ಬೆಂಗಳೂರಿಗೆ ಸಾಂತಾಕ್ಲಾಸ್ ಭರ್ಜರಿ ಗಿಫ್ಟ್
ಬೆಂಗಳೂರು, ಡಿ 21 : ಈ ಬಾರಿ ಕ್ರಿಸ್ಮಸ್ ಹಬ್ಬದ ಸಂದರ್ಭದಲ್ಲಿ ನಗರದ ಬಾಲ್ಡ್ ವಿನ್ ಮೆಥಾಡಿಸ್ಟ್ ಕಾಲೇಜು ನಗರ ನೈರ್ಮಲ್ಯ ಅರಿವಿನ ಕಾರ್ಯಕ್ರಮ ಕೈಗೊಂಡಿದೆ. ಕಾಲೇಜು ಹಾಗೂ ವಿದ್ಯಾರ್ಥಿ ಸಂಘ ಆಯೋಜಿಸಿರುವ ಕ್ರಿಸ್ಮಸ್ ಕಾರ್ಯಕ್ರಮದಲ್ಲಿ ಸಾಂತಾಕ್ಲಾಸ್ ಚಾಕಲೇಟ್, ಸಿಹಿತಿನಿಸುಗಳ ಉಡುಗೊರೆಗಳನ್ನು ಕೊಡುತ್ತಿಲ್ಲ.
ಬದಲಾಗಿ ತ್ಯಾಜ್ಯವಸ್ತುಗಳ ವಿಂಗಡಣೆಗೆ ಸಂಬಂಧಿಸಿದ ಬಿಬಿಎಂಪಿ ಹೊರಡಿಸಿರುವ ಕರಪತ್ರಗಳನ್ನು ಬಾಲ್ಡ್ ವಿನ್ ವಿದ್ಯಾರ್ಥಿಗಳು ತಾವೇ ಮುದ್ರಿಸಿದ್ದು ಕರಪತ್ರಗಳನ್ನು ತನ್ನ ಜೋಳಿಗೆಯಲ್ಲಿ ಹೊತ್ತು ಬರಲಿದ್ದಾನೆ ಸಾಂತಾ.
ಕಾಲೇಜು ಕ್ಯಾಂಪಸ್, ಜಾನ್ಸನ್ ಮಾರ್ಕೆಟ್ ಪರಿಸರದಲ್ಲಿ ಪ್ರಾಂಶುಪಾಲ ಡಾ. ಜೋಶ್ವಾಸ್ಯಾಮ್ಯುವೆಲ್ ಸಮ್ಮುಖದಲ್ಲಿ ಅಧ್ಯಾಪಕರು, ವಿದ್ಯಾರ್ಥಿಗಳು ಸೇರಿ ಸಾರ್ವಜನಿಕರಿಗೆ ಕ್ರಿಸ್ಮಸ್ ಹಬ್ಬದ ಸಂದರ್ಭದಲ್ಲಿ ಜನರಿಗೆ ಅರಿವು ಮೂಡಿಸುವ ಕಾರ್ಯಕ್ರಮ ಇದು.
ನಗರದಲ್ಲಿ ದಕ್ಷ ಕಸ ವಿಲೇವಾರಿ, ನೈರ್ಮಲ್ಯ ಕಾಪಾಡುವುದಕ್ಕೆ ಸಹಕಾರಿಯಾಗುವ ಈ ಉಡುಗೊರೆಯನ್ನು ಸಾಂತಾಕ್ಲಾಸ್ ವೇಷ ತೊಟ್ಟ ಕಾಲೇಜಿನ ವಿದ್ಯಾರ್ಥಿಗಳು ಗುರುವಾರ ಡಿಸೆಂಬರ್ 20ರಂದು ಕಾಲೇಜಿನ ಕ್ಯಾಂಪಸ್ ಮತ್ತು ಜಾನ್ಸನ್ ಮಾರುಕಟ್ಟೆ ಪ್ರದೇಶದಲ್ಲಿ ಜಾಗೃತಿಯನ್ನು ನಡೆಸಿದರು.
