ಶೆಟ್ಟರ್ ಗೆ ತವರಿನಲ್ಲೇ ಮಣ್ಣುಮುಕ್ಕಿಸಿದ ಯಡಿಯೂರಪ್ಪ

ಮುಂದಿನ ಚುನಾವಣೆಗೆ ತಾಲೀಮು ನಡೆಸುತ್ತಿರುವ ಯಡಿಯೂರಪ್ಪ ಅವರು ಸೈಲೆಂಟಾಗಿ ಒಂದೊಂದೇ ಜಿಲ್ಲಾ ಪಂಚಾಯಿತಿಯನ್ನು ತಮ್ಮ ಬುಟ್ಟಿಗೆ ಹಾಕಿಕೊಳ್ಳುತ್ತಿದ್ದಾರೆ. ಮೈಸೂರು, ಬೆಂಗಳೂರು ಬಳಿಕ ಈಗ ಧಾರವಾಡ ಜಿ.ಪಂ. ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳನ್ನೂ ತಮ್ಮವರಿಗೇ ದಕ್ಕುವಂತೆ ರಾಜಕೀಯ ಮಾಡಿದ್ದಾರೆ. ತನ್ಮೂಲಕ ರಾಜ್ಯ ರಾಜಕೀಯ ಭೂಪಟದಲ್ಲಿ ತಮ್ಮ ತಾಖತ್ತನ್ನು ಪಟಪಟನೆ ಪ್ರದರ್ಶಿಸಿದ್ದಾರೆ.
ಕುಂದಗೋಳ ಶಾಸಕ ಎಸ್.ಐ. ಚಿಕ್ಕನಗೌಡ ಯಡಿಯೂರಪ್ಪ ಅವರ ಸಂಬಂಧಿ. ಇನ್ನು ನಿನ್ನೆ ಜಿ.ಪಂ. ಅಧ್ಯಕ್ಷೆಯಾಗಿ ಆಯ್ಕೆಯಾದ ರತ್ನವ್ವ ಕಳ್ಳಿಮನಿ ಅವರು ಚಿಕ್ಕನಗೌಡರ ಸಮೀಪ ಬಂಧು. ಪತಿ ಗದಿಗೆಪ್ಪ ಕಳ್ಳಿಮನಿ ಒಂದು ಅವಧಿಗೆ ಈಗಾಗಲೇ ಜಿ.ಪಂ. ಸದಸ್ಯರಾದ ಅನುಭವದವರು. ಅಲ್ಲಿಗೆ ರತ್ನವ್ವ ಆಯ್ಕೆ ಬಗ್ಗೆ ಹೆಚ್ಚೇನೂ ಹೇಳುವುದು ಬೇಡ. ಫಕ್ಕೀರಪ್ಪ ಜಕ್ಕಣ್ಣವರ ಉಪಾಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.
ಒಂದೆಡೆ ಯಡಿಯೂರಪ್ಪ ಅವರು ಒಳಗೊಳಗೆ ಗೆಲುವಿನ ನಗೆ ನಗುತ್ತಿದ್ದರೆ ಬಿಜೆಪಿಗೆ ನುಂಗಲೂ ಆಗದೆ ಉಗುಳಲೂ ಆಗದೆ ಒದ್ಲಾಡುತ್ತಿದೆ. ಹೇಗೇ ಆಗಲಿ ಜಿ.ಪಂ. ಅಧಿಕಾರ ಪಕ್ಷದಲ್ಲೇ ಉಳಿಯತಲ್ಲಾ ಎಂಬ ಪುಕ್ಕಟೆ ಸಮಾಧಾನ ಬಿಜೆಪಿಯದ್ದಾಗಿದೆ. 22 ಸದಸ್ಯರ ಜಿಪಂನಲ್ಲಿ ಬಿಜೆಪಿ 15 ಸದಸ್ಯರನ್ನು, ಕಾಂಗ್ರೆಸ್ 6 ಮತ್ತು ಜೆಡಿ ಎಸ್ 1 ಸ್ಥಾನವನ್ನು ಹೊಂದಿದೆ.
ಈ ಬಾರಿ ಜಿ.ಪಂ. ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿತ್ತು. ಉಪಾಧ್ಯಕ್ಷ ಸ್ಥಾನ ಅನುಸೂಚಿತ ಜಾತಿಗೆ ಮೀಸಲಾಗಿತ್ತು. ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದರಿಂದ ಸಹಜವಾಗಿಯೇ ಭಾರಿ ಪೈಪೋಟಿ ಎದುರಾಗಿತ್ತು.
