ಯಡ್ಡಿ ಸಿಎಂ ಆಗೋಕೆ ಮುಂಚೆ ಸನ್ಮಾನಕ್ಕೆ ಸಿದ್ಧತೆ

ಮೊದಲಿಗೆ ಹುಬ್ಬಳ್ಳಿಯಂತೆ ಶಿವಮೊಗ್ಗದಲ್ಲೂ ಶಕ್ತಿ ಪ್ರದರ್ಶನ ಮಾಡಲು ಯಡಿಯೂರಪ್ಪ ಬೆಂಬಲಿಗರು ನಿರ್ಧರಿಸಿದ್ದರು ಎನ್ನಲಾಗಿದೆ. ಆದರೆ, ನಂತರ ಯಡಿಯೂರಪ್ಪ ಅವರು ಸಿಎಂ ಸ್ಥಾನಕ್ಕೇರುವುದು ಖಚಿತ ಎಂಬ ಆಶಯ ಹೊಂದಿರುವ ಅಭಿಮಾನಿಗಳು 'ಸಿಎಂ ಯಡಿಯೂರಪ್ಪ ಅವರಿಗೆ ಬೃಹತ್ ಅಭಿನಂದನಾ ಸಮಾರಂಭ' ಆಯೋಜನೆಯಲ್ಲಿ ತೊಡಗಿದ್ದಾರೆ.
ಮಾ.25ರಂದು, ಶಿವಮೊಗ್ಗದಲ್ಲಿ ಬೃಹತ್ ಅಭಿನಂದನಾ ಸಮಾರಂಭ ಆಯೋಜಿಸಿ, ಹುಬ್ಬಳ್ಳಿಯಲ್ಲಿ ನಡೆದ ಸಮಾವೇಶಕ್ಕಿಂತಲೂ ಅದ್ದೂರಿಯಾಗಿ ಸಮಾವೇಶ ನಡೆಸಲು ನಿರ್ಧರಿಸಲಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಲೋಕಸೇವಾ ಆಯೋಗದ ಮಾಜಿ ಸದಸ್ಯ ರುದ್ರೇಗೌಡರ ನೇತೃತ್ವದಲ್ಲಿ ಈ ಸಭೆ ನಡೆದಿದೆ. ಯಡಿಯೂರಪ್ಪನವರ ಕಟ್ಟಾ ಬೆಂಬಲಿಗರಾದ ಜ್ಯೋತಿಪ್ರಕಾಶ್, ರಾಜ್ಯ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಆರ್.ಎಂ. ಮಂಜುನಾಥ್ ಗೌಡ, ನಗರಸಭೆಯ ಮಾಜಿ ಅಧ್ಯಕ್ಷ ಸುಭಾಷ್, ಜಿಲ್ಲಾ ಗ್ಯಾರೇಜ್-ವರ್ಕ್‌ಶಾಪ್ ಅಸೋಸಿಯೇಷನ್‌ನ ಪ್ರಧಾನ ಕಾರ್ಯದರ್ಶಿ ಧನಂಜಯ, ಮುಖಂಡರಾದ ಬಳ್ಳೆಕೆರೆ ಸಂತೋಷ್, ಐಡಿಯಲ್ ಗೋಪಿ ಮೊದಲಾದವರು ಸಭೆಯಲ್ಲಿ ಉಪಸ್ಥಿತರಿದ್ದರು. ಹಾಗೆಯೇ ಜಿಲ್ಲೆಯ ವಿವಿಧ ತಾಲೂಕುಗಳಿಂದಲೂ ನೂರಾರು ಬೆಂಬಲಿಗರು ಈ ಸಭೆಗೆ ಆಗಮಿಸಿದ್ದರು ಎಂದು ಮೂಲಗಳು ಹೇಳಿವೆ.
ಸಮಾವೇಶ ಎಲ್ಲಿ ನಡೆಸಬೇಕು ಎಂಬುದನ್ನು ಇನ್ನೂ ನಿರ್ಧರಿಸಿಲ್ಲ. ನೆಹರೂ ಕ್ರೀಡಾಂಗಣ, ಎನ್‌ಇಎಸ್ ಮೈದಾನ ಅಥವಾ ಟಿಪ್ಪುನಗರದ ಚಾಂದಿನಿ ಮೈದಾನದಲ್ಲಿ ಸಮಾವೇಶ ಆಯೋಜಿಸುವ ಕುರಿತು ಚಿಂತನೆ ನಡೆಯುತ್ತಿದೆ ಎಂದು ಹೆಸರು ಹೇಳಲಿಚ್ಛಿಸದ ಯಡಿಯೂರಪ್ಪ ಬೆಂಬಲಿಗರೊಬ್ಬರು ತಿಳಿಸಿದ್ದಾರೆ.
ಆದರೆ, ರೇಣುಕಾಚಾರ್ಯ, ಬೇಳೂರು ಗೋಪಾಲಕೃಷ್ಣ ಅವರ ಸಲಹೆ ಸಿಕ್ಕ ನಂತರ ಸಮಾವೇಶದ ರೂಪುರೇಖೆಯ ಕುರಿತು ಅಂತಿಮ ತೀರ್ಮಾನವನ್ನು ಕೈಗೊಳ್ಳುವ ಸಾಧ್ಯತೆಯಿದೆ.












Click it and Unblock the Notifications