ಸೋನಿಯಾ ಗಾಂಧಿ ಆಗಮನ ರಾಹುಲ್ ಮಂತ್ರ ತಾರಕಕ್ಕೆ
ಮಂಗಳೂರು, ಅ.18: ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಇಂದು ಮಂಗಳೂರಿಗೆ ಭೇಟಿ ನೀಡಲಿದ್ದಾರೆ. ಕರಾವಳಿ ಜಿಲ್ಲೆಗೆ ಇದು ಅವರ 3ನೆಯ ಭೇಟಿಯಾಗಿದೆ. ಕಾಂಗ್ರೆಸ್ ಕಾರ್ಯಕರ್ತರ ಬೃಹತ್ ಸಮಾವೇಶದಲ್ಲಿ ಅವರು ಪಾಲ್ಗೊಳ್ಳುವ ಹಿನ್ನೆಲೆಯಲ್ಲಿ ಕರಾವಳಿಯಲ್ಲಿ ಕಾಂಗ್ರೆಸ್ ಅಲೆ/ಅಬ್ಬರ ಜೋರಾಗಿ ಕಂಡುಬರುತ್ತಿದೆ.

ಸೋನಿಯಾ ಗಾಂಧಿ ಬಜ್ಪೆ ವಿಮಾನ ನಿಲ್ದಾಣಕ್ಕೆ ಇಂದು ಮಧ್ಯಾಹ್ನ ಆಗಮಿಸಲಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರನ್ನು ನೇರವಾಗಿ ಮಾತನಾಡಿಸಲಿದ್ದಾರೆ. ಕರ್ನಾಟಕದ ಯುವ ಕಾಂಗ್ರೆಸ್ಸಿಗರೂ ರಾಹುಲ್ ಗಾಂಧಿ ರೂಪದಲ್ಲಿ ರೋಲ್ ಮಾಡಲ್ ಕಾಣುತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿ ಯುವಕರಿಗೆ ಹೆಚ್ಚಿನ ಮನ್ನಣೆ ನೀಡಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಜಿ ಪರಮೇಶ್ವರ ಅವರು ಸೋನಿಯಾ ಭೇಟಿ ಮುನ್ನಾ ಕಾಲದಲ್ಲಿ ಹೇಳಿದ್ದಾರೆ.
'ಶುದ್ಧ ಹಸ್ತದ, ಭ್ರಷ್ಟಾಚಾರ ಮುಕ್ತ, ಅರ್ಹ' ಯುವಕರಿಗೆ ಮುಂದಿನ ಚುನಾವಣೆಯಲ್ಲಿ ಮಣೆ ಹಾಕಲಾಗುವುದು ಎಂದು ಪರಮೇಶ್ವರ ಒತ್ತಿ ಹೇಳಿದ್ದಾರೆ. ಸೋನಿಯಾ ಭೇಟಿ ಬಗ್ಗೆ ಮಾತನಾಡಿದ ಅವರು ಪಕ್ಷದ ಸಮಸ್ಯೆಗಳೂ ಸೇರಿದಂತೆ ರಾಜ್ಯದ ಸಮಸ್ಯೆಗಳ ಬಗ್ಗೆಯೂ ಸೋನಿಯಾ ಅವರಿಗೆ ಮನವರಿಕೆ ಮಾಡಿಕೊಡಲಾಗುವುದು. ಸಿದ್ದರಾಮಯ್ಯ ಅವರೂ ನನ್ನೊಂದಿಗೆ ಇರುತ್ತಾರೆ ಎಂದರು.
ಮಧ್ಯಾಹ್ನ 1 ಗಂಟೆಗೆಲ್ಲ ಕಾರ್ಯಕ್ರಮ ಆರಂಭವಾಗುತ್ತದೆ. ಜಿಲ್ಲಾ ಮತ್ತು ಗ್ರಾಮ ಪಂಚಾಯಿತಿ ಸದಸ್ಯರೂ ಸೋನಿಯಾ ಮೇಡಂ ಜತೆ ಮಾತನಾಡಬಹುದು. ತದನಂತರ 4.30ಕ್ಕೆ ಬೃಹತ್ ಸಮಾವೇಶ ನಡೆಯಲಿದೆ. 15 ವರ್ಷದೊಳಗಿನ ಮಕ್ಕಳು ಕಾಂಗ್ರೆಸ್ ಸೇವಾ ದಳಕ್ಕೆ ಭರ್ತಿಯಾಗಲಿದ್ದು, ಅವರಿಗೆಲ್ಲ ಸೋನಿಯಾ ಮೇಡಂ ಪ್ರತಿಜ್ಞಾ ವಿಧಿ ಬೋಧಿಸಲಿದ್ದಾರೆ.
ನಾಳೆ ಶುಕ್ರವಾರ ಕುದ್ರೋಳಿಯಲ್ಲಿ ದಸರಾ ಸಂಭ್ರಮಾಚರಣೆಯಲ್ಲೂ ಸೋನಿಯಾ ಗಾಂಧಿ ಪಾಲ್ಗೊಳ್ಳಲಿದ್ದಾರೆ. ಸೋನಿಯಾ ಭೇಟಿ ಹಿನ್ನೆಲೆಯಲ್ಲಿ ಇಡೀ ಮಂಗಳೂರು, ಉಡುಪಿ ಮತ್ತು ಅವಿಭಜಿತ ಜಿಲ್ಲೆಯಲ್ಲಿ ಅಪೂರ್ವ ಭದ್ರತೆ ಏರ್ಪಡಿಸಲಾಗಿದೆ. ಗುಪ್ತದಳ ಮುಖ್ಯಸ್ಥ ಗೋಪಾಲ್ ಹೊಸೂರ್ ಸ್ಥಳದಲ್ಲೇ ಠಿಕಾಣಿ ಹೂಡಿದ್ದಾರೆ.
ಕೇಂದ್ರ ಸಚಿವರಾದ ಕೃಷ್ಣ, ಮೊಯ್ಲಿ, ಮುನಿಯಪ್ಪ, ಅಸ್ಕರ್ ಫರ್ನಾಂಡಿಸ್, ಜನಾರ್ದನ ಪೊಜಾರಿ, ಮಲ್ಲಿಕಾರ್ಜುನ ಖರ್ಗೆ, ಮಧುಸೂಧನ ಮಿಸ್ತ್ರಿ ಹೀಗೆ ನಾಯಕರೇ ದಂಡೇ ಮಂಗಳೂರಿಗೆ ಆಗಮಿಸಲಿದೆ.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ. ರಮಾನಾಥ್ ರೈ, ಕಲ್ಲಿಗೆ ತಾರಾನಾಥ್ ಶೆಟ್ಟಿ, ಇವಾನ್ ಡಿಸೋಜಾ, ಪಿವಿ ಮೋಹನ್, ಶಶಿಧರ ಹೆಗ್ಡೆ ಮುಂತಾದ ಸ್ಥಳೀಯ ನಾಯಕರು ಸೋನಿಯಾ ಭೇಟಿ ಯಶಸ್ವಿಗೊಳಿಸಲು ಹಗಲು ರಾತ್ರಿ ಶ್ರಮಿಸುತ್ತಿದ್ದಾರೆ.












Click it and Unblock the Notifications