ಕಲಘಟಗಿ ತಾಲೂಕು ಮಿಶ್ರಿಕೋಟಿಯ ಯಲ್ಲಪ್ಪ ದಾಸನಕೊಪ್ಪ, ತಬಕದ ಹೊನ್ನಳ್ಳಿಯ ಬಸವರಾಜ ಕರಡಿಕೊಪ್ಪ, ಕೋಳಿವಾಡದ ಮಹಾಬಳೇಶ್ವರ ಅಣ್ಣಿಗೇರಿ, ನವಲಡಿಯ ಸುರೇಶ ಗಾಣಿಗೇರ, ದೇವಿಕೊಪ್ಪದ ಶಂಕ್ರಪ್ಪ ಅಗಡಿ ಮೊದಲಾದವರು ಅಧ್ಯಕ್ಷ ಸ್ಥಾನದ ಗದ್ದುಗೆ ಮೇಲೆ ಆಸೆಯಿಟ್ಟು ಪ್ರಯತ್ನ ನಡೆಸಿದ್ದರು.
ಇವರೊಟ್ಟಿಗೆ ರತ್ನವ್ವ ಕಳ್ಳಿಮನಿಯವರ ಹೆಸರೂ ಕೇಳಿ ಬಂದಿತ್ತು. ಇಷ್ಟೆಲ್ಲದರ ಮಧ್ಯೆಯೂ ಅಧ್ಯಕ್ಷ ಸ್ಥಾನಕ್ಕೆ ಯಲ್ಲಪ್ಪ ದಾಸನಕೊಪ್ಪ ಅವರ ಹೆಸರು ಅಂತಿಮಗೊಂಡಿತ್ತು. ಇದಕ್ಕೂ ಮೊದಲು ಎರಡು ಅವಧಿಗೆ ತಾ.ಪಂ. ಸದಸ್ಯರಾಗಿ, ಒಂದು ಅವಧಿಗೆ ಅಧ್ಯಕ್ಷರಾಗಿ ಅನುಭವ ಹೊಂದಿರುವ ಅವರ ಹೆಸರೇ ಮುಂಚೂಣಿಯಲ್ಲಿತ್ತು. ಜತೆಗೆ ದಶಕಗಳಿಂದ ಬಿಜೆಪಿಯಲ್ಲಿರುವುದು ಅವರಿಗೆ ವರದಾನವಾಗಿತ್ತು.
ಮಂಗಳವಾರ ರಾತ್ರಿ ಜಿ.ಪಂ. ಅಧ್ಯಕ್ಷ ಸ್ಥಾನಕ್ಕೆ ಹೆಸರು ಅಂತಿಮಗೊಳಿಸಲು ಹುಬ್ಬಳ್ಳಿಯಲ್ಲಿ ನಡೆದ ಸಭೆಯಲ್ಲಿ ತೀವ್ರ ಚರ್ಚೆ ನಡೆಯಿತು. ಅಂತಿಮವಾಗಿ ಕುಂದಗೋಳ ಶಾಸಕ ಚಿಕ್ಕನಗೌಡರ ಅವರು ರತ್ನವ್ವ ಕಳ್ಳಿಮನಿಯವರನ್ನೇ ಮಾಡಬೇಕು ಎಂದು ಪಟ್ಟು ಹಿಡಿದು, ಇಲ್ಲವಾದಲ್ಲಿ ನಮ್ಮ ದಾರಿ ನಮಗೆ ಎಂದು ಎದ್ದು ಹೊರನಡೆದ ಘಟನೆಯೂ ನಡೆಯಿತಂತೆ.
ಒಂದು ವೇಳೆ ರತ್ನವ್ವ ಕಳ್ಳಿಮನಿ ಹೆಸರನ್ನು ಒಪ್ಪಿಕೊಳ್ಳದೆ ಇದ್ದಲ್ಲಿ ಸಮಾನಮನಸ್ಕ ಕೆಲ ಸದಸ್ಯರೊಂದಿಗೆ ಹೊರಬಂದು ಕಾಂಗ್ರೆಸ್, ಜೆಡಿಎಸ್ ಬೆಂಬಲದೊಂದಿಗೆ ಅಧ್ಯಕ್ಷ ಸ್ಥಾನ ಪಡೆಯುವ ಇರಾದೆ ಚಿಕ್ಕನಗೌಡ್ರದಾಗಿತ್ತು ಎನ್ನಲಾಗಿದೆ.












Click it and Unblock the Notifications