ರಜಾ ಮಜಾ, ವಿರಾಮವಾಗಿ ಊರೂರು ಸುತ್ತಿ

ಈ ತಿಂಗಳಲ್ಲಿ ಅದೂ ಇದೂ ಅಂತ ಬರೋಬ್ಬರಿ ಒಟ್ಟು 11 ರಜೆಗಳು ಅನಾಯಾಸವಾಗಿ ದಕ್ಕಿವೆ. ಅಕ್ಟೋಬರ್ 2 ರಂದು ಗಾಂಧಿ ಜಯಂತಿಯೊಂದಿಗೆ ಪ್ರಾರಂಭವಾದ ರಜೆಗಳು ಅ. 13 ಎರಡನೇ ಶನಿವಾರ, ಅ. 14 ಭಾನುವಾರ, ಅ. 15 ಮಹಾಲಯ ಅಮಾವ್ಯಾಸೆ. ಮೂರು ದಿನ ರಜೆ ಅನುಭವಿಸಿಯಾಗಿದೆ.
ಇನ್ನು ಮುಂದಿದೆ ಊರಹಬ್ಬ. ಆಯುಧಪೂಜೆ- ವಿಜಯದಶಮಿ ರಜೆ ಇದೆ. ಅ. 23 ಮಂಗಳವಾರ ಆಯುಧಪೂಜೆ, ಅ. 24 ರಂದು ಬುಧವಾರ ವಿಜಯದಶಮಿ ರಜೆ ಇದೆ. ಅದಕ್ಕೂ ಮುಂಚೆ ಅ. 21 ಭಾನುವಾರದ ರಜೆ. ಅ. 22 ಸೋಮವಾರ ಒಂದ್ ದಿನ ಸಿಎಲ್ ತಗೊಂಬಿಡಿ. ನಾಲ್ಕು ದಿನಗಳ ರಜೆಯ ಯೋಗ.
ಇದಾದ ನಂತರ ಅ. 26 ರಂದು ಶುಕ್ರವಾರ ಬಕ್ರೀದ್ ರಜೆ. ಅ. 29 ರಂದು ಸರಕಾರ ವಾಲ್ಮೀಕಿ ಜಯಂತಿ ರಜೆ ಕರುಣಿಸಿದೆ. ಅ. 28 ರಂದು ಭಾನುವಾರ! ರಜೆ ಇದ್ದದ್ದೇ.
ವಿರಾಮವಾಗಿ ಊರೂರು ಸುತ್ತಿ: ಸೋ ಹೆಚ್ಚು ತಲೆ ಕೆಡಿಸಿಕೊಳ್ಳದೆ ಆರಾಮವಾಗಿ ಊರೂರು ಸುತ್ತಿ. ನೆಂಟರಿಷ್ಟರನ್ನು ಭೇಟಿ ಮಾಡಿ, ಮಾತನಾಡಿಸಿ. ಮಕ್ಕಳು ಮರಿಗಳಿಗೆ ಜಗತ್ತನ್ನು ತೋರಿಸಿ. ಪಾಪ ಅವಕ್ಕೂ ಟೆನ್ಷನ್. ದೂದ್ ಪೀನೆ ಮೇ ಟೆನ್ಷನ್, ಚಾಕಲೇಟ್ ಖಾನೆ ಮೇ ಟೆನ್ಷನ್ ಅಂತ ಅಮೀರ್ ಖಾನ್ ಯಾವಾಗಲೋ ಟೆನ್ಷನ್ ಮಾಡಿಸಿದ್ದಾರೆ.
ಮೊನ್ನೆ ಯಾವುದೋ ಸಮೀಕ್ಷೆ ಹೇಳುತ್ತಿತ್ತು, ಶಾಲಾ ಮಕ್ಕಳಿಗೂ ಟೆನ್ಷನ್ ಇರುವುದು ಖಚಿತ. ಅವುಗಳಲ್ಲಿಯೂ ಮಾನಸಿಕ ಖಿನ್ನತೆ ಮನೆ ಮಾಡಿದೆ ಎಂದು.
ಅದಕ್ಕೇ ಹೇಳಿದ್ದು ಕುಟುಂಬ ಸಮೇತ ಪ್ರವಾಸಕ್ಕೆ ಅಣಿಯಾಗಿ. ಇನ್ನೊಂದು ವಿಚಾರ ಹವಾ ಆಹ್ಲಾದಕರವಾಗಿದೆ. ಮಳೆ ರಗಳೆ ಇಲ್ಲ.
ಜಯಲಲಿತಾ ಗಲಾಟೆ ತೆಗೀತಾಳಾ ಅಂದ್ರೆ ಆಯಮ್ಮನಿಗೆ ಸಾಕಾಗುವಷ್ಟು ನೀರನ್ನು ಆ ಶಾಂತಿದೂತ ಮಳೆರಾಯನೇ ಹರಿಸಿದ್ದಾನೆ. ಸೋ, ಕಾವೇರಿ ಗಲಾಟೆಯೇನೂ ಸದ್ಯಕ್ಕೆ ಇಲ್ಲ. ಇನ್ನು ಈ ಕೆಎಸ್ಆರ್ ಟಿಸಿ ಬಸ್ಸಿನವರು ಯಾವಾಗ ಕೈಕೊಡುತ್ತಾರೋ ಗೊತ್ತಿಲ್ಲ. ಆದರೂ ಆಯುಧ ಪೂಜೆ ಸಂಭ್ರಮದಲ್ಲಿ ದಸರಾ ಬೋಸನ್ ಪಡೆದು ಅವರೂ ಎಂದಿನಂತೆ ಬಸ್ಸುಗಳನ್ನು ಓಡಿಸುತ್ತಾರೆ ಎಂಬ ಭರವಸೆ ಇದೆ.
ಮತ್ಯಾಕೆ ತಡ, ಗಂಟು ಮೂಟೆ ಕಟ್ಟಿಕೊಂಡು ಹೊರಡಿ ಪ್ರವಾಸಕ್ಕೆ... ಅಯ್ಯೋ ಒಂದರಡು ತಿಂಗಳಿಂದ ಒಂದೇ ಸಮನೆ ಬಂದ್ ಆಚರಿಸಿ, ರಜೆ ಅಂದರೆ ವಾಕರಿಕೆ ಬರುತ್ತಿದೆ ಅನ್ನುವವರಿಗೆ ಕಾಯಕವೇ ಕೈಲಾಸ. ಮುಂದಿನ ತಿಂಗಳ ರಜಾ ಕಾಲ ಹೀಗಿದೆ ನೋಡಿ. ಕನ್ನಡ ರಾಜ್ಯೋತ್ಸವ (ಗುರುವಾರ), ನರಕ ಚತುರ್ದಶಿ (ಸೋಮವಾರ) ಮತ್ತು ಬಲಿಪಾಡ್ಯಮಿ (ಬುಧವಾರ).












Click it and Unblock the Notifications