ಅಶೋಕ್ ಖೇಣಿಯ 18000 ಕೋಟಿ ನೈಸ್ ಆಸ್ತಿ ವಶ?

ಅಂದು ಎಚ್ ಡಿ ದೇವೇಗೌಡರು 4000ಕ್ಕೂ ಹೆಚ್ಚು ಎಕರೆ ಪ್ರದೇಶವನ್ನು ಹೆಚ್ಚುವರಿಯಾಗಿ ನೈಸ್ ಸಂಸ್ಥೆಗೆ ಒದಗಿಸಿ, ಖೇಣಿಗೆ ನೆರವಾಗಿದ್ದರು. ಅಂತಹ ಗೌಡರು ಈಗ ಖೇಣಿ ವಿರುದ್ಧ ಧ್ವನಿ ಎತ್ತುತ್ತಿದ್ದರೆ ಅಂದು ಲೋಕೋಪಯೋಗಿ ಇಲಾಖೆಯ ಕಾರ್ಯದರ್ಶಿಯಾಗಿದ್ದ ಮೇಜರ್ ಪಿ. ಆರ್. ರಮೇಶ ಇಂದು ನೈಸ್ ಸಂಸ್ಥೆಗೆ ನಿರ್ದೇಶಕರಾಗಿ ದುಡಿಯುತ್ತಿದ್ದಾರೆ. ಖೇಣಿ, ಬೇನಾಮಿ ಆಸ್ತಿ ಗುಡ್ಡೆ ಹಾಕಿಕೊಂಡಿದ್ದು ಹೇಗೆ ಎಂಬುದಕ್ಕೆ ಇದು ಚಿಕ್ಕ ಪುರಾವೆ ಎಂದು ಕರ್ನಾಟಕ ಭ್ರಷ್ಟಾಚಾರ ವಿರೋಧಿ ಮತ್ತು ಪರಿಸರ ರಕ್ಷಣಾ ವೇದಿಯ ಅಧ್ಯಕ್ಷ ಟಿಜೆ ಅಬ್ರಹಾಂ ತಿಳಿಸಿದ್ದಾರೆ.
1995ರ ಆ ದಿನಗಳು... ಅಂದು ಸಿಎಂ ಆಗಿದ್ದ ಎಚ್ ಡಿ ದೇವೇಗೌಡರು 111 ಕಿಮೀ ದೂರದ ಬೆಂಗಳೂರು-ಮೈಸೂರು ರಸ್ತೆ ನಿರ್ಮಾಣಕ್ಕೆ ಖೇಣಿಗೆ ಅನುಮತಿ ನೀಡಿದ್ದರು. ನಂತರ ಅಧಿಕಾರಿಗಳು, ಜನಪ್ರತಿನಿಧಿಗಳನ್ನು ವಶೀಕರಿಸಿಕೊಂಡು ಅಗ್ಗದ ದರದಲ್ಲಿ ಬಡ ರೈತರಿಂದ ಸಾವಿರಾರು ಎಕರೆ ಜಮೀನನ್ನೂ ಖೇಣಿ ಸ್ವಾಹಾ ಮಾಡಿದರು.
ನೈಸ್ ರಸ್ತೆ ಜತೆಗೆ 7 ಟೌನ್ ಶಿಪ್ ಗಳನ್ನೂ ನಿರ್ಮಾಣ ಮಾಡಿಕೊಡುವುದಾಗಿ ಹೇಳಿದ ನೈಸ್ ಖೇಣಿ, HLCಯಿಂದ ಮತ್ತೆ ರಸ್ತೆಗೆಂದು 5119.37 ಎಕರೆ ಮತ್ತು 7 ಟೌನ್ ಶಿಪ್ ಯೋಜನೆಗಳಿಗೆ 25,221.37 ಎಕರೆ ಒದಗಿಸಬಹುದು ಎಂದು 1995ರ ಸೆ. 13ರಂದು ಒಪ್ಪಿಗೆ ಪಡೆದುಕೊಂಡರು. ಆದರೆ ಆರ್ಥಿಕ ಇಲಾಖೆ ಇದಕ್ಕೆ ಸಮ್ಮತಿ ಸೂಚಿಸಲಿಲ್ಲ.
ಟೌನ್ ಶಿಪ್ ಯೋಜನೆಗಳಿಗೆ 8360 ಎಕರೆ ಮತ್ತು ಬೆಂ-ಮೈ ರಸ್ತೆ ನಿರ್ಮಾಣಕ್ಕೆ 13479.37 ಎಕರೆ ಭೂಮಿಯನ್ನು ಮಾತ್ರ ಮಂಜೂರು ಮಾಡಬಹುದು ಎಂದು ತನ್ನ ಸಲಹೆ ನೀಡಿತು.
ಆದರೆ ಸಿಎಂ ಎಚ್ ಡಿ ದೇವೇಗೌಡರು 1995ರ ನ. 8ರಂದು 5 ಟೌನ್ ಶಿಪ್ ಯೋಜನೆಗಳಿಗೆ ಅಂಕಿತ ಹಾಕಿದರು. ಮತ್ತು ಅದಕ್ಕಾಗಿ 13194 ಎಕರೆ ಜಮೀನನ್ನು ಖೇಣಿಗೆ ಕರುಣಿಸಿದರು. ಇನ್ನು ರಸ್ತೆ ನಿರ್ಮಾಣಕ್ಕೆ 5119.37.37 ಎಕರೆ ಭೂಮಿಯನ್ನು ನೀಡಲು ಆದೇಶಿಸಿದರು.
ಅದಾದನಂತರ ಲೋಕೋಪಯೋಗಿ ಇಲಾಖೆಯ ಕಾರ್ಯದರ್ಶಿಯಾಗಿದ್ದ ಮೇಜರ್ ಪಿ. ಆರ್. ರಮೇಶ ನೈಸ್ ಗೆ ಒಟ್ಟಾರೆಯಾಗಿ 20,000 ಎಕರೆ ಅವಶ್ಯಕತೆಯಿದೆ ಎಂದು ಅಷ್ಟೂ ಭೂಮಿಯ ಮಂಜೂರಾತಿಗೆ ಅಂಕಿತ ಹಾಕಿದರು.
ಇದು ನಡೆದ ನೈಸ್ ವೃತ್ತಾಂತ ಇದನ್ನೆಲ್ಲ ಸುಪ್ರೀಂಕೋರ್ಟ್ ಕೋರ್ಟ್ ಗಮನಕ್ಕೆ ಈಗಾಗಲೇ ತರಲಾಗಿದೆ. ಹಾಗಾಗಿ, ವಿಚಾರಣೆ ಎಲ್ಲ ಮುಗಿದಿದ್ದು ಇಂದು ಸುಪ್ರೀಂ ತೀರ್ಪು ಹೊರಬೀಳಲಿದೆ ಎಂದು ಸಾಮಾಜಿಕ ಕಾರ್ಯಕರ್ತ ಟಿಜೆ ಅಬ್ರಹಾಂ ಹೇಳಿದ್ದಾರೆ.











Click it and Unblock the Notifications