ಕಥೆ ಮುಗಿದಿಲ್ಲ; ಜಗನ್ ಆಟ ಈಗಷ್ಟೇ ಆರಂಭ

ಜಗನ್ ಚಂಚಲಗೂಡ ಜೈಲು ವಾಸ ಕನಿಷ್ಠ ಜೂ. 12ರ ಉಪ ಚುನಾವಣೆವರೆಗೂ ಮುಂದುವರೆಯುವುದು ಅನಿವಾರ್ಯವಾಗಿದೆ. ಆದರೆ ಈ ಮಧ್ಯೆ ಆಂಧ್ರ ರಾಜಕೀಯ ಚಿತ್ರ ಸಂಪೂರ್ಣವಾಗಿ ಬದಲಾಗುವ ಲಕ್ಷಣಗಳಿವೆ. ಜಗನ್ ಬಂಧನವಾಗುತ್ತಿದ್ದಂತೆ ಆತನ ಅಭಿಮಾನಿಗಳು ಕೆಲ ಕಾಲ ಗಲಿಬಿಲಿಗೊಂಡಿದ್ದು ನಿಜ.
ಆದರೆ ಮರುಕ್ಷಣದಲ್ಲೇ ಜಗನ್ ತಾಯಿ ವಿಜಯಮ್ಮ ಚುನಾವಣೆ ಪ್ರಚಾರದ ಸಾರಥ್ಯಕ್ಕೆ ಇಳಿಯುತ್ತಿದ್ದಂತೆ YSR Congress ಕಾರ್ಯಕರ್ತರು ಬೀಗ ತೊಡಗಿದ್ದಾರೆ. ಇನ್ನು ಜಗನ್ ಪತ್ನಿ ಭಾರತಿ ಮತ್ತು ತಂಗಿ ಶರ್ಮಿಳಾ ರೆಡ್ಡಿ ವಿಯಜಮ್ಮ ಅಕ್ಕ-ಪಕ್ಕ ನಿಲ್ಲುತ್ತಿದ್ದಂತೆ ಕಾರ್ಯಕರ್ತರು ಜಯದ ಕೇಕೆ ಹಾಕಿದ್ದಾರೆ. ಇದಕ್ಕೆ ಸಾಕ್ಷಿ, ಸಾಕ್ಷಿ ಚಾನೆಲ್!
blessing in disguise ಎಂಬಂತೆ ಜಗನ್ ಬಂಧನವನ್ನೇ ಬಂಡವಾಳವನ್ನಾಗಿಸಿಕೊಳ್ಳುವ ಜಾಣತನವನ್ನು ಜಗನ್ ಬಂಧುಗಳು ತೋರಿದ್ದಾರೆ. ಅಷ್ಟಕ್ಕೂ ಜಗನ್ ಬಂಧನ ಅನಿರೀಕ್ಷಿತವಾಗಿಯೇನೂ ಇರಲಿಲ್ಲ. ಆ ಬಂಧನದ ಘಳಿಗೆಯನ್ನೇ (ಮೇ 27) ಜಗನ್ ಎದುರು ನೋಡುತ್ತಿದ್ದರು. ಒಂದಿನಿತೂ ಹಿಂಸಾಚಾರ ನಡೆಯದಿರುವುದೇ ಜಗನ್ ಗೆ ತಮ್ಮ ಕಾರ್ಯಕರ್ತರ ಮೇಲೆ ಎಷ್ಟು ಹಿಡಿತವಿದೆ ಎಂಬುದನ್ನು ಸಾಬೀತುಪಡಿಸಿದೆ.
ಜಗನ್ ಸಿಬಿಐ ವಿಚಾರಣೆ ಇಂದಿಗೆ ಮುಗಿಯುತ್ತಿದ್ದು, ಮತ್ತೆ ನ್ಯಾಯಾಂಗ ಬಂಧನ ನಿಮಿತ್ತ ಚಂಚಲಗೂಡ ಜೈಲು ಸೇರಲಿದ್ದಾರೆ. ಆದರೆ 18 ವಿಧಾನಸಭೆ ಸ್ಥಾನಗಳು ಮತ್ತು ನೆಲ್ಲೂರು ಲೋಕಸಭೆ ಉಪಚುನಾವಣೆ ಪ್ರಚಾರವನ್ನು ವಿಜಯಮ್ಮ ಹೊಸ ಹುರುಪಿನೊಂದಿಗೆ ಮುಂದುವರಿಸಲಿದ್ದಾರೆ.
ವಿಜಯಮ್ಮ ತಮ್ಮ ಪುತ್ರನಂತೆ ಭೀಷಣ ಭಾಷಣಕಾರರಲ್ಲದಿದ್ದರೂ ಮತದಾರರಿಗೆ ನೀಡಬೇಕಾದ ಸಂದೇಶವನ್ನು ಸ್ಪಷ್ಟವಾಗಿ ತಲುಪಿಸುತ್ತಿದ್ದಾರೆ. ಅಷ್ಟೇ ಅಲ್ಲ ತಮ್ಮ ಪತಿಯ ಅಕಾಲಿಕ ಮರಣದ ಬಗ್ಗೆ ತೀವ್ರ ಸಂದೇಹ ವ್ಯಕ್ತಪಡಿಸಿರುವ ವಿಜಯಮ್ಮ, ದೆಹಲಿ ಮೇಡಂನ ಚಿತಾವಣೆ ಮೇರೆಗೆ ತಮ್ಮ ಪತಿ ದುರಂತ ಸಾವು ಕಂಡರು ಎಂದು ಪ್ರಚಾರ ವೇಳೆ ಹೇಳುತ್ತಿದ್ದಾರೆ.
ಉತ್ತರಪ್ರದೇಶದಲ್ಲಿ ಇತ್ತೀಚೆಗೆ ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ ಮತ್ತು ರಾಹುಲ್ ಗಾಂಧಿ ತ್ರಿಮೂರ್ತಿಗಳು ಸೋಲುಂಡರು. ಆದರೆ ಹೆತ್ತಮ್ಮ ವಿಜಯಮ್ಮ, ತಂಗಿ ಶರ್ಮಿಳಾ ಮತ್ತು ಪತ್ನಿ ಭಾರತಿ ತ್ರಿಮೂರ್ತಿಗಳು ಜಗನ್ ಗೆ ಜಯ ತಂದುಕೊಡುತ್ತಾರಾ? ಕಾದು ನೋಡಬೇಕು.
YSR Congress ಪಕ್ಷದ ತಾರಾ ಪ್ರಚಾರಕಿಯಾದ ನಟಿ ರೋಜಾ ಹೇಳುವಂತೆ ಜಗನ್ನಾಟ ಮುಗಿದಿಲ್ಲ; ಈಗಷ್ಟೇ ಆರಂಭವಾಗಿದೆ.












Click it and Unblock the Notifications