ಶ್ರೀಶಾಂತನನ್ನು ಪ್ರಶ್ನೆಗಳಲ್ಲೇ ಅರೆಸ್ಟ್ ಮಾಡಿದ ಬಾಲಕ
ನವದೆಹಲಿ, ಮೇ.27: ಸ್ಪಾಟ್ ಫಿಕ್ಸಿಂಗ್ ಆರೋಪ ಹೊತ್ತಿರುವ ರಾಜಸ್ಥಾನ್ ರಾಯಲ್ಸ್ ಹಾಗೂ ಟೀಂ ಇಂಡಿಯಾದ ವೇಗಿ ಶ್ರೀಶಾಂತ್ ನಿಲ್ಲಿಸಿ ಆ ಹುಡುಗ ಧೈರ್ಯವಾಗಿ ಪ್ರಶ್ನೆ ಎಸೆದುಬಿಟ್ಟ. ತಕ್ಷಣಕ್ಕೆ ತಡವರಿಸಿದ ಶ್ರೀ ನಂತರ ಅವನ ಕೈಗೆ ಒಂದು ಚೀಟಿ ಕೊಟ್ಟ.
ಐಪಿಎಲ್ ಕಳ್ಳಾಟಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ಶ್ರೀಶಾಂತ್ ಸೇರಿದಂತೆ ಮೂವರು ಆರೋಪಿಗಳನ್ನು ಭಾನುವಾರ ಕೋರ್ಟಿಗೆ ಹಾಜರುಪಡಿಸಲಾಗಿತ್ತು.ಜಾಮೀನು ನಿರೀಕ್ಷೆಯಲ್ಲಿದ್ದ ಶ್ರೀಶಾಂತ್ ಗೆ ನ್ಯಾಯಾಂಗ ಬಂಧನ ವಿಸ್ತರಿಸಲಾಗಿದ್ದು, ಮೇ28ರ ತನಕ ಬಂಧನ ಮುಂದುವರೆಯಲಿದೆ. ಅಂಕಿತ್ ಚವ್ಹಾಣ್ ಅವರು ಜೂ.2 ರಂದು ಮದುವೆ ಇದೆ ನನಗೆ ಜಾಮೀನು ಕೊಡಿ ಎಂದು ಅರ್ಜಿ ಹಾಕಿದ್ದಾರೆ. ಮಂಗಳವಾರ ಅರ್ಜಿ ವಿಚಾರಣೆಗೆ ಬರಲಿದೆ.
ಈ ನಡುವೆ ಕೋರ್ಟ್ ಆವರಣದಲ್ಲಿ 12 ವರ್ಷದ ಬಾಲಕನೊಬ್ಬ ಶ್ರೀಶಾಂತ್ ಬಳಿ ಬಂದು 'ನೀವು ಕಳ್ಳಾಟ ಆಡಿದ್ದು ನಿಜವೇ?' ಎಂದು ಪ್ರಶ್ನಿಸಿದ್ದಾನೆ.

ತಡವರಿಸಿ ಉತ್ತರ ನೀಡಿದ ಶ್ರೀಶಾಂತ್, ನಿನ್ನ ಹೆಸರೇನು ಎಂದು ಕೇಳಿದ್ದಾರೆ. ನಂತರ ಒಂದು ಚೀಟಿಯಲ್ಲಿ "Dear Tushaar, Please do pray for me!" ಎಂದು ಬರೆದು ತಮ್ಮ ಹಸ್ತಾಕ್ಷರ ಹಾಕಿ ಬಾಲಕನ ಕೈಇಟ್ಟಿದ್ದಾರೆ.
ಸುಮಾರು ಎರಡೂವರೆ ಗಂಟೆಗಳ ಕಾಲ ಕೋರ್ಟ್ ವಿಚಾರಣೆ ನಂತರ ತನ್ನ ನೆಚ್ಚಿನ ವೇಗಿ ಶ್ರೀಶಾಂತ್ ಅವರನ್ನು ಕಣ್ತುಂಬ ನೋಡಿದ್ದಲ್ಲದೆ, ಅವರ ಹಸ್ತಾಕ್ಷರ ಪಡೆದ ಖುಷಿಯಲ್ಲಿ ತುಷಾರ್ ಉಬ್ಬಿ ಹೋಗಿದ್ದಾನೆ. ತುಷಾರ್ ಕೈಗೆ ಸಿಕ್ಕ ಚೀಟಿ ಈಗ ಸಾಮಾಜಿಕ ಜಾಲ ತಾಣದಲ್ಲಿ ಸುದ್ದಿ ಮಾಡುತ್ತಿದೆ. ಶ್ರೀಶಾಂತ್ ಪರ-ವಿರೋಧ ಪ್ರತಿಕ್ರಿಯೆಗಳು ಬರುತ್ತಿವೆ.
ಏರ್ ಫೋರ್ಸ್ ಬಾಲ್ ಭಾರತಿ ಶಾಲೆಯ ವಿದ್ಯಾರ್ಥಿಯಾದ ತುಷಾರ್, "Kya Yaar, spot fixing kyu kiya (Why did you do spot-fixing)?", ಎಂದು ಕೇಳಿದ್ದಾನೆ.
ಇದಕ್ಕೆ ಶ್ರೀಶಾಂತ್ ಮೆಲ್ಲಗೆ "Yaar, maine nahi kiya (I did not do it)." ಎಂದು ಉತ್ತರಿಸಿದ್ದಾರೆ.
ಆದರೆ, ಎಡೆಬಿಡದೆ ಶ್ರೀಶಾಂತರನ್ನು ಕಾಡಿದ ಬಾಲಕ, ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಕೇಳುತ್ತಾ ಕಾಡಿದ್ದಾನೆ. ಆದರೆ, ಪುಟ್ಟ ಅಭಿಮಾನಿಯ ಪ್ರಶ್ನೆಗೆ ಸಾವಧಾನದಿಂದ ಉತ್ತರಿಸಿದ ಶ್ರೀಶಾಂತ್, ಕೋರ್ಟಿನಲ್ಲಿ ಆಟೋಗ್ರಾಫ್ ಹಾಕಲು ಸಾಧ್ಯವಿಲ್ಲ ಸ್ವಲ್ಪ ತಡಿ ಎಂದಿದ್ದಾರೆ.
ಕೋರ್ಟ್ ಆವರಣದಿಂದ ಹೊರ ಬಂದ ಮೇಲೆ 'ಪ್ರೀತಿಯ ತುಷಾರ್..ನನಗಾಗಿ ಪ್ರಾರ್ಥಿಸು!' ಎಂದು ಬರೆದು ಹಸ್ತಾಕ್ಷರ ಹಾಕಿ ಕೊಟ್ಟ ಶ್ರೀಶಾಂತ್ ಕಣ್ಣು ಉಜ್ಜಿಕೊಂಡು ಪೊಲೀಸ್ ವ್ಯಾನ್ ಹತ್ತಿದ್ದಾರೆ. ಬಾಲಕ ಆಟೋಗ್ರಾಫ್ ಪಡೆದ ಸಂತಸದಲ್ಲಿ ಹಿಂತಿರುಗಿದ್ದಾನೆ. (ಏಜೆನ್ಸೀಸ್)












Click it and Unblock the Notifications