ್ರದ ಅಪರಾಧಗಳ ಪತ್ತೆಗಾಗಿ ಬಳಕೆ ಮಾಡಲಾಗುತ್ತಿದೆ.
ದಾವೂದ್ ನಂಟು: ಬುಕ್ಕಿಗಳ ಜೊತೆ ಡಿ ಕಂಪನಿ ನಂಟಿರುವ ಬಗ್ಗೆ ಆಗಾಗ್ಗೆ ಕೇಳಿ ಬರುತ್ತಿರುತ್ತದೆ. ಬುಕ್ಕಿ ಟಿಂಕು ಮಂಡಿ ಈ ಬಗ್ಗೆ ಮಾಹಿತಿ ನೀಡಿದ್ದು, 2008ರಲ್ಲೇ ಶ್ರೀಶಾಂತ್ ಮೇಲೆ ದಾವೂದ್ ಇಬ್ರಾಹಿಂ ತಮ್ಮ ಅನೀಶ್ ಕಣ್ಣು ಹಾಕಿ ಬಲಿ ಕಾ ಬಕ್ರಾ ಮಾಡಲು ಸಿದ್ದತೆ ನಡೆಸಿದ್ದರು ಎಂಬ ವಿಷಯ ಸ್ಪಷ್ಟವಾಗಿದೆ.
ಕ್ರಿಕೆಟಿಗರ ಜಾಮೀನು ಅರ್ಜಿ ವಜಾ: ಈ ನಡುವೆ ಜಾಮೀನು ಕೋರಿ ಶ್ರೀಶಾಂತ್, ಅಜಿತ್, ಅಂಕಿತ್ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಅರ್ಜಿಗಳನ್ನು ವಜಾಗೊಳಿಸಿದೆ. ಅಲ್ಲದೆ ಜೂನ್ 18ರವರೆಗೆ ಕ್ರಿಕೆಟಿಗರ ನ್ಯಾಯಾಂಗ ಬಂಧನವನ್ನು ವಿಸ್ತರಿಸಿದೆ.












Click it and Unblock the Notifications