ಮಹಾಂತೇಶ್ ಕೊಲೆ ಪ್ರಕರಣ ಸಿಐಡಿ ತನಿಖೆ ಇಲ್ಲ

ಭಾನುವಾರ(ಮೇ.20) ಬೆಳಗ್ಗೆ ಖಾಸಗಿ ಆಸ್ಪತ್ರೆಯಲ್ಲಿ ಮಹಾಂತೇಶ್ ಕೊನೆಯುಸಿರೆಳೆದರು. ಎಸ್ ಪಿ ಮಹಾಂತೇಶ್ ಅವರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಗ್ರೌಂಡ್ಸ್ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಪ್ರಕರಣದ ತನಿಖೆ ನಾಲ್ಕು ತಂಡಗಳನ್ನು ರಚಿಸಲಾಗಿದೆ ಎಂದು ಕೇಂದ್ರ ವಿಭಾಗದ ಡಿಸಿಪಿ ರವಿಕಾಂತೇಗೌಡ ಹೇಳಿದ್ದಾರೆ.
ಗೃಹ ಸಚಿವ ಆರ್ ಅಶೋಕ್ ಅವರ ನೇತೃತ್ವದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ನಡೆಸಲಾಗಿದೆ. ಈ ಪ್ರಕರಣದಲ್ಲಿ ರಾಜಕೀಯ ಹಸ್ತಕ್ಷೇಪಕ್ಕೆ ಆಸ್ಪದವಿಲ್ಲ. ಸಿಐಡಿ ತನಿಖೆ ಅಗತ್ಯವಿಲ್ಲ. ಆರೋಪಿಗಳನ್ನು ಶೀಘ್ರವೇ ಬಂಧಿಸಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಜ್ಯೋತಿ ಪ್ರಕಾಶ್ ಮಿರ್ಜಿ ಹೇಳಿದ್ದಾರೆ.
ಪಿಟಿಐ ವರದಿಯಂತೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ 6 ಜನರನ್ನು ಈಗಾಗಲೇ ವಶಕ್ಕೆ ತೆಗೆದುಕೊಂಡು ತನಿಖೆ ನಡೆಸಲಾಗುತ್ತಿದೆ. ಆದರೆ, ರವಿಕಾಂತೇಗೌಡ ಅವರು ತನಿಖೆ ಪ್ರಗತಿಯಲ್ಲಿದ್ದು ಸದ್ಯಕ್ಕೆ ಯಾವುದೇ ಮಾಹಿತಿ ಹೊರಹಾಕುವಂತಿಲ್ಲ ಎಂದಿದ್ದಾರೆ.
ರಿಯಲ್ ಎಸ್ಟೇಟ್ ಮಾಫಿಯಾ ಕಾರಣವೇ?: ಬೆಂಗಳೂರಿನ ಗೃಹ ನಿರ್ಮಾಣ ಸಹಕಾರ ಸಂಘ ಹಾಗೂ ರಿಯಲ್ ಎಸ್ಟೇಟ್ ಮಾಫಿಯಾಗ ಮಹಾಂತೇಶ್ ಅವರು ಬಲಿಯಾಗಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.
ಸುಮಾರು 3.1 ಲಕ್ಷ ಕೋಟಿ ರು.ಗೂ ಅಧಿಕ ಅವ್ಯವಹಾರ ನಡೆಯುತ್ತಿದ್ದು, ಹಲವಾರು ರಾಜಕಾರಣಿಗಳು ನೇರ ಸಂಪರ್ಕದಲ್ಲಿ ದಂಧೆ ವ್ಯಾಪಕವಾಗಿ ಹಬ್ಬುತ್ತಿದೆ.
ನಗರದ ಸುಮಾರು 20 ಸಾವಿರ ಎಕರೆ ಭೂಮಿ ಹೌಸಿಂಗ್ ಸೊಸೈಟಿ ವಶದಲ್ಲಿದೆ. ಇದಲ್ಲದೆ ವಕೀಲರ ಸಂಘ, ಸರ್ಕಾರಿ ನೌಕಕರ ಸಂಘ ಸೇರಿದಂತೆ ಹಲವಾರು ಸಂಘಗಳ ವತಿಯಿಂದ ನೀಡುವ ಭೂಮಿಯಲ್ಲಿ ಅವ್ಯವಹಾರ ನಡೆದಿರುವುದು ಬೆಳಕಿಗೆ ಬಂದಿದೆ.
ಮಹಾಂತೇಶ್ ಅವರು ಸಹಕಾರ ಇಲಾಖೆಯ ಆಡಿಟ್ ವಿಭಾಗದ ಡೆಪ್ಯುಟಿ ಡೈರೆಕ್ಟರ್ ಆಗಿದ್ದರು. ಸಹಕಾರ ಸಂಘಗಳಿಗೆ ಒದಗಿಸಲಾಗಿದ್ದ ವಸತಿ ನಿವೇಶನಗಳ ಹಂಚಿಕೆಯಲ್ಲಿ ಆಗಿರುವ ಅವ್ಯವಹಾರಗಳನ್ನು ಮಹಾಂತೇಶ್ ಬಯಲಿಗೆಳೆದಿದ್ದರು.
ಭೂ ಕಬಳಿಕೆ ಮಾಡುವ ಕಳ್ಳರ ವಿರುದ್ಧ ನಿಂತಿದ್ದು ಮಹಾಂತೇಶ್ ಅವರಿಗೆ ಮುಳುವಾಯಿತು. ಬನ್ನೇರುಘಟ್ಟ ರಸ್ತೆ ಬಳಿ ಮೊದಲ ಬಾರಿಗೆ ದಾಳಿ ನಡೆದಾಗಲೇ ಸರ್ಕಾರ ಈ ದಕ್ಷ ಅಧಿಕಾರಿಗೆ ಸೂಕ್ತ ಭದ್ರತೆ ಒದಗಿಸಿದ್ದರೆ ಇವತ್ತು ಈ ದುರಂತ ನೋಡುವ ದೌರ್ಭಾಗ್ಯ ಒದಗಿಬರುತ್ತಿರಲಿಲ್ಲ.












Click it and Unblock the Notifications