ಮಂಡ್ಯ ಮೈಸೂರು ಜೆಡಿಎಸ್ ಮತಗಳಿಗೆ ಬಿಎಸ್‌ವೈ ಲಗ್ಗೆ
ಕೆ.ಆರ್.ಪೇಟೆ, ಡಿ. 21: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕೆಜೆಪಿ ಪಕ್ಷಕ್ಕೆ ಭರ್ಜರಿ ಅಸ್ತಿತ್ವ ಕಲ್ಪಿಸಲು ಏಕಾಂಗಿ ಹೋರಾಟಕ್ಕಿಳಿದಿರುವ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಎದುರಾಳಿ ಜೆಡಿಎಸ್ ಮತದಾರರತ್ತ ಕಣ್ಣುನೆಟ್ಟಿದ್ದಾರೆ. ಆರಂಭದ ಹಂತದಲ್ಲಿ ಮಂಡ್ಯ, ಮೈಸೂರು ಭಾಗದಲ್ಲಿ ಬಿಎಸ್‌ವೈ ಜೆಡಿಎಸ್ ಮತಗಳಿಗೆ ಇತ್ತೀಚೆಗೆ ಲಗ್ಗೆ ಹಾಕಿದ್ದಾರೆ.
ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕೆಜೆಪಿ ಪಕ್ಷವು ಬಿಜೆಪಿ ಪಕ್ಷಕ್ಕಿಂತ ಅಧಿಕ ಸ್ಥಾನ ಗೆಲ್ಲದಿದ್ದರೆ ತಾವು ರಾಜಕೀಯದಿಂದ ನಿವೃತ್ತಿಯಾಗುವುದಾಗಿ ಯಡಿಯೂರಪ್ಪ ಸವಾಲು ಹಾಕುತ್ತಲೇ ರಣಾಂಗಣಕ್ಕಿಳಿದಿದ್ದಾರೆ. ಮಂಡ್ಯ, ಮೈಸೂರು ಮತ್ತು ಚಾಮರಾಜನಗರ ಭಾಗದಿಂದ ಸಾವಿರಾರು ಅಭಿಮಾನಿಗಳನ್ನು ಕರೆತರಲು ವಿಶೇಷ ರೈಲನ್ನೇ ಏರ್ಪಾಡು ಮಾಡಿದ್ದರು ಎಂಬುದು ಗಮನಾರ್ಹ.

ತಮ್ಮ ಹುಟ್ಟೂರು ಬೂಕನಕೆರೆ ಗ್ರಾಮದಿಂದ ಈ ಅಭಿಯಾನ ಆರಂಭಿಸಿದ್ದಾರೆ. ಹಾವೇರಿಯಲ್ಲಿ ನಡೆದ ಕರ್ನಾಟಕ ಜನತಾ ಪಕ್ಷದ ಉದ್ಘಾಟನಾ ಸಮಾರಂಭಕ್ಕೆ ಸುಮಾರು 3 ಲಕ್ಷಕ್ಕೂ ಅಧಿಕ ಜನತೆ ಸೇರಿದ್ದರು. ನನ್ನ ಜನಪ್ರಿಯತೆ ಏನೆಂಬುವುದು ಅದು ತಿಳಿಸುತ್ತದೆ. ಮುಂದಿನ ಚುನಾವಣೆಯಲ್ಲಿ ಕೆಜೆಪಿ ಪಕ್ಷವು ಬಿಜೆಪಿಗಿಂತ ಅಧಿಕ ಸ್ಥಾನ ಗೆಲ್ಲದಿದ್ದರೆ ತಾವು ರಾಜಕೀಯದಿಂದಲೇ ನಿವೃತ್ತಿಯಾಗುತ್ತೇನೆ ಎಂದು ಘೋಷಿಸಿದ್ದಾರೆ.
ಅಲ್ಲಿಂದ ಮುಂದೆ ಮೈಸೂರಿನಲ್ಲಿ ಮಾತನಾಡಿ ಮುಂದಿನ ಚುನಾವಣೆಯಲ್ಲಿ ರಾಜ್ಯದ ಎಲ್ಲ 224 ವಿಧಾನಸಭಾ ಕ್ಷೇತ್ರಗಳಲ್ಲಿ ಏಕಾಂಗಿಯಾಗಿ ಕಣಕ್ಕಿಳಿಯಲಿದ್ದು, ಜಯ ಸಾಧಿಸಲಿದೆ. ಸೂರ್ಯ, ಚಂದ್ರನಾಣೆಗೂ ಕರ್ನಾಟಕದ ಮುಂದಿನ ಮುಖ್ಯಮಂತ್ರಿ ನಾನಾಗುವುದು ಅಷ್ಟೇ ಖಚಿತ. ನಿಮ್ಮ ಬೇಡಿಕೆ ಏನೆಂದು ಹೇಳಿ. ಅದನ್ನು ಈಡೇರಿಸುವುದಾಗಿ ರಕ್ತದಲ್ಲಿ ಬರೆದು ಕೊಡುತ್ತೇನೆ ಎಂದು ಘೋಷಿಸಿದ್ದಾರೆ.
ಮೈಸೂರಿಗೆ ತೆರಳುವುದಕ್ಕೂ ಮುನ್ನ ಬಿಎಸ್‌ವೈ ಶ್ರೀರಂಗಪಟ್ಟಣದಲ್ಲಿ ಗಂಜಾಂನ ನಿಮಿಷಾಂಬ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ಟಿಪ್ಪು ಸಮಾಧಿ ಗುಂಬಸ್ ಗೆ ಭೇಟಿ ನೀಡಿ ಟಿಪ್ಪು ಸಮಾಧಿಗೆ ಹೂವಿನ ಚಾಮರ ಹೊದಿಸಿ, ಗೌರವ ಸಲ್ಲಿಸಿದರು.
ಪಾಂಡವಪುರದಲ್ಲಿ ತಮ್ಮ ನಿಜವಾದ ವರಸೆ ತೋರಿಸುತ್ತಾ ಬಿಎಸ್‌ವೈ ಜೆಡಿಎಸ್ ಗೆ ಟಾಂಗ್ ಕೊಟ್ಟರು. ಅಲ್ಲಿ ಸಾಮಾಜಿಕ ಹೋರಾಟಗಾರ ಹಾಗೂ ರಾಜ್ಯ ರೈತಸಂಘದ ವರಿಷ್ಠ ಕೆಎಸ್ ಪುಟ್ಟಣ್ಣಯ್ಯ ಅವರನ್ನು ಮೇಲುಕೋಟೆ ಜನ ಆಶೀರ್ವದಿಸಬೇಕು ಎಂದು ಪಿಟಿಶನ್ ಇಟ್ಟರು. ಅದರೊಂದಿಗೆ ಪುಟ್ಟಣ್ಣಯ್ಯ KJP ಅಭ್ಯರ್ಥಿ ಎಂದು ಪರೋಕ್ಷವಾಗಿ ಘೋಷಿಸಿದರು.
ಮಂಡ್ಯ-ಮೈಸೂರು ಭಾಗದಲ್ಲಿ ಹೀಗೆ ತಮ್ಮ ಬಲಪ್ರದರ್ಶಿಸಿರುವ ಯಡಿಯೂರಪ್ಪ, ರೈತ ನಾಯಕರನ್ನು ಹುರಿದುಂಬಿಸಿದ್ದಾರೆ.












Click it and Unblock the Notifications