ಹನುಮಗಿರಿಯಲ್ಲಿ ಹೈಸ್ಕೂಲ್ ವಿದ್ಯಾರ್ಥಿ ಬರ್ಬರ ಹತ್ಯೆ

ಇಟ್ಟಮಡುವಿನ ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದ ಅಭಿಷೇಕ್ ನನ್ನು ಹೊಸಕೆರೆಹಳ್ಳಿ ಬಳಿಯ ಹನುಮಗಿರಿಯಲ್ಲಿ ಕೊಂದು ಶವವನ್ನು ಸುಬ್ರಮಣ್ಯಪುರ ಬಳಿಯಲ್ಲಿ ಸೋಮವಾರ(ಮಾ.26) ಸಂಜೆ ಎಸೆದು ಆರೋಪಿಗಳು ಪರಾರಿಯಾಗಿದ್ದಾರೆ.
ಮಂಗಳವಾರ ಬೆಳಗ್ಗೆ ಸುಮಾರು 7 ಗಂಟೆಗೆ ಅಭಿಷೇಕ್ ಶವ ಪತ್ತೆಯಾಗಿದ್ದು, ಸುಬ್ರಮಣ್ಯ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ. ಪ್ರಕರಣದ ಸಂಬಂಧ ಇಬ್ಬರು ಬಾಲಕರನ್ನು ಬಂಧಿಸಲಾಗಿದ್ದು, ಇನ್ನು ಇಬ್ಬರಿಗಾಗಿ ಹುಡುಕಾಟ ಜಾರಿಯಲ್ಲಿದೆ ಎಂದು ಠಾಣಾಧಿಕಾರಿ ಹೇಳಿದ್ದಾರೆ.
ಘಟನೆ ವಿವರ: ಇಟ್ಟಮಡುವಿನ ನಿವಾಸಿಗಳಾದ ವೀರೇಗೌಡ ಹಾಗೂ ಲಕ್ಷ್ಮಮ್ಮ ಅವರ ಮಗ ಅಭಿಷೇಕ್ ನನ್ನು ಆತನ ಸ್ನೇಹಿತರು ಈಜಾಟವಾಡಲು ಬಾ ಎಂದು ಕರೆದದ್ದಾರೆ.
ಆದರೆ, ಈಜಲು ಬರುವುದಿಲ್ಲ ಹೋಗಿ ಎಂದು ಅಭಿಷೇಕ್ ಹೇಳಿದ್ದಾನೆ. ಆದರೂ ಆತನನ್ನು ಪುಸಲಾಯಿಸಿ ಆರೋಪಿ ಹುಡುಗರು ಹನುಮಗಿರಿಗೆ ಕರೆದೊಯ್ದಿದ್ದಾರೆ.
ಸಂಜೆ ವೇಳೆ ಯಾರೂ ಇಲ್ಲದ ಸಮಯ ನೋಡಿ ಜ್ಯೂಸ್ ನಲ್ಲಿ ಡ್ರಿಂಕ್ಸ್ ಮಿಕ್ಸ್ ಮಾಡಿ ಅಭಿಷೇಕ್ ಗೆ ಕುಡಿಸಲಾಗಿದೆ. ನಂತರ ಆತ ಪ್ರಜ್ಞೆ ತಪ್ಪಿರುವುದು ಖಾತ್ರಿಯಾದ ಮೇಲೆ ಆತನನ್ನು ಅಮಾನುಷವಾಗಿ ಕೊಚ್ಚಿ ಕೊಲೆ ಮಾಡಲಾಗಿದೆ. ನಂತರ ಬೆಟ್ಟದಿಂದ ಕೆಳಗಿಳಿದು ಶವವನ್ನು ಎಸೆದು ಪರಾರಿಯಾಗಿದ್ದಾರೆ.
ಅಭಿಷೇಕ್ ಕೊಲೆಗೆ ಹಳೆ ದ್ವೇಷವೇ ಕಾರಣವೇ? ಈಜಲು ಬರೋದಿಲ್ಲ ಎಂದಿದ್ದಕ್ಕೆ ಕೋಪಗೊಂಡು ಕೊಲೆ ಮಾಡಲಾಯಿತೇ? ಬಾಲಕರ ಕೈಗೆ ಮಾರಕಾಸ್ತ್ರಗಳು ಸಿಕ್ಕಿದ್ದು ಹೇಗೆ? ಶವವನ್ನು ಹೇಗೆ ಹೊತ್ತೊಯ್ದರು? ಕೊಲೆ ನಿಖರವಾದ ಕಾರಣ ಏನು? ಎಂಬ ಪ್ರಶ್ನೆಗಳನ್ನು ಇಟ್ಟುಕೊಂಡು ಸುಬ್ರಮಣ್ಯಪುರ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಕೊಲೆಯನ್ನು ಕಣ್ಣಾರೆ ನೋಡಿದ ಸಾಕ್ಷಿಯೊಬ್ಬ ಇದ್ದಾನೆ ಎಂಬ ಮಾಹಿತಿ ಸಿಕ್ಕಿದೆ. ಆದರೆ, ಹೆಚ್ಚಿನ ವಿವರಗಳು ಲಭ್ಯವಾಗಿಲ್ಲ.












Click it and Unblock the Notifications