ತ್ಯಾಜ್ಯ ವಸ್ತುಗಳ ವಿಂಗಡಣೆ ಬಗ್ಗೆ ಸಾರ್ವಜನಿಕರಿಗೆ ಉಪಯುಕ್ತ ಮಾಹಿತಿ ನೀಡುವ ಬಿಬಿಎಂಪಿ ಹೊರಡಿಸಿರುವ ಈ ಕರಪತ್ರವನ್ನು ಕಾಲೇಜಿನ ವಿದ್ಯಾರ್ಥಿಗಳೇ ಮುದ್ರಿಸಿ ಸಿದ್ಧಪಡಿಸಿದ್ದು ಈ ಕರಪತ್ರದಲ್ಲಿ ಹಸಿ ತ್ಯಾಜ್ಯ, ಸ್ಯಾನಿಟರಿ ತ್ಯಾಜ್ಯ, ಒಣ ತ್ಯಾಜ್ಯ, ಅಪಾಯಕಾರಿ ತ್ಯಾಜ್ಯಗಳನ್ನು ಹೇಗೆ ವಿಂಗಡಿಸಬೇಕು ಎಂಬ ಮಹತ್ವದ ಮಾಹಿತಿ ಇದೆ.
ಹೀಗಾಗಿ ಬಾಲ್ಡ್ ವಿನ್ ಕಾಲೇಜಿನ ಸಾಂತಾಕ್ಲಾಸ್ ಈ ಬಾರಿ ತನ್ನ ಜೋಳಿಗೆಯಿಂದ ಚಾಕಲೇಟ್, ಸಿಹಿತಿನಿಸು ನೀಡುವುದಿಲ್ಲ, ಬದಲಿಗೆ ತ್ಯಾಜ್ಯ ವಸ್ತುಗಳ ವೈಜ್ಞಾನಿಕ ವಿಂಗಡನೆಯ ಉಪಯುಕ್ತ ಮಾಹಿತಿ ಇರುವ ಕರಪತ್ರ ನೀಡುತ್ತಾನೆ. ಸುಂದರ ನಗರ ಬೆಂಗಳೂರು ಇನ್ನಷ್ಟು ಸುಂದರವಾಗಿ ಕಾಣಲು, ರೋಗ ರುಜಿನಗಳಿಂದ ದೂರ ಇರಿಸುವಂತೆ ಮಾಡಲು ಸಾಂತಾಕ್ಲಾಸ್ ಹರಸಲಿದ್ದಾನೆ.
ಪ್ರಾಂಶುಪಾಲ ಡಾ. ಜೋಶ್ವಾ ಸ್ಯಾಮ್ಯುವೆಲ್ ಅವರು ಈ ಬಗ್ಗೆ ಹೇಳುವಂತೆ ಇತರ ಅಧ್ಯಾಪಕರು ಮತ್ತು ಹಲವು ವಿದ್ಯಾರ್ಥಿಗಳೊಂದಿಗೆ ಚರ್ಚಿಸಿ ರೂಪಿಸಿದ ಪರಿಕಲ್ಪನೆ ಇದು. ಜನರಲ್ಲಿ ತ್ಯಾಜ್ಯ ಸಂಗ್ರಹ ವಿಚಾರದಲ್ಲಿ ಇರುವ ಅಜ್ಞಾನ ದೂರ ಮಾಡುವುದು, ತ್ಯಾಜ್ಯ ವಸ್ತುಗಳನ್ನು ಹೇಗೆ ಪ್ರತ್ಯೇಕಿಸಿ ಇಡಬೇಕು, ಯಾವ ತ್ಯಾಜ್ಯ ಎಂತಹ ವಿಭಾಗಕ್ಕೆ ಸೇರುತ್ತದೆ ಎಂಬ ತಿಳುವಳಿಕೆ ನೀಡುವುದು ಸಹಿತ ಹಲವಾರು ಮಾಹಿತಿಗಳನ್ನು ಈ ಕರಪತ್ರ ಹೊಂದಿದೆ. ನಿಮಗೆ ಆ ಕರಪತ್ರ ಸಿಕ್ತಾ ?













Click it and Unblock the Notifications